D Roopa vs Rohini Sindhuri : ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರು, ಫೆಬ್ರವರಿ 22; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ಸರ್ಕಾರ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿತ್ತು.
ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಈಗ ಕೋರ್ಟ್ ಮೆಟ್ಟಿಲೇರಿದೆ. ರೋಹಿಣಿ ಸಿಂಧೂರಿ ರೂಪಾ ಅವರು ತಮ್ಮ ಬಗ್ಗೆ ವಿಚಾರ ಪ್ರಸ್ತಾಪ ಮಾಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಬುಧವಾರ ರೋಹಿಣಿ ಸಿಂಧೂರಿ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರೂಪಾ ಮೌದ್ಗಿಲ್ ಸಾಮಾಜಿಕ ಜಾಲತಾಣದ ಮೂಲಕ ನನ್ನ ವೈಯಕ್ತಿತ ತೇಜೋವಧೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ರೂಪಾ ಮೌದ್ಗಿಲ್ ನನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ನನ್ನ ಮೊಬೈಲ್ ನಂಬರ್ ಸಾರ್ವಜನಿಕಗೊಳಿಸಿದ್ದಾರೆ. ಇದರಿಂದಾಗಿ ನನಗೆ ನೂರಾರು ಕರೆ ಬರುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿಯ ವಿಚಾರಣೆ ಸಮಯದಲ್ಲಿ ರೋಹಿಣಿ ಸಿಂಧೂರಿ ಪರ ವಕೀಲರಿಗೆ ನ್ಯಾಯಾಧೀಶರು ರೂಪಾ ಮೌದ್ಗಿಲ್ ವಿರುದ್ಧ ಸೂಕ್ತ ಪ್ರಾಧಿಕಾರದಲ್ಲಿ ದೂರು ನೀಡಬಹುದಿತ್ತಲ್ಲ? ಎಂದು ಪ್ರಶ್ನೆ ಮಾಡಿದರು.
ರೋಹಿಣಿ ಸಿಂಧೂರಿ ಪರ ವಕೀಲರು ಕಾನೂನಾತ್ಮಕವಾಗಿಯೇ ಈ ಅರ್ಜಿ ದಾಖಲು ಮಾಡಿದ್ದೇನೆ. ರೂಪಾ ಮೌದ್ಗಿಲ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಕೋರ್ಟ್‌ಗೆ ವಿವರಣೆ ನೀಡಿದರು.
ಆಗ ನ್ಯಾಯಾಧೀಶರು ಸರ್ಕಾರದ ಮುಖ್ಯ ಕಾರ್ಯದರ್ಶಿ ಸಕ್ಷಮ ಪ್ರಾಧಿಕಾರವೇ? ಎಂದು ಪ್ರಶ್ನೆ ಮಾಡಿದರು. ಸರ್ಕಾರದ ನಿಯಮಾವಳಿ ಮೀರಿ, ಸುತ್ತೋಲೆ ಧಿಕ್ಕರಿಸಿ ಹೇಳಿಕೆ ನೀಡಿದ್ದರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ಕೊಟ್ಟರು.
ರೂಪಾ ಮೌದ್ಗಿಲ್ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡು ಮೊಬೈಲ್ ಮೂಲಕ ಮಾಹಿತಿ ತರಿಸಿಕೊಂಡಿದ್ದಾರೆ ಎಂದು ಸಹ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಾಲಯ ಫೆಬ್ರವರಿ 23ರ ಗುರುವಾರಕ್ಕೆ ಆದೇಶ ಕಾಯ್ದಿರಿಸಿದೆ. ರೂಪಾ ಫೇಸ್‌ಬುಕ್ ಪೋಸ್ಟ್ ಹಾಕದಂತೆ ತಡೆಯಾಜ್ಞೆ ಸಿಗಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications