ವಿಧಾನಸಭೆ ಕಾರ್ಯದರ್ಶಿಯಾಗಿ ಎಸ್. ಮೂರ್ತಿ ಮರು ನೇಮಕ
ಬೆಂಗಳೂರು, ಜುಲೈ 03 : ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರನ್ನು ಮೂರು ವಾರದೊಳಗೆ ಮರು ನೇಮಕ ಮಾಡಬೇಕು ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಎಸ್. ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿತ್ತು.
Recommended Video
ಅಮಾನತು ಆದೇಶವನ್ನು ಪ್ರಶ್ನಿಸಿ ಎಸ್. ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ನ್ಯಾಯಮೂರ್ತಿ ಪಿ. ಬಿ. ಭಜಂತ್ರಿ ಅವರಿದ್ದ ಏಕಸದಸ್ಯ ಪೀಠ ಮರು ನೇಮಕ ಮಾಡುವಂತೆ ಸೂಚಿಸಿದೆ.
ಎಸ್. ಮೂರ್ತಿ ಅವರನ್ನು ಅಮಾನತುಗೊಳಿಸಿ ವಿಧಾನಸಭೆ ವಿಶೇಷ ಮಂಡಳಿ ಹೊರಡಿಸಿರುವ ಆದೇಶ ನಿಯಮಕ್ಕೆ ಅನುಗುಣವಾಗಿಲ್ಲ. ಆದ್ದರಿಂದ, ಶಿಸ್ತುಕ್ರಮ ವಿಚಾರಣಾ ಸಮಿತಿಯ ಅಂತಿಮ ಫಲಿತಾಂಶಕ್ಕೆ ಒಳಪಟ್ಟು ಮೂರು ವಾರದಲ್ಲಿ ಮರು ನೇಮಕ ಮಾಡಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 2016-17ನೇ ಸಾಲಿನಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪದ ಮೇಲೆ ಎಸ್. ಮೂರ್ತಿ ಅವರನ್ನು ಅಮಾನತು ಮಾಡಲಾಗಿತ್ತು.

ಸರ್ಕಾರದಿಂದ ಮರು ನೇಮಕ
ಕರ್ನಾಟಕ ಹೈಕೋರ್ಟ್ ಆದೇಶದ ಬಳಿಕ ಗುರುವಾರ ಕರ್ನಾಟಕ ಸರ್ಕಾರ ವಿಧಾನಸಭೆ ಕಾರ್ಯದರ್ಶಿಯಾಗಿ ಎಸ್. ಮೂರ್ತಿ ಅವರನ್ನು ಪುನಃ ನೇಮಕ ಮಾಡಿದೆ. ವಿಶಾಲಾಕ್ಷಿ ಅವರು ಇಷ್ಟು ದಿನ ಉಸ್ತುವಾರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ವಿಚಾರಣೆ ಪೂರ್ಣಗೊಂಡಿಲ್ಲ
ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪದ ಕುರಿತು ವಿಚಾರಣೆ ನಡೆಸಲು ರಚನೆ ಮಾಡಿರುವ ಸಮಿತಿ 8 ತಿಂಗಳು ಕಳೆದರೂ ವಿಚಾರಣೆ ಪೂರ್ಣಗೊಳಿಸಿಲ್ಲ. 2019ರ ಫೆಬ್ರವರಿಯಲ್ಲಿ ಎರಡು ವಾರದೊಳಗೆ ವಿವರಣೆ ನೀಡುವಂತೆ ಅರ್ಜಿದಾರರಿಗೆ ಸೂಚಿಸಲಾಗಿತ್ತು. ವಿವರಣೆ ನೀಡುವ ಮುನ್ನವೇ ವಿಚಾರಣಾಧಿಕಾರಿ ನೇಮಕ ಮಾಡಲಾಗಿದೆ. ಉಸ್ತುವಾರಿ ಕಾರ್ಯದರ್ಶಿಗಳು ವಿವರಣೆಯನ್ನು ವಿಶೇಷ ಮಂಡಳಿ ಮುಂದೆ ಮಂಡಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವಿಶೇಷ ಮಂಡಳಿ ವಿಫಲವಾಗಿದೆ
ಅರ್ಜಿದಾರರನ್ನು ಅಮಾನತು ಮಾಡಿದ ಆದೇಶವನ್ನು ಪರಿಗಣಿಸುವಲ್ಲಿ, ಕಾಲ ಕಾಲಕ್ಕೆ ಮರು ಪರಿಶೀಲಿಸುವಲ್ಲಿ ವಿಶೇಷ ಮಂಡಳಿ ವಿಫಲವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಇದರಿಂದಾಗಿ ಎಸ್. ಮೂರ್ತಿ ಅವರನ್ನು ಮರು ನೇಮಕ ಮಾಡಲು ಆದೇಶ ನೀಡಲಾಗಿತ್ತು.

ಎಸಿಬಿ ದಾಳಿ ನಡೆದಿತ್ತು
ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರು ಅಮಾನತುಗೊಂಡಾಗ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿತ್ತು. ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದರು.












Click it and Unblock the Notifications