ಆರ್ ಆರ್ ನಗರ ಗೆದ್ದರೂ ಸದನದಲ್ಲಿ ಕಾಂಗ್ರೆಸ್ ಸಂಖ್ಯೆ ಹೆಚ್ಚಾಗಲ್ಲ!
ಬೆಂಗಳೂರು, ಮೇ 31: ಭಾರಿ ಕುತೂಹಲ ಮೂಡಿಸಿದ್ದ ರಾಜರಾಜೇಶ್ವರಿ ನಗರ ಚುನಾವಣೆ ಫಲಿತಾಂಶ ಗುರುವಾರ ಮಧ್ಯಾಹ್ನದ ವೇಳೆ ಘೋಷಣೆಯಾಗಿದ್ದು, ಹಾಲಿ ಶಾಸಕ ಮುನಿರತ್ನಂ ನಾಯ್ಡು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರ ವಿರುದ್ಧ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಆದರೆ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರೂ ಸದನದಲ್ಲಿ ಕಾಂಗ್ರೆಸ್ ಸಂಖ್ಯಾಬಲ ಹಾಗೆ ಉಳಿಯಲಿದೆ.
ಚುನಾವಣಾ ಆಕ್ರಮದಿಂದಾಗಿ ರಾಜರಾಜೇಶ್ವರಿ ನಗರ ಚುನಾವಣೆ ಮೇ 28ಕ್ಕೆ ಮುಂದೂಡಲ್ಪಟ್ಟಿತ್ತು. ಹಾಲಿ ಶಾಸಕ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಜೂನ್ 11ರಂದು ನಡೆಯಲಿದೆ.

ಚುನಾವಣಾ ಅಕ್ರಮದ ಆರೋಪ ಹೊತ್ತಿದ್ದರೂ ಮುನಿರತ್ನ ಅವರನ್ನು ಕಣದಲ್ಲಿ ಉಳಿಸಿಕೊಳ್ಳಲಾಯಿತು. ಜೆಡಿಎಸ್ ಜತೆ ಮೈತ್ರಿ ಇದ್ದರೂ ಕಣದಲ್ಲಿದ್ದ ಅಭ್ಯರ್ಥಿಗಳನ್ನು ಹಿಂದಕ್ಕೆ ಕರೆಸಲು ಕಷ್ಟವಾಗಿತ್ತು.
ಎಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಸ್ಥಾಪನೆ ಮಾಡಿ, ಸದನದಲ್ಲಿ ಬಹುಮತ ಸಾಬೀತು ಮಾಡಿದ್ದಾರೆ. ಆದರೂ ಕಾಂಗ್ರೆಸ್ ಸಂಖ್ಯಾಬಲ 78ರಿಂದ 79ಕ್ಕೆ ಏರಿಕೆಯಾಗುವುದಿಲ್ಲ. ಆರ್ ಆರ್ ನಗರದಲ್ಲಿ ಮುನಿರತ್ನ ನಾಯ್ಡು ಗೆದ್ದರೂ ಮೈತ್ರಿ ಸರ್ಕಾರದ ಬಲ 116ರಂತೆ ಇರುತ್ತದೆ.
ಕಾಂಗ್ರೆಸ್ಸಿನ ಹಾಲಿ ಶಾಸಕ ಜಮಖಂಡಿಯ ಸಿದ್ದು ನ್ಯಾಮಗೌಡ ಅವರು ಅಪಘಾತದಲ್ಲಿ ದುರ್ಮರಣ ಹೊಂದಿದ ಕಾರಣ, ಕಾಂಗ್ರೆಸ್ ಸಂಖ್ಯೆ ಹಾಗೆ ಉಳಿಯಲಿದೆ. ಇನ್ನು ಜಯನಗರ, ರಾಮನಗರಕ್ಕೆ ಚುನಾವಣೆ ನಡೆಯಬೇಕಿದೆ. ಜಮಖಂಡಿಗೂ ಚುನಾವಣೆ ದಿನಾಂಕ ಘೋಷಿಸಬೇಕಿದೆ.











Click it and Unblock the Notifications