KIADB: ನಿವೇಶನಗಳ ₹2,400 ಕೋಟಿ ಬಾಕಿ ಉಳಿಸಿಕೊಂಡವರ ವಿರುದ್ಧ ಸರ್ಕಾರ ಭ್ರಹ್ಮಾಸ್ತ್ರ
ಬೆಂಗಳೂರು, ನವೆಂಬರ್ 28; ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (KIADB) ನಿವೇಶನ ಪಡೆದುಕೊಂಡು, ದಶಕಗಳಿಂದ ಹಾಗೆಯೇ ಉಳಿಸಿಕೊಂಡಿದ್ದ ಹಲವರಿಂದ ಕಳೆದ ಮೂರು ವಾರಗಳಲ್ಲಿ 115 ಕೋಟಿ ರೂ. ಬಾಕಿ ವಸೂಲಿ ಮಾಡಲಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ಕೆಐಎಡಿಬಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇಲಾಖೆಯು ಕೈಗೊಂಡಿರುವ ವಿವಿಧ ಉಪಕ್ರಮಗಳು ಮತ್ತು ಅನುಸರಣ ಕಾರ್ಯಗಳ ಪರಾಮರ್ಶೆ ನಡೆಸಿದರು. ನಂತರ ಮಾತನಾಡಿದ ಅವರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (KIADB) ಕೈಗಾರಿಕಾ ನಿವೇಶನಗಳನ್ನು ಪಡೆದುಕೊಂಡಿದ್ದ ಸುಮಾರು ಎರಡು ಮೂರು ದಶಕಗಳಿಂದ ಹಣ ಪಾವತಿಸದೇ ಹಾಗೆಯೇ ಉಳಿಸಿಕೊಳ್ಳಲಾಗಿತ್ತು.

ಮಂಡಳಿಗೆ ನಿವೇಶನ ಪಡೆದವರಿಂದ ಒಟ್ಟು 2,400 ಕೋಟಿ ರೂಪಾಯಿ ಬಾಕಿ ಬರಬೇಕಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಾಕಿ ವಸೂಲಿ ಮಾಡುವಂತೆ ಮೂರ್ನಾಲ್ಕು ವಾರಗಳ ಹಿಂದೆ ಮಂಡಲಿಯ ನಿರ್ದೇಶಕರುಗಳಿಗೆ ಸೂಚಿಸಲಾಗಿತ್ತು. ಇದರ ನಂತರ ಕ್ಷಿಪ್ರ ಗತಿಯಲ್ಲಿ 115 ಕೋಟಿ ರೂ. ವಸೂಲು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಈ ವಸೂಲಿ ಕ್ರಮವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಸಚಿವಾಲಯದ ಅನುಮೋದನೆ ಪಡೆಯುತ್ತೇವೆ
ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಕ್ಷಿಪ್ರ ಗತಿಯಲ್ಲಿ ಸಾಗುತ್ತಿದೆ. 2024ರ ಫೆಬ್ರವರಿಯಲ್ಲಿ ಉದ್ಘಾಟಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ, ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅಗತ್ಯವಿರುವ ಅನುಮೋದನೆಗಳನ್ನೆಲ್ಲ ಪಡೆದುಕೊಳ್ಳಬೇಕು. ಜೊತೆಗೆ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇನ್ನು ಒಂದು ತಿಂಗಳಲ್ಲಿ ರಾತ್ರಿ ಹೊತ್ತಿನಲ್ಲೂ ವಿಮಾನ ಸೇವೆ ಆರಂಭವಾಗಲಿದೆ ಎಂದು ಅವರು ಹೇಳಿದರು.

ಹಾಸನ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿಗಳ ಕಡೆಗೆ ಆದ್ಯತೆ ಕೊಡಲಾಗುವುದು. ಕಾರವಾರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಒಂದಿಷ್ಟು ಬಾಕಿ ಇದೆ. ಇದನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಜೆಟ್‌ನಲ್ಲಿ ಧರ್ಮಸ್ಥಳ, ಚಿಕ್ಕಮಗಳೂರು, ಕೊಡಗುಗಳಲ್ಲಿ ಏರ್-ಸ್ಟ್ರಿಪ್ಸ್ ನಿರ್ಮಾಣ ಘೋಷಿಸಲಾಗಿದೆ. ಅದನ್ನು ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಉತ್ತರ ಕನ್ನಡದ ತಡದಿಯನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಪಾಟೀಲ್ ಹೇಳಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.












Click it and Unblock the Notifications