Santosh Lad: ಬಿಜೆಪಿ ನಾಯಕರು ಯಾರ ಪರ-ಯಾರ ವಿರುದ್ಧ: ಸಚಿವರು ಹೀಗೆ ಪ್ರಶ್ನಿಸಿದ್ದೇಕೆ?
ಹುಬ್ಬಳ್ಳಿ, ಫೆಬ್ರವರಿ 24: ಮೊದಲ ಉಪ ಪ್ರಧಾನಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬ್ಯಾನ್ ಮಾಡಿದ್ದರು. ಆದರೆ, ಅವರೇ ಇದೀಗ ಪಟೇಲರ ಬೃಹತ್ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಬಿಜೆಪಿಗರ ಐಡಿಯಾಲಜಿ ನನಗೆ ಅರ್ಥವಾಗುತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಅವರು ಬಿಜೆಪಿ ಕಾಲೆಳಿದಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿಯವರು ಯಾರ ಪರ ಇದ್ದಾರೊ, ಯಾರ ವಿರುದ್ಧ ಇದ್ದಾರೊ ಎಂಬುದು ಅರ್ಥವಾಗುತ್ತಿಲ್ಲ. ವಲ್ಲಭಭಾಯಿ ಪ್ರತಿಮೆ ಆಯ್ತು ಮುಂದೇನು?. ಹಳ್ಳಿ ಭಾಷೆಯಲ್ಲಿ ಇದನ್ನು 'ಜಾತ್ರೆ ಇದ್ದಾಗ ತುರಾಡೋದು' ಎನ್ನುತ್ತಾರೆ ಎಂದು ತಮ್ಮದೇ ಶೈಲಿಯಲ್ಲಿ ಸಂತೋಷ್ ಲಾಡ್ ಅವರು ಕುಟುಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪದೇ ಪದೇ ಸಿದ್ರಾಮುಲ್ಲಾ ಖಾನ್ ಎಂದು ಟೀಕೆ ಮಾಡಲಾಗುತ್ತಿದೆ. ಅವರು ನಮ್ಮ ದೇಶದವರು ಅಲ್ಲವೇ. ಕರ್ನಾಟಕದವರೇ ಆದ ಸಿದ್ದರಾಮಯ್ಯ, ದೇಶಕ್ಕೆ ಅವರ ಕೊಡುಗೆ ಏನೂ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಹೋರಾಟದ ಬಗ್ಗೆ ಸಂಸದರೇ ಸ್ಪಷ್ಟಪಡಿಸಬೇಕು
ರೈತ ಹೋರಾಟ ಯಾವುದು?, ಖಲಿಸ್ತಾನಿಯರ ಹೋರಾಟ ಯಾವುದು? ಎಂಬುದನ್ನು ಸಂಸದ ಅನಂತ ಕುಮಾರ ಹೆಗಡೆ ಸ್ಪಷ್ಟಪಡಿಸಬೇಕು. ಹತ್ತು ವರ್ಷದಲ್ಲಿ ಪ್ರಧಾನಿ ಮೋದಿ ಏನು ಮಾಡಿದ್ದಾರೆ? ಎಂಬುದು ನನಗಂತೂ ಗೊತ್ತಿಲ್ಲ ಎಂದು ಹೇಳಿಕೆಗೆ ಅವರು ಉತ್ತರಿಸಿದರು.
ರೈತರ ಸಾಲ ಮನ್ನಾ, ಆದಾಯ ದ್ವಿಗುಣ ಮಾಡುವುದಾಗಿ ನೀಡಿದ್ದ ಹೇಳಿಕೆ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ರೈತರ ಕಲ್ಯಾಣ, ನದಿಗಳ ಜೋಡಣೆ ಎಂಬ ಭರವಸೆ ನೀಡಿದ್ದರು. ಆದರೆ ಅವು ಈವರೆಗೂ ಈಡೇರಿಲ್ಲ. ಚುನಾವಣೆ ಸಮೀಪಿಸಿದಾಗ ಮಾತ್ರ ಹಿಂದು-ಮುಸ್ಲಿಂ ಮತಭೇದ ಭುಗಿಲೇಳುತ್ತದೆ.

ಬಿಜೆಪಿ ಮೌನವಾಗಿರುವುದೇಕೆ?
ಮುಸ್ಲಿಂ ಸಮುದಾಯದ ಆಜೀಂ ಪ್ರೇಮ್‌ಜಿ ದೆಶಕ್ಕಾಗಿ ಹೆಚ್ಚು ದಾನ ನೀಡಿದವರು. 30 ಬಿಲಿಯನ್ ಡಾಲರ್ ಚಾರಿಟಿ ನೀಡಿದ್ದಾರೆ. ಇದನ್ನೆಲ್ಲ ಮರೆಮಾಚಿ, ಕೇವಲ ರಾಮ ಮಂದಿರ, ಹಿಂದು-ಮುಸ್ಲಿಂ ಖಲಿಸ್ಥಾನ, ಪಾಕಿಸ್ತಾನ್‌ದ ಮಾತುಗಳು ಬರುತ್ತವೆ. ಮೇಕ್ ಇನ್ ಇಂಡಿಯಾ ಯೋಜನೆಗೆ 450 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೂ, ಎಲ್ಲಾ ಸರಕುಗಳು ಚೈನಾದಿಂದ ಆಮದಾಗುತ್ತವೆ. ಈ ಬಗ್ಗೆ ಯಾಕೆ ಬಿಜೆಪಿ ನಾಯಕರು ಮಾತನಾಡುವುದಿಲ್ಲ ಎಂದು ಕಿಡಿ ಕಾರಿದರು.
85ನೇ ಸ್ಥಾನದಲ್ಲಿ ಭಾರತ
ಪಾಸ್ ಪೋರ್ಟ್ ಪವರ್‌ನಲ್ಲಿ ಭಾರತ 85ನೇ ಸ್ಥಾನದಲ್ಲಿದೆ. ಪವರ್ ಫುಲ್ ಪ್ರಧಾನಿ ಎಂದು ಬಿಂಬಿಸಿಕೊಳ್ಳುವ ಮೋದಿ, ಅದನ್ನು ಮೊದಲನೇ ಸ್ಥಾನಕ್ಕೆ ತರಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಶಿಕ್ಷಣ, ಆರೋಗ್ಯದಲ್ಲಿ ಗುಜರಾತ್ ಮಾಡೆಲ್ ಎಷ್ಟಿದೆ. ಅಲ್ಲಿನ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಪರಿಸ್ಥಿತಿ ಏನು ಎಂಬುದರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಹೇಳಿದರು.












Click it and Unblock the Notifications