ಇಂತವರ ಬಾಯಿ ಮುಚ್ಚಿಸದಿದ್ದರೆ ಬಿಜೆಪಿಗೆ ಬರೋ ವೋಟೂ ಬರೋಲ್ಲಾ!
ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕರ ಪ್ರಚೋದನಕಾರಿ ಭಾಷಣ. ಘಟನೆ ನಡೆದು ಐದು ದಿನವಾದರೂ ದೂರು ದಾಖಲಾಗಲಿಲ್ಲ. ಬಿಜೆಪಿ ನಾಯಕರು, ಇಂತಹ ನಾಯಕರ ಹೆಡೆಮುರಿ ಕಟ್ಟದಿದ್ದರೆ ಬಿಜೆಪಿಗೆ ಹಿನ್ನಡೆ ನಿಶ್ಚಿತ.
ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷವೇ ಇರಲಿ, ಜೆಡಿಎಸ್ಸೇ ಇರಲಿ ಇನ್ನೊಬ್ಬರೇ ಇರಲಿ.. ಪಕ್ಷ, ಜಾತಿಮತ ಬೇಧ ಮರೆತು, ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಈ ರೀತಿಯ ಗೂಂಡಾಗಿರಿಯ ಹೇಳಿಕೆಯನ್ನು ನಾಗರಿಕ ಸಮಾಜ ಖಂಡಿಸಬೇಕಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಹಿಂದೂ ಜಾಗರಣಾ ವೇದಿಕೆಯ ಮುಖಂಡರೋರ್ವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ಆಡಿರುವ ಒಂದೊಂದು ಹೇಳಿಕೆಗಳನ್ನು, ಅವರು ಪ್ರತಿನಿಧಿಸುವ ಹಿಂದೂ ಸಮಾಜವೂ ಖಂಡಿತ ಒಪ್ಪಿಕೊಳ್ಳುವುದಿಲ್ಲ..
ಒಂದಂತೂ ನಿಜ.. ಅಮಿತ್ ಶಾ, ನರೇಂದ್ರ ಮೋದಿ, ಮೋಹನ್ ಭಾಗವತ್, ಪ್ರವೀಣ್ ತೊಗಡಿಯಾ ಮುಂತಾದ ಮುಖಂಡರು, ಬಾಯಿಗೆ ಬಂದಂತೆ ಮಾತನಾಡುವ ಇಂತಹ ಮುಖಂಡರನ್ನು ಹೆಡೆಮುರಿ ಕಟ್ಟದಿದ್ದರೆ, ದೇವ್ರಾಣೆಗೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬೀಳೋ ಮತಬ್ಯಾಂಕಿಗೆ ಖೋತಾ ಬೀಳೋದಂತೂ ಗ್ಯಾರಂಟಿ.
ರಾಜಕೀಯ ಮುಖಂಡರು ತಮ್ಮ ವಿರೋಧಿಗಳ ವಿರುದ್ದ ಕೀಳುಮಟ್ಟದ ಪದ ಬಳಸುವುದು, ರಾಜಕೀಯ ತಂತ್ರಗಾರಿಕೆ ರೂಪಿಸುವುದನ್ನು ಸಹಿಸಿಕೊಂಡು ಬರುತ್ತಿರುವ ನಾಗರೀಕರು, ಪೊಲೀಸ್ ಅಧಿಕಾರಿಯ ಮೇಲೆ ಈ ರೀತಿಯ ದುಂಡಾವರ್ತನೆಯ ಹೇಳಿಕೆ ನೀಡಿದ್ದನ್ನು ಸಹಿಸಿಕೊಳ್ಳಲಾರರು.
ಪುತ್ತೂರು ತಾಲೂಕು ಸಂಪ್ಯ ಠಾಣೆಯ ಎಸ್ಐ ಖಾದರ್ ಅವರನ್ನು ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಪುತ್ತೂರು ಬಸ್ ಸ್ಟ್ಯಾಂಡ್ ನಲ್ಲಿ ಯಾಕೆ ಓಡಿಸಬಾರದು ಎಂದು ಕಾರ್ಯಕ್ರಮವೊಂದರಲ್ಲಿ ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ ತೀರಾ ಕೆಳಮಟ್ಟದ ಪದ ಪ್ರಯೋಗಿಸಿ ವಾಗ್ದಾಳಿ ನಡೆಸಿದ್ದರು. ದುರಂತವೆಂದರೆ, ಈ ಘಟನೆ ನಡೆದು ಐದು ದಿನಗಳಾದರೂ ಇವರ ಮೇಲೆ ದೂರು ದಾಖಲಾಗಲಿಲ್ಲ. ಮುಂದೆ ಓದಿ..

ಸರಕಾರ ಕೂಡಾ ಮೌನವಹಿಸಿರುವುದು ಬಹುದೊಡ್ಡ ಆತಂಕದ ವಿಚಾರ
ಓರ್ವ ಪೊಲೀಸ್ ಅಧಿಕಾರಿಯನ್ನು ಈ ಪರಿ ಅವಮಾನಿಸಿದ್ದರೂ ಪೊಲೀಸ್ ಇಲಾಖೆ ಮತ್ತು ಸರಕಾರ ಕೂಡಾ ಮೌನವಹಿಸಿರುವುದು ಬಹುದೊಡ್ಡ ಆತಂಕದ ವಿಚಾರ. ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಯನ್ನು ಆತನ ಧರ್ಮದ ಕಾರಣಕ್ಕೆ ಗುರಿಯಾಗಿಸಿ ವಾಗ್ದಾಳಿ ನಡೆಸಿರುವುದು ಸಾಮಾಜಿಕ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ ಕೂಡಾ.

ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ್
ಕಳೆದ ಶುಕ್ರವಾರ (ಸೆ 15) ಪುತ್ತೂರಿನ ಮೈದಾನದಲ್ಲಿ ಹಿಂದೂ ಜಾಗರಣಾ ವೇದಿಕೆ, ಸಂಪ್ಯ ಠಾಣಾ ಎಸ್ಐ ಖಾದರ್, ಎಎಸ್ಐ ರಕ್ಷಾ ಮತ್ತು ಚಂದ್ರ ಅವರ ಹಿಂದೂ ವಿರೋಧಿ ನೀತಿ ವಿರುದ್ಧ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನೀನೊಬ್ಬ ಮುಸ್ಲಿಂ ಏಜೆಂಟ್ ಆಗಿ ವರ್ತಿಸಿದರೆ, ನಾನ್ಯಾಕೆ ಹಿಂದೂ ಆಗಿ ವರ್ತಿಸಬಾರದು ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ಆಕ್ರೋಶ ವ್ಯಕ್ತಪಡಿಸಿದ್ದರು.

ನಿನ್ನನ್ನು ಹುಚ್ಚು ನಾಯಿಯಂತೆ ಯಾಕೆ ಅಟ್ಟಾಡಿಸಬಾರದು
ಧರ್ಮ ನಮಗೆ ಶ್ರೇಷ್ಠ. ನಮ್ಮ ದೇಶ ನಮಗೆ ಸರ್ವಶ್ರೇಷ್ಠ. ಇದಕ್ಕೆ ಅಡ್ಡಿ ಬರುವವರನ್ನೆಲ್ಲ ಮೆಟ್ಟಿ ನಿಲ್ಲುತ್ತೇವೆ. ನಾನು ಓರ್ವ ಹಿಂದೂವಾಗಿ ನಿನಗೆ ರಸ್ತೆಯಲ್ಲಿ ಕಲ್ಲು ಹೊಡೆದು ನಿನ್ನನ್ನು ಹುಚ್ಚು ನಾಯಿಯಂತೆ ಯಾಕೆ ಅಟ್ಟಾಡಿಸಬಾರದು? ನಿನ್ನ ತಲೆಯನ್ನು ಬೋಳಿಸಿ ಕತ್ತೆಯ ಮೇಲೆ ಕೂರಿಸಿ ಪುತ್ತೂರಿನಲ್ಲಿ ಮೆರವಣಿಗೆ ಮಾಡುವುದು ನಮಗೆ ಲೆಕ್ಕವೇ ಅಲ್ಲ. ಅದಕ್ಕೆ ಬರುವ ಕಾನೂನಿನ ಅಡ್ಡಿಗಳನ್ನು ಎದುರಿಸಲು ನಾವು ತಯಾರಾಗಿ ಬಿಟ್ಟರೆ ಸಾಕು ಎಂದು ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ಪ್ರಚೋದನಾಕಾರಿ ಭಾಷಣ ಮಾಡಿದ್ದರು.

ಟೀಕಿಸುವ ಭರದಲ್ಲಿ ಮುಸ್ಲಿಂ ಸಮುದಾಯವನ್ನು ಎಳೆದು ತಂದ ಕಾರಂತ್
ಜಗದೀಶ್ ಕಾರಂತ್ ಈ ರೀತಿಯ ಹೇಳಿಕೆಗಳನ್ನು ನೀಡಲು ಕಾರಣವಿರಬಹುದಾದ ಅಂಶಗಳು ಏನೇ ಇದ್ದರು, ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಈ ರೀತಿಯ ಕೆಟ್ಟ ಪದಗಳನ್ನು ಬಳಸಿರುವುದು ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಜೊತೆಗೆ, ಅವರನ್ನು ಟೀಕಿಸುವ ಭರದಲ್ಲಿ ಮುಸ್ಲಿಂ ಸಮುದಾಯವನ್ನು ಎಳೆದು ತಂದದ್ದು, ಪರೋಕ್ಷವಾಗಿ ಈ ಬೆಳವಣಿಗೆಗಳು ಕೊನೆಗೆ ಬಂದು ನಿಲ್ಲುವುದು ವೋಟ್ ಬ್ಯಾಂಕ್ ಮೇಲೆ.

ತಲಾಖ್ ನಂತರ ಬಿಜೆಪಿಯತ್ತ ಮುಸ್ಲಿಂ ಮಹಿಳೆಯರ ಒಲವು
ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಲೇ ಬರುತ್ತಿರುವ ಮುಸ್ಲಿಂ ಸಮುದಾಯ, ಅದರಲ್ಲೂ ಪ್ರಮುಖವಾಗಿ ಮುಸ್ಲಿಂ ಮಹಿಳೆಯರು, ಸರ್ವೋಚ್ಚ ನ್ಯಾಯಾಲಯದ ತಲಾಖ್.. ಆದೇಶದ ನಂತರ ಬಿಜೆಪಿಯತ್ತ ಸ್ವಲ್ಪ ಮಟ್ಟಿನೆ ಒಲವು ತೋರುತ್ತಿರುವ ಈ ಸಮಯದಲ್ಲಿ ಕಾರಂತರ ಹೇಳಿಕೆ ಬಿಜೆಪಿಗೆ ಮುಳುವಾಗದೇ ಇರದು.

ಪ್ರಚೋದನಾಕಾರಿ ಭಾಷಣ ಹತ್ತಿಕ್ಕದಿದ್ದರೆ ಬಿಜೆಪಿಗೆ ಮುಳು
ಚುನಾವಣಾ ಈ ವರ್ಷದಲ್ಲಿ ಜೊತೆಗೆ ಕೋಮು ಗಲಭೆಯ ಕೇಂದ್ರ ಸ್ಥಾನದಂತಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ, ಸಂಘ ಪರಿವಾರದ ಮುಖಂಡರ ಈ ರೀತಿಯ ಪ್ರಚೋದನಾಕಾರಿ ಭಾಷಣವನ್ನು ಪರಿವಾರದ ಮುಖಂಡರು ಈಗಿಂದೀಗಲೇ ಹತ್ತಿಕ್ಕದಿದ್ದರೆ ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ ತಂದೊಡ್ಡುವ ಸಾಧ್ಯತೆಯಿಲ್ಲದಿಲ್ಲ.












Click it and Unblock the Notifications