ಅರ್ಚಕರಿಗೆ ಮುಜರಾಯಿ ಇಲಾಖೆಯಿಂದ ಅನುದಾನ ಘೋಷಣೆ
ಬೆಂಗಳೂರು, ಮೇ 20: ಕೊರೊನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಲಾಕ್‌ಡೌನ್ ಹೇರಲಾಗಿದ್ದು, ಇದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವವರಿಗೆ ಬುಧವಾರ ಸಿಎಂ ಯಡಿಯೂರಪ್ಪ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು.
ಪ್ಯಾಕೇಜ್‌ನಲ್ಲಿ ಅರ್ಚಕರಿಗೆ ಅನುದಾನ ಘೋಷಣೆ ಮಾಡಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಈ ಬೆನ್ನಲ್ಲೇ ಮುಜರಾಯಿ ಇಲಾಖೆಯ 27 ಸಾವಿರ ದೇವಾಲಯಗಳ ಅರ್ಚಕರಿಗೆ ಮೂರು ತಿಂಗಳ ಮುಂಗಡ ತಸ್ತಕ್ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರದಿಂದ ಒಟ್ಟು 4.50 ಕೋಟಿ ವರ್ಷಾಸನ ಬಿಡುಗಡೆಯಾಗಲಿದೆ.
ಅನುದಾನದೊಂದಿಗೆ 1500 ರೂ ಬೆಲೆಯ ಆಹಾರ ಕಿಟ್ ವಿತರಿಸಲಿರುವುದಾಗಿ ತಿಳಿದುಬಂದಿದೆ. 50 ಸಾವಿರ ಅರ್ಚಕರಿಗೆ ಆಹಾರ ಕಿಟ್ ವಿತರಿಸಲು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಬುಧವಾರ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಹೂವು ಬೆಳೆಗಾರರು, ಬೀದಿ ಬದಿ ವ್ಯಾಪಾರಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ವಿಶೇಷ ಪ್ಯಾಕೇಜ್ ಅಡಿ ಸಹಾಯಧನ ಘೋಷಿಸಿದ್ದರು. ಸರ್ಕಾರ ಘೋಷಣೆ ಮಾಡಿದ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನಿಂದಾಗಿ ಸುಮಾರು 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದರು.












Click it and Unblock the Notifications