ಮೊಟ್ಟೆ ಖರೀದಿ ಹಗರಣ ಆರೋಪ; ವರದಿ ಕೇಳಿದ ಲೆಕ್ಕಪತ್ರ ಸಮಿತಿ

ಬೆಂಗಳೂರು, ಆಗಸ್ಟ್ 06; ಮಾತೃಪೂರ್ಣ ಯೋಜನೆಯಡಿ ಕೋಳಿ ಮೊಟ್ಟೆ ಖರೀದಿ ಮಾಡುವಾಗ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ದಾಖಲೆಗಳ ಸಮೇತ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಲಾಗಿದೆ.

ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮೊಟ್ಟೆ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಒಳಗೊಂಡ ಸಮಗ್ರ ವರದಿ ಸಲ್ಲಿಸುವಂತೆ ಇಲಾಖೆಗೆ ಸೂಚನೆ ನೀಡಿದೆ. ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ವಿರುದ್ಧ ಆರೋಪ ಕೇಳಿ ಬಂದಿತ್ತು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ರಾಮಲಿಂಗಾ ರೆಡ್ಡಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ಕೋಳಿ ಮೊಟ್ಟೆ ಖರೀದಿ ಹಗರಣದ ಬಗ್ಗೆ ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸಿ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಲಾಯಿತು" ಎಂದು ಹೇಳಿದ್ದಾರೆ.

Scam In Egg Procurement Public Accounts Committee Seeks Report

ಇಲಾಖೆ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಕೋಳಿ ಮೊಟ್ಟೆ ಟೆಂಡರ್‌ಗೆ ಕಮೀಷನ್ ಕೇಳಿದ್ದಾರೆ ಎನ್ನಲಾದ ವಿಚಾರ ಖಾಸಗಿ ಸುದ್ದಿ ವಾಹಿನಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿತ್ತು. ಕಾಂಗ್ರೆಸ್ ಈ ವಿಚಾರದಲ್ಲಿ ಪ್ರತಿಭಟನೆ ಸಹ ನಡೆಸಿತ್ತು. ಸಚಿವರ ರಾಜೀನಾಮೆಗೆ ಒತ್ತಾಯಿಸಿತ್ತು. ಅಷ್ಟರಲ್ಲಿಯೇ ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಸಚಿವ ಸಂಪುಟ ವಿಸರ್ಜನೆಯಾಗಿತ್ತು.

ಸಚಿವರು ಮೊಟ್ಟೆ ಖರೀದಿಗಾಗಿ ಏಕ ಟೆಂಡರ್‌ಗೆ ಸಚಿವ ಸಂಪುಟದಲ್ಲಿ ಪ್ರಸ್ತಾಪವನ್ನೂ ಇಟ್ಟಿದ್ದರು. ಆದರೆ ರಹಸ್ಯ ಕಾರ್ಯಾಚರಣೆ ಪ್ರಸಾರವಾದ ಬಳಿಕ ಸಂಪುಟಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ವಾಪಸ್ ಪಡೆಯಲಾಗಿದೆ ಎಂಬುದು ಆರೋಪ. ಆದ್ದರಿಂದ ಈ ಕುರಿತು ಸಂಪೂರ್ಣ ವರದಿ ನೀಡುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.

ನಿಯಮವೇನು?; ಸರ್ಕಾರದ ನಿಯಮದ ಅನ್ವಯ ಮಾತೃಪೂರ್ಣ ಮತ್ತು ಸೃಷ್ಟಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಮೂಲಕ ನೀಡಲಾಗುವ ಕೋಳಿ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆ ಸ್ಥಳೀಯವಾಗಿ ಖರೀದಿ ಮಾಡಬೇಕು. ಫಲಾನುಭವಿಗಳಿಗೆ ವಿತರಣೆ ಮಾಡಿದ ಬಳಿಕ ಖರೀದಿಸಲಾದ ಮೊಟ್ಟೆಯ ಹಣವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬಾಲ ವಿಕಾಸ ಸಮಿತಿ ಜಂಟಿ ಖಾತೆ ಜಮೆ ಮಾಡುತ್ತಾರೆ.

ಆದರೆ ಸಚಿವರು ನಿಯಮ ಉಲ್ಲಂಘನೆ ಮಾಡಿ ಕೋಳಿ ಮೊಟ್ಟೆ ಪೂರೈಕೆಗೆ ಏಕ ಟೆಂಡರ್ ಕರೆದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಅಷ್ಟರಲ್ಲಿ ಸಂಪುಟ ವಿಸರ್ಜನೆಗೊಂಡಿತು. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಶಶಿಕಲಾ ಜೊಲ್ಲೆ ಸೇರಿದ್ದಾರೆ. ಆದರೆ ಖಾತೆ ಹಂಚಿಕೆಯಾಗಿಲ್ಲ.

ಸ್ಪಷ್ಟನೆ ನೀಡಿದ್ದರು; ರಹಸ್ಯ ಕಾರ್ಯಾಚರಣೆ ಪ್ರಸಾರವಾದ ಬಳಿಕ ಶಶಿಕಲಾ ಜೊಲ್ಲೆ ಸ್ಪಷ್ಟನೆ ನೀಡಿದ್ದರು. "ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ" ಎಂದು ಹೇಳಿದ್ದರು.

"ನನ್ನ ತೇಜೊವಧೆ ಪ್ರಯತ್ನ ನಡೆಸಲಾಗುತ್ತಿದೆ. ಮಹಿಳೆಯರು, ವೃದ್ಧರು, ಮಕ್ಕಳು, ವೃದ್ಧರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಮೊಟ್ಟೆ ಖರೀದಿಗೆ ಇದುವರೆಗೂ ಯಾವುದೇ ಟೆಂಡರ್ ಕರೆದಿಲ್ಲ. ಟೆಂಡರ್ ಪಡೆಯಲು ವೈಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ" ಎಂದು ಸ್ಪಷ್ಟಪಡಿಸಿದ್ದರು.

"ನಮ್ಮ ಪಕ್ಷದ ಶಾಸಕರಾದ ಪರಣ್ಣ ಮುನವಳ್ಳಿ ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ. ನನ್ನ ವಿರುದ್ಧ ಆಧಾರಹಿತ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ಹೋರಾಟವನ್ನು ಮಾಡಲು ಚಿಂತನೆ ಮಾಡುತ್ತಿದ್ದೇನೆ" ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+