ಎಸ್‍ಸಿ ಒಳಮೀಸಲಾತಿ ಬೇಡಿಕೆ; ಉಪ ಸಮಿತಿ ರಚನೆ ಮಾಡಿ ಸರ್ಕಾರದ ಆದೇಶ
ಬೆಂಗಳೂರು,ಡಿಸೆಂಬರ್ 14: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುವ ಕುರಿತು ರಾಜ್ಯ ಸರ್ಕಾರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದೆ. ನ್ಯಾ ಎಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಸರ್ಕಾರ ಈ ನಿರ್ಧಾರವನ್ನ ಕೈಗೊಂಡಿದೆ.
ಇನ್ನೂ ಸಮಿತಿಗೆ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷರಾದರೆ ಸಚಿವರಾದ ಗೋವಿಂದ ಎಂ.ಕಾರಜೋಳ, ಎಸ್.ಅಂಗಾರ, ಪ್ರಭು ಚವ್ಹಾಣ್ ಹಾಗೂ ಡಾ.ಕೆ.ಸುಧಾಕರ್ ಅವರು ಸದಸ್ಯರಾಗಿದ್ದಾರೆ. ಈ ಸಮಿತಿಯು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಸಂಬಂಧ ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸುಗಳನ್ನು ಮಾಡಬೇಕೆಂದು ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ.
ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ವರದಿಯನ್ನ ಸಲ್ಲಿಸಲಾಗಿತ್ತು. ಪರಿಶಿಷ್ಟ ಜಾತಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿತ್ತು. ಎ ವರ್ಗದಲ್ಲಿನ ಎಡಗೈ ಉಪ ಪಂಗಡಗಳಿಗೆ ಶೇ. 6ರಷ್ಟು, ಬಿ ವರ್ಗದಲ್ಲಿ ಸೇರ್ಪಡೆಯಾಗಲಿದೆ ಎಂದು ಹೇಳಲಾದ ಬಲಗೈ ಉಪಪಂಗಡಗಳಿಗೆ ಶೇ.5 ರಷ್ಟು, ಭೋವಿ ಮತ್ತು ಲಂಬಾಣಿ ಸಮುದಾಯಕ್ಕೆ ಶೇ.3 ಹಾಗೂ ಇತರ ಉಪಜಾರಿಗಳಿಗೆ ಶೇ.1 ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಆಯೋಗ ಶಿಫಾರಸ್ಸು ಮಾಡಿತ್ತು. ಆದರೆ ಈ ಆಯೋಗದ ಶಿಫಾರಸ್ಸಿಗೆ ಪರ- ವಿರೋಧ ವ್ಯಕ್ತವಾಗಿದ್ದರಿಂದ ವರದಿಯನ್ನ ಅನುಷ್ಠಾನ ಮಾಡಲು ಸರ್ಕಾರ ಹಿಂದೇಟು ಹಾಕಿತ್ತು. ಇದೀಗ ರಾಜ್ಯ ಸರ್ಕಾರ ಸಂಪುಟ ಉಪಸಮತಿಯನ್ನು ರಚಿಸಿರುವುದು ವಿಶೇಷವಾಗಿದೆ.

ನ್ಯಾ ಎಜೆ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಡಿಸೆಂಬರ್ 11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಂಘರ್ಷ ಸಮಿತಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮಿತಿ ನಡೆಸಿತ್ತು.

ಈ ವಿಚಾರವಾಗಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡುವುದಾಗಿ ಹೇಳಿದ್ದಾರೆ.












Click it and Unblock the Notifications