ಮಹದಾಯಿ; ಅಧಿಸೂಚನೆ ಹೊರಡಿಸಲು ಸುಪ್ರೀಂ ನಿರ್ದೇಶನ
ಬೆಂಗಳೂರು, ಫೆಬ್ರವರಿ 20: ಮಹದಾಯಿ ಯೋಜನೆ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಜುಲೈ 15ರಿಂದ ವಿವಾದದ ಕುರಿತು ನಿರಂತರ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
ಸುಪ್ರೀಂಕೋರ್ಟ್ ಗೆಜೆಟ್ ಅಧಿಸೂಚನೆ ಪ್ರಕಟಿಸಲು ಅವಕಾಶ ನೀಡಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಗುರುವಾರ ಪ್ರಕಟಿಸಿದರು. ಇದರಿಂದಾಗಿ ಯೋಜನೆ ವಿಚಾರದಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ.

ಕರ್ನಾಟಕ ಸರ್ಕಾರ ಮಹದಾಯಿ ಯೋಜನೆ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ವಿವಾದ ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿತ್ತು.
ಮಹದಾಯಿ ಯೋಜನೆಗೆ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿದ್ದವು. ಆದ್ದರಿಂದ, ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಲು ವಿಳಂಬ ಮಾಡುತ್ತಿತ್ತು.
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, "ಇದು ಸಿಹಿ ಸುದ್ದಿ, ನಮ್ಮ ಪಾಲಿನ 14.2 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ" ಎಂದು ಹೇಳಿದರು.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ನಡುವೆ ಮಹದಾಯಿ ಯೋಜನೆ ಬಗ್ಗೆ ವಿವಾದವಿದೆ. ಈ ಕುರಿತು ಸುಪ್ರೀಂಕೋರ್ಟ್‌ಗೆ ಸಹ ಅರ್ಜಿ ಸಲ್ಲಿಸಲಾಗಿದೆ. ಜುಲೈ 15ರಿಂದ ಈ ಅರ್ಜಿಗಳ ವಿಚಾರಣೆ ನಿರಂತರವಾಗಿ ನಡೆಯಲಿದೆ.
ಮೂರು ರಾಜ್ಯಗಳ ನಡುವಿನ ವಿವಾದದ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ್ದ ಮಹದಾಯಿ ನ್ಯಾಯಾಧೀಕರಣ 2018ರಲ್ಲಿ ಅಂತಿಮ ತೀರ್ಪನ್ನು ಪ್ರಕಟಿಸಿತ್ತು. ಮೂರು ರಾಜ್ಯಗಳಿಗೆ ನೀರನ್ನು ಹಂಚಿಕೆ ಮಾಡಿತ್ತು.












Click it and Unblock the Notifications