ಕರ್ನಾಟಕದಲ್ಲಿ ಭೂಮಿ ಖಾಲಿ ಆತು ಅಂತಾ ಯಾಕ್ ಅಂದ್ರು ಸಚಿವ ಆರ್. ಅಶೋಕ್?
ಬೆಂಗಳೂರು, ನವೆಂಬರ್ 24: ಕರ್ನಾಟಕದಲ್ಲಿ ಸರ್ಕಾರಿ ಭೂಮಿಯೇ ಖಾಲಿಯಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ. ಮುಂದಿನ 10-12 ವರ್ಷಗಳಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ಮಿಸಲು ಭೂಮಿಯನ್ನು ಹುಡುಕುವುದು ಕಷ್ಟವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆಯೇ ಚುನಾಯಿತ ಪ್ರತಿನಿಧಿಗಳಲ್ಲಿ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದು ಆಗಿದೆ. ಇದೀಗ ಮತ್ತೊಮ್ಮೆ ಅವರ ಕ್ಷೇತ್ರಗಳಲ್ಲಿನ ಸರ್ಕಾರಿ ಆಸ್ತಿಗಳನ್ನು ಗುರುತಿಸಲು ಪತ್ರ ಬರೆಯಲಾಗುತ್ತಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
"ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ"ಯಲ್ಲಿ ಪಾಲ್ಗೊಳ್ಳಲು ಕಂದಾಯ ಸಚಿವ ಆರ್ ಆಶೋಕ್ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ, ಅಲ್ಲಿ ಹಳ್ಳಿಯೊಂದರಲ್ಲಿ ವಾಸ್ತವ್ಯ ಹೂಡುವ ಸಚಿವರು ನಿವಾಸಿಗಳ ಕಷ್ಟಗಳನ್ನು ಆಲಿಸುತ್ತಾರೆ. ಶಾಲೆ, ಕಾಲೇಜುಗಳು, ಅಂಗನವಾಡಿಗಳು, ಸ್ಮಶಾನಗಳು, ಆಟದ ಮೈದಾನಗಳು, ಆರೋಗ್ಯ ಕೇಂದ್ರಗಳು ಮತ್ತು ಹಲವಾರು ಸೌಲಭ್ಯಗಳಿಗೆ ಭೂಮಿಯ ಕೊರತೆಯಿದೆ ಎಂಬುದನ್ನು ಅವರು ಈ ಪ್ರವಾಸದ ಸಂದರ್ಭದಲ್ಲಿ ಕಂಡುಕೊಂಡಿದ್ದಾರೆ.

ಶಾಸಕರಿಗೆ ಮತ್ತು ಸಂಸದರಿಗೆ ಮತ್ತೊಮ್ಮೆ ಪತ್ರ
ರಾಜ್ಯದಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ ಭೂಮಿಯನ್ನು ಹುಡುಕಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯದಲ್ಲಿ ಇದು ಮತ್ತಷ್ಟು ಅಪಾಯದ ಮಟ್ಟಕ್ಕೆ ತಲುಪುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿಯೇ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲು ಸರ್ಕಾರಿ ಭೂಮಿಯನ್ನು ಗುರುತಿಸುವಂತೆ ಸಚಿವ ಆರ್ ಅಶೋಕ್, ಈ ಹಿಂದೆಯೇ ಎಲ್ಲಾ ಶಾಸಕರು ಮತ್ತು ಸಂಸದರಿಗೆ ಪತ್ರ ಬರೆದಿದ್ದರು. ಆದರೆ ಅವರಲ್ಲಿ ಯಾರೂ ಉತ್ತರಿಸಿರಲಿಲ್ಲ. ಹೀಗಾಗಿ ನಾನು ಮತ್ತೊಮ್ಮೆ ಪತ್ರವನ್ನು ಬರೆಯಲಿದ್ದೇನೆ, "ಎಂದು ಅವರು ತಿಳಿಸಿದ್ದಾರೆ.

ಶಾಸಕರ ಬೆಂಬಲ ಕೇಳುತ್ತಿರುವುದೇಕೆ ಸಚಿವ ಆರ್ ಅಶೋಕ್?
"ಭೂಮಿಯ ಬೆಲೆ ಹೆಚ್ಚುತ್ತಿದೆ ಮತ್ತು ಸರ್ಕಾರವು ಅಂತಹ ಹೆಚ್ಚಿನ ಬೆಲೆಗೆ ಆಸ್ತಿಗಳನ್ನು ಖರೀದಿಸಲು ಸಾಧ್ಯವಿಲ್ಲ. ಭವಿಷ್ಯಕ್ಕಾಗಿ ಭೂಮಿಯನ್ನು ಉಳಿಸಿಕೊಳ್ಳುವ ಸಮಯ ಬಂದಿದೆ. ಒಂದೋ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಭೂಮಿಯನ್ನು ಅತಿಕ್ರಮಿಸಲಾಗಿದೆ ಅಥವಾ ಅದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಶಾಸಕರು ತಮ್ಮ ಕ್ಷೇತ್ರಗಳನ್ನು ಚೆನ್ನಾಗಿ ತಿಳಿದಿರುವ ಕಾರಣ ನಾವು ಅವರ ಬೆಂಬಲವನ್ನು ಕೋರುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಕೃಷಿ ಹೆಸರಿನಲ್ಲಿ ಭೂಮಿ ಒತ್ತುವರಿ ಅಕ್ರಮ
ರಾಜ್ಯದ ಹಲವೆಡೆ ಕೃಷಿ ಹೆಸರಿನಲ್ಲಿ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. "ಅವರು ಬೆಟ್ಟದ ತುದಿಗಳು, ಸರೋವರದ ಬದಿಗಳು ಮತ್ತು ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಅವರನ್ನು ತೆರವು ಮಾಡುವುದು ಸವಾಲಿನ ಕೆಲಸವಾಗಿದೆ. ಹಾಗೆ ಮಾಡಿದರೆ ಸರ್ಕಾರ ಮತ್ತು ಅಧಿಕಾರಿಗಳನ್ನು ರೈತ ವಿರೋಧಿ ಎಂದು ಬಿಂಬಿಸುತ್ತಾರೆ. ಈ ಜನರು ರೈತರಲ್ಲ, ಆದರೆ ಅತಿಕ್ರಮಣದಾರರು," ಎಂದು ಸಚಿವರು ಹೇಳಿದರು.

ಸ್ಮಶಾನ, ರಸ್ತೆಗಳ ಕೊರತೆಗೆ ಭೂಮಿಯೇ ಕಾರಣ
ರಾಜ್ಯದಲ್ಲಿ 2,000ಕ್ಕೂ ಹೆಚ್ಚು ಹಳ್ಳಿಗಳಿಗೆ ಸ್ಮಶಾನಗಳಿಲ್ಲ, ಆದರೆ ಇನ್ನೂ ಅನೇಕ ಗ್ರಾಮಗಳಿಗೆ ಸರಿಯಾದ ರಸ್ತೆಗಳಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಭೂಮಿಯ ಕೊರತೆ ಕಾರಣವಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿಕೊಳ್ಳುತ್ತಿರುವ ಜಮೀನುಗಳನ್ನು ಗುರುತಿಸಬೇಕಾಗಿದೆ. ಅದನ್ನು ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ಬಳಸಿಕೊಳ್ಳಬೇಕಾಗಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.












Click it and Unblock the Notifications