Karnataka Bjp: ವಿಜಯೇಂದ್ರ-ಅಶೋಕ್ ನಡುವೆ ಈ ಕಾರಣಕ್ಕೆ ಮೂಡಿದೆ ಬಿರುಕು
ಬಣ ಬಡಿದಾಟದಲ್ಲಿ ಬೇಯುತ್ತಿದ್ದ ಬಿಜೆಪಿಯು ಇತ್ತೀಚೆಗಷ್ಟೇ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯಿಂದ ತಣ್ಣಗಾಗಿದೆ. ಇನ್ನೇನು ತನ್ನ ಹಾದಿ ಸುಗಮವಾಯ್ತಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನ ಸೇಫ್ ಎಂದುಕೊಂಡು ನಿರಾಳರಾಗಿದ್ದಾರೆ. ಇದರ ನಡುವೆ ಪಕ್ಷದಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ. ವಿಪಕ್ಷ ನಾಯಕ ಸ್ಥಾನದಲ್ಲಿರುವ ಆರ್.ಅಶೋಕ್ ಹಾಗೂ ಬಿವೈ ವಿಜಯೇಂದ್ರ ನಡುವೆ ಕೆಲ ವಿಚಾರಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಪಕ್ಷದಿಂದಲೇ ಅಪಸ್ವರ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿಯಲ್ಲಿ ಕೆಲ ಸಂಗತಿಗಳು ನಡೆದಿವೆ.
ಸದನದಲ್ಲಿ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಹಲವು ಶಾಸಕರನ್ನು ಇತ್ತೀಚೆಗೆ ಅಮಾನತು ಮಾಡಿತ್ತು. ವಿಧಾನಸಭೆ ಅಧಿವೇಶನದ ವೇಳೆ ಸಭಾಧ್ಯಕ್ಷರ ಪೀಠದ ಬಳಿ ಗದ್ದಲ ಮಾಡಿದ್ದ ಪಕ್ಷದ 18 ಶಾಸಕರ ಅಮಾನತು ಮಾಡಲಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿ ದೊಡ್ಡ ಪ್ರತಿಭಟನೆಗೆ ಕರೆಯೂ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದು ಪ್ಲ್ಯಾನ್ ಕೂಡ ಮಾಡಿಕೊಂಡಿತ್ತು. ಇದೇ ವಿಚಾರವಾಗಿ ಆರ್.ಅಶೋಕ್ ಅವರ ನಡೆಯು ಪಕ್ಷಕ್ಕೆ ತಿರುಗುಬಾಣವಾಗಿದೆ ಎಂದು ಹೇಳಲಾಗುತ್ತಿದೆ.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದಿಂದ ಉಚ್ಛಾಟನೆಗೊಂಡಿದ್ದರೂ ಶಾಸಕರ ಅಮಾನತು ಮಾಡುವಂತೆ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಆರ್.ಅಶೋಕ್ ಕೂಡ ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದು ಶಾಸಕರ ಅಮಾನತು ವಾಪಸ್ ಪಡೆಯುವಂತೆ ಕೋರಿದ್ದಾರೆ. ಇದು ಬಿಜೆಪಿ ಪಾಲಿಗೆ ದೊಡ್ಡ ಹಿನ್ನಡೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಅಶೋಕ್ ಅವರಿಂದ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಅಶೋಕ್ ಅವರು ಸ್ಪೀಕರ್‌ಗೆ ಈ ಪತ್ರ ಬರೆದಿರುವುದು ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿದ್ದು, ತಮ್ಮ ಹೋರಾಟಕ್ಕೆ ಹಿನ್ನಡೆ ಉಂಟುಮಾಡಿದೆ. ಇದರಿಂದ ಪಕ್ಷ ಇಕ್ಕಟ್ಟಿಗೆ ಸಿಲುಕುವಂತಾಗಿದೆ ಎಂದು ಸ್ವಪಕ್ಷದಿಂದಲೇ ಆಕ್ಷೇಪ ವ್ಯಕ್ತವಾಗಿದೆ.
ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪಕ್ಷದಲ್ಲೇ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವನ್ನು ವಿಜಯೇಂದ್ರ ಕೂಡ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ದೂರು ಕೂಡ ಕೊಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇದೇ ವಿಚಾರವಾಗಿ ಅಶೋಕ್ ಅವರು ಬೇಸರ ವ್ಯಕ್ತಪಡಿಸಿದ್ದರು. ಆಗಿನಿಂದಲೂ ಇಬ್ಬರ ನಡುವೆ ಬಿರುಕು ಮೂಡಿದ್ದು, ಮೇಲ್ನೋಟಕ್ಕೆ ಮಾತ್ರವೇ ಒಗ್ಗಟ್ಟಿನ ಬಲ ಪ್ರದರ್ಶಿಸುತ್ತಿದ್ದಾರಂತೆ.
ಅಲ್ಲದೆ ವಿಧಾನಸಭೆ ಕಲಾಪದ ವೇಳೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಅಶೋಕ್ ಪರಿಣಾಮಕಾರಿಯಾಗಿಲ್ಲ. ಶಾಸಕರ ನಿಲುವಿಗೆ ಸ್ಪಂದಿಸುವುದೂ ಇಲ್ಲ. ಧರಣಿಗೆ ಹೊರಟರೆ, ಅದಕ್ಕೆ ತಡೆಯುತ್ತಾರೆ ಎಂದು ಬಿಜೆಪಿ ಶಾಸಕರು ಕೂಡ ಅಶೋಕ್ ವಿರುದ್ಧ ದೂರಿದ್ದಾರೆ. ಈಗಲೂ ಶಾಸಕರ ಅಮಾನತು ವಿಚಾರವಾಗಿ ಪಕ್ಷವು ಪ್ರತಿಭಟನೆಗೆ ಕರೆ ಕೊಟ್ಟಿದ್ದರೆ, ಅಶೋಕ್ ಅವರು ಸ್ಪೀಕರ್ ಅವರನ್ನ ಓಲೈಸುವ ರೀತಿಯಲ್ಲಿ ಪತ್ರ ಬರೆದಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಅಶೋಕ್ ವಿರುದ್ಧವೂ ಬಿಜೆಪಿಯಲ್ಲಿ ಹಲವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications