ತುಮಕೂರು ಜಿಲ್ಲಾಸ್ಪತ್ರೆ ದುರಂತ: ಮೃತ ಮಹಿಳೆಯ ಪುತ್ರಿಗೆ 10 ಲಕ್ಷ ರೂ. ನೆರವು
ತುಮಕೂರು, ನವೆಂಬರ್ 16: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಇಬ್ಬರು ಅವಳಿ ಮಕ್ಕಳು ಸಾವಿಗೀಡಾಗಿದ್ದು, ಮೃತ ಮಹಿಳೆಯ ಪುತ್ರಿಗೆ ಸರ್ಕಾರದಿಂದ ಸಚಿವ ಡಾ.ಕೆ ಸುಧಾಕರ್ 10 ಲಕ್ಷ ರೂಪಾಯಿ ಚೆಕ್ ವಿತರಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಇಬ್ಬರು ಅವಳಿ ಮಕ್ಕಳು ಸಾವು ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸಚಿವ ಸುಧಾಕರ್ ಅವರ ರಾಜೀನಾಮೆಗೂ ವಿಪಕ್ಷಗಳು ಆಗ್ರಹಿಸಿದ್ದವು. ಇದೀಗ ಸಚಿವರು ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ತುಮಕೂರಿನ ಅಮರಜ್ಯೋತಿ ನಗರದಲ್ಲಿರುವ ಸರ್ಕಾರಿ ಬಾಲಮಂದಿರಕ್ಕೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮೃತ ಕಸ್ತೂರಿ ಪುತ್ರಿ ಶಂಕರಿಗೆ ಸರ್ಕಾರದಿಂದ 10 ಲಕ್ಷ ರೂ. ಚೆಕ್ ವಿತರಣೆ ಮಾಡಿದರು. ಬಾಲಕಿ ಹೆಸರಿನಲ್ಲಿ ಎಫ್ಡಿ ಮಾಡಲಿದ್ದು, 18 ವರ್ಷ ವಯಸ್ಸಿನ ಬಳಿಕ ಹಣ ಹಸ್ತಾಂತರಿಸಲಾಗುತ್ತದೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ್ದೇವೆ. ಒಟಿಯಲ್ಲಿ ರೋಗಿ, ಡಾ.ಉಷಾ ಇಬ್ಬರೂ ಮಾತಾಡೋದು ಇದೆ. ಕಮಿಷನರ್ ದರ್ಜೆ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ತನಿಖೆಯ ವರದಿ ಬಳಿಕ ತೀರ್ಮಾನ ಆಗುತ್ತೆ, ಅಲ್ಲಿವರೆಗೂ ಅವರು ಅಮಾನತ್ತಿನಲ್ಲಿರುತ್ತಾರೆ.ಅದೇ ಪರ್ನಮೆಂಟ್ ಸಸ್ಪೆಷನ್ ಅಲ್ಲ.

ಅವರು ತಪ್ಪಿತಸ್ಥ ಅಲ್ಲ ಅಂತ ಗೊತ್ತಾದ್ರೆ, ಅವರ ಅಮಾನತ್ತು ವಾಪಸ್ ಆಗುತ್ತೆ ಎಂದರು.
ತಾಯಿ ನವಜಾತ ಶಿಶುಗಳ ಮರಣ ಪ್ರಕರಣರ ತನಿಖೆ ವರದಿ ಶೀಘ್ರದಲ್ಲಿ ಬರಲಿದೆ, ಜಿಲ್ಲೆಯಲ್ಲಿ ಎಲ್ಲಿಯೂ ವೈದ್ಯರ ಕೊರತೆಯಿಲ್ಲ. ಎರಡು ವರ್ಷದಲ್ಲಿ ವೈದ್ಯರನ್ನು ತುಂಬಿಸಿದ್ದೇವೆ, ಕೆಲ ಸಿಬ್ಬಂದಿಗಳ ವರ್ತನೆಯಿಂದ ಈ ರೀತಿಯಾಗಿದೆ ಎಂಬುದು ಗೊತ್ತಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಸಹಾಯವಾಣಿ ತೆರಯಲಾಗುವುದು. ಸಹಾಯವಾಣಿಯಲ್ಲಿ ನಾಲ್ವರು ಸಿಬ್ಬಂದಿಗಳು ಕೆಲಸ ಮಾಡಲಿದ್ದಾರೆ ಎಂದರು.
ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಸಿ-ಸೆಕ್ಷನ್ ಹೆರಿಗೆ ಕುರಿತು ನಿಗಾ ವಹಿಸಲು ಸಮಿತಿ ರಚಿಸಲಾಗುವುದು. ಸಿ-ಸೆಕ್ಷನ್ ಹೆರಿಗೆ ಹೆಚ್ಚಳಕ್ಕೆ ಕಡಿವಾಣ ಹಾಕಲಾಗುವುದು ಎಂದು ಡಾ.ಕೆ.ಸುಧಾಕರ್ ತಿಳಿಸಿದರು.
ತುಮಕೂರಿನ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಸಿ ಸೆಕ್ಷನ್ ಹೆರಿಗೆ ಕುರಿತು ನಿಗಾ ವಹಿಸಲು ಸಮಿತಿ ರಚಿಸಲಾಗುವುದು. ಸಿ ಸೆಕ್ಷನ್ ಪ್ರಮಾಣ 20-40% ಒಳಗೆ ಇರಬೇಕಾಗುತ್ತದೆ. ಇದರಲ್ಲಿ ಉದ್ದೇಶಪೂರ್ವಕ ಅಥವಾ ಭ್ರಷ್ಟಾಚಾರ ಇರಬಾರದು. ಇದಕ್ಕೆ ಕಡಿವಾಣ ಹಾಕಲಾಗುವುದು. ಜಿಲ್ಲಾ ಸರ್ಜನ್, ಎಲ್ಲಾ ವಿಭಾಗದ ಮುಖ್ಯಸ್ಥರೊಂದಿಗೆ ಪ್ರತಿ ಶುಕ್ರವಾರ ಸಭೆ ನಡೆಸಿ ಚರ್ಚಿಸಬೇಕು. ಲೋಪಗಳು ಕಂಡುಬಂದರೆ ಕೂಡಲೇ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾಸ್ಪತ್ರೆಯನ್ನು ಪರಿಶೀಲಿಸಬೇಕೆಂದು ಸೂಚಿಸಲಾಗಿದೆ ಎಂದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 44 ತಜ್ಞ ವೈದ್ಯರ ಹುದ್ದೆ ಮಂಜೂರಾಗಿದೆ. ಅದರಲ್ಲಿ 42 ತಜ್ಞರು ಕೆಲಸ ಮಾಡುತ್ತಿದ್ದಾರೆ. 2 ಹುದ್ದೆ ಮಾತ್ರ ಖಾಲಿ ಇದ್ದು, ವೈದ್ಯರ ಕೊರತೆ ಇಲ್ಲ. ಇಲ್ಲಿ 250 ಹಾಸಿಗೆ ಇದ್ದು, 2003 ರಲ್ಲಿ 400 ಕ್ಕೆ ಹೆಚ್ಚಿಸಲಾಗಿದೆ. ಇದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಸೃಜಿಸಿಲ್ಲ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಸಹಾಯವಾಣಿ ಆರಂಭಿಸಲಾಗುವುದು. ಇಲ್ಲಿ 4 ಸಿಬ್ಬಂದಿ ಹಗಲು-ರಾತ್ರಿ ಎರಡು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ರೋಗಿಗಳ ಕುಟುಂಬದವರು ಬಂದಾಗ ಅವರಿಗೆ ನೆರವು ನೀಡಲಾಗುತ್ತದೆ. ಡಯಾಲಿಸಿಸ್ ಸೇವೆಗೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಹೊಸ ಸಂಸ್ಥೆ ನಿಗದಿಯಾಗಲಿದೆ. ಡಯಾಲಿಸಿಸ್ ಮಾಡುವ ಸಂಖ್ಯೆಯನ್ನು 30 ಸಾವಿರದಿಂದ 60 ಸಾವಿರಕ್ಕೆ ಏರಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದ್ದು, ಕಟ್ಟಡ ಕಾಮಗಾರಿ ಪರಿಶೀಲಿಸಲಾಗಿದೆ. ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಹೇಳಲಾಗಿದೆ. ತುಮಕೂರಿಗೆ 100 ಹಾಸಿಗೆಗಳ, 40 ಕೋಟಿ ರೂ. ವೆಚ್ಚದ ತುರ್ತು ಆರೈಕೆ ಆಸ್ಪತ್ರೆ ಮಂಜೂರು ಮಾಡಿಸಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಲಿದೆ. 20 ಕೋಟಿ ರೂ. ವೆಚ್ಚದಲ್ಲಿ ಹೊಸ ನರ್ಸಿಂಗ್ ಕಾಲೇಜು, ಜಿಲ್ಲಾಸ್ಪತ್ರೆ ಆವರಣದಲ್ಲೇ ನಿರ್ಮಾಣವಾಗಲಿದ್ದು, ಇದಕ್ಕೂ ಮುಖ್ಯಮಂತ್ರಿಗಳೇ ಶಂಕುಸ್ಥಾಪನೆ ಮಾಡಲಿದ್ದಾರೆ. 28 ಲಕ್ಷ ಜನರು ತುಮಕೂರು ಜಿಲ್ಲೆಯಲ್ಲಿದ್ದು, ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 144 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಬಹುಪಾಲು ವೈದ್ಯರ ಹುದ್ದೆ ಭರ್ತಿಯಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ 8 ತಜ್ಞ ವೈದ್ಯರ ಹುದ್ದೆ ತುಂಬಲು ಕ್ರಮ ವಹಿಸಲಾಗುವುದು. ಸ್ಟಾಫ್ ನರ್ಸ್, ಲ್ಯಾಬ್ ತಂತ್ರಜ್ಞರು, ಗ್ರೂಪ್ ಡಿ ನೌಕರರ ಹುದ್ದೆ ಬಹಳ ಖಾಲಿ ಇದೆ. ಇವುಗಳನ್ನೂ ಶೀಘ್ರವೇ ಭರ್ತಿ ಮಾಡಲಾಗುವುದು ಎಂದರು.
ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ನಿರ್ಮಿಸಲಾಗುತ್ತಿದ್ದು, 288 ಸಿದ್ಧವಾಗಿದೆ. ಇದೇ ತಿಂಗಳು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಮೊದಲಿಗೆ 200 ಕ್ಕೂ ಹೆಚ್ಚು ಕ್ಲಿನಿಕ್ ಆರಂಭವಾಗಲಿವೆ. ತುಮಕೂರಿನಲ್ಲಿ ಒಟ್ಟು 10 ಕ್ಲಿನಿಕ್ ಆರಂಭವಾಗಲಿವೆ. ಮಹಿಳೆಯರ ಕ್ಲಿನಿಕ್‌ಗೆ ʼಆಯುಷ್ಮತಿ ಕ್ಲಿನಿಕ್ʼ ಎಂದು ಹೆಸರಿಡಲಾಗಿದೆ ಎಂದರು.












Click it and Unblock the Notifications