Breaking; ಬಿಜೆಪಿ ಸೇರಿದ ನಿವೃತ್ತ ಕೆಎಎಸ್ ಅಧಿಕಾರಿ
ಬೆಂಗಳೂರು, ನವೆಂಬರ್ 18; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಸೇರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಿವೃತ್ತ ಕೆಎಎಸ್ ಅಧಿಕಾರಿಯೊಬ್ಬರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷ ಸೇರಿದರು.
ಶುಕ್ರವಾರ ಶಿವಮೊಗ್ಗದಲ್ಲಿ ಶಿಕಾರಿಪುರ ಕ್ಷೇತ್ರದ ಜೆಡಿಎಸ್ ನಾಯಕ, ನಿವೃತ್ತ ಕೆಎಎಸ್ ಅಧಿಕಾರಿ ಎಚ್. ಟಿ. ಬಳಿಗಾರ್ ಬಿಜೆಪಿ ಸೇರಿದರು. ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ. ವೈ. ರಾಘವೇಂದ್ರ, ಕೆ. ಎಸ್. ಈಶ್ವರಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಚ್. ಟಿ. ಬಳಿಗಾರ್ 2018ರ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 13,191 ಮತಗಳನ್ನು ಪಡೆದು ಸೋಲುಕಂಡಿದ್ದರು. ಈ ಬಾರಿ ಚುನಾವಣೆ ಹತ್ತಿರವಾಗುತ್ತಿರುವಾಗ ಬಿಜೆಪಿ ಸೇರಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಮಾತುಕತೆ; ಎಚ್. ಟಿ. ಬಳಿಗಾರ್ ಬಿಜೆಪಿ ಸೇರುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದರು. ಅವರು ಜೆಡಿಎಸ್ ತೊರೆಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ವಾಲ್ಮೀಕಿ ಸಮುದಾಯದ ನಾಯಕರಾದ ಎಚ್. ಟಿ. ಬಳಿಗಾರ್ ಶಿಕಾರಿಪುರ ತಾಲೂಕಿನ ಮುತ್ತಿಕೋಟೆ ಗ್ರಾಮದವರು. ಕೆಎಎಸ್ ಅಧಿಕಾರಿಯಾಗಿದ್ದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಾಲೂಕಿನ ರಾಜಕೀಯಕ್ಕೆ ಧುಮುಕಿದ್ದರು.
ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ, ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪಗೆ ಎಚ್. ಟಿ. ಬಳಿಗಾರ್ ಆಪ್ತರು. ಜೆಡಿಎಸ್ ಪಕ್ಷದಿಂದ ಅವರು ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.
ಎಚ್. ಟಿ. ಬಳಿಗಾರ್ ಬಿಜೆಪಿ ಸೇರಿದ ಬಳಿಕ ಮಾತನಾಡಿದ ಯಡಿಯೂರಪ್ಪ, "ಪಕ್ಷದ ಸಿದ್ಧಾಂತ ಒಪ್ಪಿ, ಪ್ರಧಾನಿ ಮೋದಿಯವರು ಮಾಡುತ್ತಿರುವ ಜನಪರ ಕೆಲಸಗಳನ್ನು ಮೆಚ್ಚಿ ಬಂದಿರುವುದು ಸ್ವಾಗತಾರ್ಹ. ಅವರ ಅರ್ಹತೆಗೆ ತಕ್ಕಂತೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುತ್ತದೆ" ಎಂದರು.
"ಎಚ್. ಟಿ. ಬಳಿಗಾರ್ ಬಹಳ ಹಿಂದೆಯೇ ಪಕ್ಷಕ್ಕೆ ಬರಬೇಕಿತ್ತು. ಆದರೆ ಬೇರೆ ಬೇರೆ ಕಾರಣಕ್ಕೆ ಮುಂದೂಡಿದ್ದರು. ಸ್ವಯಂ ನಿವೃತ್ತಿ ಪಡೆದು ಜನ ಸೇವೆ ಮಾಡಲು ಅವರು ರಾಜಕೀಯಕ್ಕೆ ಬಂದರು. ಈಗ ನಮ್ಮ ಪಕ್ಷಕ್ಕೆ ಬಂದಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ" ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications