ಊಟ, ತಿಂಡಿ, ನಿದ್ರೆ ಎಲ್ಲವೂ ಆ ಕಸದ ರಾಶಿ ಮಧ್ಯದಲ್ಲಿ!
ಕಾರವಾರ, ಸೆಪ್ಟೆಂಬರ್ 26: ಒಂದೆಡೆ ಆಗಲೋ ಈಗಲೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಮುರುಕಲು ಮನೆಯಲ್ಲಿ ತುಂಬಿಕೊಂಡಿರುವ ಕಸದ ರಾಶಿ. ಊಟ, ತಿಂಡಿ, ನಿದ್ರೆ ಎಲ್ಲವೂ ಆ ಕಸದ ರಾಶಿ ಮಧ್ಯದಲ್ಲಿಯೇ. ಮತ್ತೊಂದೆಡೆ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಮಗಳು.
ಸ್ನಾನಕ್ಕೆ ಸ್ನಾನ ಗೃಹ ಇಲ್ಲ. ಶೌಚಕ್ಕೆ ಶೌಚಾಲಯ ಕೂಡ ಇಲ್ಲ. ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಪತಿಯೂ ಕೂಡ ಎಲ್ಲಿದ್ದಾನೋ ತಿಳಿದಿಲ್ಲ. ಕುಟುಂಬದವರು ಕೂಡ ಯಾರೂ ಇಲ್ಲ. ಕೂಲಿ ನಾಲಿ ಮಾಡಿ ಜೀವನದ ಬಂಡಿ ದೂಡುತ್ತಿರುವ ಸಂಸಾರದ ದುರಂತಮಯ ಕಥೆಯಿದು!

ಹೌದು, ಇಷ್ಟೆಲ್ಲ ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ ಇರುವುದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಪಂಚರಾಶಿವಾಡದಲ್ಲಿ. ಸುಮಾರು 30 ವರ್ಷದಿಂದ ಪಂಚರಾಶಿವಾಡದಲ್ಲಿನ ಕೊಟ್ಟಿಗೆಯಂತಹ ಮನೆಯಲ್ಲಿ ವಯಸ್ಸಾದ ಚಂದ್ರಕಲಾ ಮಾಳ್ಸೇಕರ್ ತನ್ನ 23 ವರ್ಷದ ಮಗಳು, ಮಾನಸಿಕ ಅಸ್ವಸ್ಥೆ ಸುಮಿತಾ ಮಾಳ್ಸೇಕರ್ ಜತೆಯಲ್ಲಿ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಈ ಕುಟುಂಬಕ್ಕೆ ಈಗ ಜನಶಕ್ತಿ ವೇದಿಕೆ ನೆರವಾಗಿ ಮಾನವೀಯತೆ ಮೆರೆದಿದೆ.
ಚಂದ್ರಕಲಾರ ಪತಿ ಕೂಡ ಮಾನಸಿಕ ಅಸ್ವಸ್ಥ. ನಗರದಲ್ಲಿಯೇ ಅಲೆದಾಡುತ್ತಿದ್ದಾರೆ ಎಂದು ಗೊತ್ತಾಗಿದೆ. ಇವರಿಗೆ ಇಬ್ಬರು ಪುತ್ರಿಯರು. ಒಬ್ಬಳು ಈ ಹಿಂದೆ ಮಾನಸಿಕ ಸ್ಥಿರತೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತದನಂತರ ಸುಮಾರು 10 ವರ್ಷದಿಂದ ಇನ್ನೋರ್ವ ಮಗಳು ಸುಮಿತಾ ಕೂಡ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಗೋವಾದ ಬಾಂಬೋಲಿಯಲ್ಲಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಔಷಧಿ ಕೂಡ ಪಡೆಯಲು ವೈದ್ಯರು ತಿಳಿಸಿದ್ದರು. ಆದರೆ ಇತ್ತೀಚಿಗೆ ಔಷಧಿಯನ್ನು ಸರಿಯಾಗಿ ನೀಡದಿದ್ದ ಕಾರಣ ಆಕೆಯ ಅಸ್ವಸ್ಥತೆ ಹೆಚ್ಚಾಗಿದೆ.
ಆದರೂ ಕೂಡ ನಗರಸಭೆಗೆ ಮನೆ ತೆರಿಗೆ, ಹೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸುವ ಇವರಿಗೆ ಈವರೆಗೆ ಯಾವ ಅಧಿಕಾರಿ, ಇಲಾಖೆಯೂ ಕೂಡ ಮರುಗಲಿಲ್ಲ. ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಅದು ತಳಮಟ್ಟದ ಜನರಿಗೆ ಮುಟ್ಟುತ್ತಿಲ್ಲ ಎನ್ನುವುದಕ್ಕೆ ಇದೆ ಉತ್ತಮ ಉದಾಹರಣೆ.

ಶೌಚ ಮುಕ್ತ ದೇಶ ನಿರ್ಮಾಣ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ ನಿಜ. ಆದರೆ ನಗರಸಭೆ ವ್ಯಾಪ್ತಿಯಲ್ಲಿಯೇ ಮನೆಗಳಿಗೆ ಶೌಚಾಲಯಗಳು ಇಲ್ಲದಾಗಿದೆ ಎಂದು ಜನಶಕ್ತಿ ವೇದಿಕೆಯ ಮಾಧವ ನಾಯಕ ತಮ್ಮ ಅನಿಸಿಕೆ ಹಂಚಿಕೊಂಡರು.
ಕಳೆದ ಬಾರಿ ಕೂಡ ಇದೇ ವಾರ್ಡ್‌ನಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಇದು ಎರಡನೆಯದ್ದಾಗಿದೆ. ಅಧಿಕಾರಿಗಳು ಇಂಥ ವ್ಯವಸ್ಥೆಗಳು ಇನ್ನೆಲ್ಲೆಲ್ಲಿದೆ ಎಂಬುದನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೂಡ ಅವರು ಆಗ್ರಹಿಸಿದರು.












Click it and Unblock the Notifications