ಉಪಸಭಾಧ್ಯಕ್ಷರ ಹುದ್ದೆ 2019ರಿಂದಲೂ ಖಾಲಿ: ಸಾಗರ ಖಂಡ್ರೆ ಅಸಮಾಧಾನ
ಬೀದರ್, ಮಾರ್ಚ್ 31: ಲೋಕಸಭೆಯಲ್ಲಿ 2019ರಿಂದಲೂ ಉಪ ಸಭಾಧ್ಯಕ್ಷರ ಹುದ್ದೆ ಖಾಲಿ ಇದ್ದು, ಇದು ಸಂವಿಧಾನದ 93ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಬೀದರ್ ಸಂಸತ್ ಸದಸ್ಯ ಸಾಗರ್ ಈ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸತ್ತಿನ ಕೆಳಮನೆ ಸಾಂವಿಧಾನಿಕವಾಗಿ, ಪ್ರಜಾಪ್ರಭತ್ವದ ತತ್ವದಲ್ಲಿ ನಡೆಯಬೇಕು. ಆದರೆ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆದಿದೆ ಎಂದು ಹೇಳಿದರು.
ಸಂಸತ್ತು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದರೆ, ಎಲ್ಲ ಜನಪ್ರತಿನಿಧಿಗಳಿಗೂ ಪಕ್ಷಭೇದವಿಲ್ಲದೆ ಸಮಾನ ಅವಕಾಶ ದೊರಕಬೇಕು. ಸದಸ್ಯರು ಸಾಂವಿಧಾನಿಕ ಕರ್ತವ್ಯ ನಿಭಾಯಿಸುವಂತಹ ವಾತಾವರಣ ಇರಬೇಕು, ಆದರೆ ಇತ್ತೀಚಿನ ಕೆಲವು ಪ್ರವೃತ್ತಿಗಳು ಈ ವ್ಯವಸ್ಥೆಯ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿವೆ, ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಅಪಹಾಸ್ಯ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಸದನದಲ್ಲಿ ಪ್ರತಿಪಕ್ಷದ ಸದಸ್ಯರಿಗೆ ಮಾತನಾಡಲು ಸೂಕ್ತ ಅವಕಾಶ ಕಲ್ಪಿಸದೆ, ಅವರ ಹಕ್ಕನ್ನೇ ಮೊಟಕುಗೊಳಿಸಲಾಗುತ್ತಿದೆ. ಇದು ಸಂಸದೀಯ ಕಲಾಪದ ಚರ್ಚೆಯ ಸ್ವರೂಪವನ್ನು ದುರ್ಬಲಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷಗಳ ಸಂಸದರು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದಾಗ, ಅವರ ಮಾತುಕಗಳು ಕೇಳದ ರೀತಿಯಲ್ಲಿ ಮೈಕ್ರೊಫೋನ್ ಗಳನ್ನು ಆಫ್ ಮಾಡಲಾಗುತ್ತದೆ. ಪ್ರತಿಪಕ್ಷ ಸದಸ್ಯರ ಧ್ವನಿಯನ್ನೇ ದಮನ ಮಾಡುವ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ, ಆದರೆ ಆಡಳಿತ ಪಕ್ಷದ ಸದಸ್ಯರಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ. ಈ ತಾರತಮ್ಯ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತಿಳಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಕೆಲವು ಪ್ರಮುಖ ಸಚಿವಾಲಯಗಳನ್ನು ಹೊರಗಿಡಲಾಗುತ್ತಿದೆ, ಇದರಿಂದ ಹಣಕಾಸು ಮೇಲ್ವಿಚಾರಣೆ ಮತ್ತು ಪಾರದರ್ಶಕತೆ ತೀವ್ರವಾಗಿ ಕುಗ್ಗುತ್ತಿದೆ. ತುರ್ತು ಮತ್ತು ಜನರಿಗೆ ಉಪಯುಕ್ತವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಇರುವ ನಿಯಮ 193ನ್ನು ಸಮರ್ಪಕವಾಗಿ ಬಳಸಲು ಅವಕಾಶ ನೀಡುತ್ತಿಲ್ಲ. ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಂಸದೀಯ ಸ್ಥಾಯಿ ಸಮಿತಿಗಳ ಸ್ವಾಯತ್ತತೆಯನ್ನು ಸಹ ಕಸಿದುಕೊಳ್ಳಲಾಗುತ್ತಿದೆ, ಮತ್ತು ಕೆಲವು ಸಂದರ್ಭಗಳಲ್ಲಿ ಸ್ಪೀಕರ್ ಕಚೇರಿಯಿಂದಲೇ ವರದಿಗಳ ತಿದ್ದುಪಡಿಯ ಸೂಚನೆ ನೀಡಲಾಗುತ್ತಿದೆ. ಶೂನ್ಯ ವೇಳೆಯಲ್ಲಿ ತುರ್ತು ವಿಷಯಗಳನ್ನು ಪ್ರಸ್ತಾಪಿಸಲು ಸಂಸದರಿಗೆ ನೀಡಲಾಗುತ್ತಿದ್ದ ಅವಕಾಶವನ್ನು ನಿರ್ಬಂಧಿಸಲಾಗುತ್ತಿದೆ ಇದು ಸರ್ಕಾರದ ದಮನಕಾರಿ ಪ್ರವೃತ್ತಿ ಎಂದು ಸಾಗರ್ ಖಂಡ್ರೆ ಬಣ್ಣಿಸಿದ್ದಾರೆ.
ಖಾಸಗಿ ಸದಸ್ಯರ ಮಸೂದೆಗಳು ಮತ್ತು ನಿರ್ಣಯಗಳಿಗೆ ಗಣನೀಯ ಹಿನ್ನಡೆಯಾಗುತ್ತಿದ್ದು, ಚರ್ಚೆಗಾಗಿ ಬೇಕಾದಷ್ಟು ಸಮಯ ಲಭಿಸುತ್ತಿಲ್ಲ. ಸಂಸದ್ ಟಿವಿಯಲ್ಲಿ ಪ್ರತಿಪಕ್ಷ ನಾಯಕರು ಮತ್ತು ಸದಸ್ಯರು ಮಾತನಾಡುವಾಗ ಅವರತ್ತ ಕ್ಯಾಮರಾ ಕೇಂದ್ರೀಕರಿಸದೆ, ಸಭಾಧ್ಯಕ್ಷರು ಮತ್ತು ಸದನದ ಇತರ ದೃಶ್ಯಗಳನ್ನು ತೋರಿಸಲಾಗುತ್ತದೆ ಇದು ಸರ್ವತಾ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.
ಸಲಹಾ ಸಮಿತಿ ಸಭೆಗಳನ್ನು ನಿಯಮಿತವಾಗಿ ಕರೆಯದೆ, ನಿರ್ಲಕ್ಷಿಸಲಾಗುತ್ತಿದೆ. ಈ ಬೆಳವಣಿಗೆಳಿಂದ ನಮ್ಮ ಸಂಸದೀಯ ವ್ಯವಸ್ಥೆಯ ಮೂಲಭೂತ ತತ್ವಗಳಿಗೆ ಧಕ್ಕೆಯಾಗುತ್ತಿದ್ದು, ತಕ್ಷಣ ಸರಿಪಡಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ. ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಸಂವಿಧಾನದ ನಿಯಮಗಳ ಅನುಸರಣೆಯನ್ನು ಮರುಸ್ಥಾಪಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬ ಜನಪ್ರತಿನಿಧಿಗೂ ಸದನದಲ್ಲಿ ಧ್ವನಿ ಎತ್ತಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications