ಬಿಜೆಪಿ ಸೇರಿದ ನಿವೃತ್ತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ
ಬೆಂಗಳೂರು, ಏಪ್ರಿಲ್ 04 : ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಬಿಜೆಪಿ ಸೇರಿದರು. ಕಲಬುರಗಿ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರ ಪರವಾಗಿ ಪ್ರಚಾರ ನಡೆಸಿದರು.
ಕೆ.ರತ್ನಪ್ರಭಾ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹಬ್ಬಿತ್ತು. ಬುಧವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕಲಬುರಗಿಯಲ್ಲಿ ಕೆ.ರತ್ನಪ್ರಭಾ ಅವರು ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ಸೇರಿದ ಬಳಿಕ ಕೆ.ರತ್ನಪ್ರಭಾ ಅವರು ಡಾ.ಉಮೇಶ್ ಜಾಧವ್ ಅವರ ನಾಮಪತ್ರ ಸಲ್ಲಿಕೆ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕಲಬುರಗಿ ಕ್ಷೇತ್ರದಿಂದ ಕೆ.ರತ್ನಪ್ರಭಾ ಅವರು ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಲವು ದಿನಗಳ ಹಿಂದೆ ಹಬ್ಬಿತ್ತು.
'ಬಿಜೆಪಿ ಇಂದಿನ ಪ್ರಸಿದ್ಧ ರಾಷ್ಟ್ರೀಯ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶಿಷ್ಟ ಮಾದರಿಯಲ್ಲಿ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ನಿವೃತ್ತಿಯ ಬಳಿಕ ಜನರ ಸೇವೆ ಮಾಡಲು ರಾಜಕೀಯವೇ ಉತ್ತಮ ಮಾರ್ಗ ಎಂದು ಅಂದುಕೊಂಡಿದ್ದೆ' ಎಂದು ರತ್ನಪ್ರಭಾ ಹೇಳಿದರು.

1981ನೇ ಬ್ಯಾಚ್ ಅಧಿಕಾರಿ
ಕೆ.ರತ್ನಪ್ರಭಾ ಅವರು 1981ನೇ ಬ್ಯಾಚ್ ಐಎಎಸ್ ಅಧಿಕಾರಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2017ರ ನವೆಂಬರ್‌ನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರು ರಾಜ್ಯದ 3ನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡರು.
2018ರ ಮಾರ್ಚ್‌ನಲ್ಲಿ ಅವರು ನಿವೃತ್ತರಾಗಬೇಕಿತ್ತು. ಆದರೆ, ಸರ್ಕಾರ ಅವರ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿತ್ತು. 2018ರ ಜೂನ್‌ನಲ್ಲಿ ನಿವೃತ್ತರಾಗಿದ್ದಾರೆ.

ಹೈದರಾಬಾದ್ ಮೂಲದವರು
ಕರ್ನಾಟಕದಲ್ಲಿ 37 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿರುವ ಕೆ.ರತ್ನಪ್ರಭಾ ಅವರು ಹೈದರಾಬಾದ್ ಮೂಲದವರು. ತಂದೆ ಸಿವಿಲ್ ಇಂಜಿನಿಯರ್ ಆಗಿದ್ದರು. ತಾಯಿ ವೈದ್ಯೆ. ರತ್ನಪ್ರಭಾ ಅವರ ಸಹೋದರ ಸಹ ನಾಗರಿಕ ಸೇವೆಯಲ್ಲಿದ್ದಾರೆ.

ಬೀದರ್‌ನಿಂದ ಆರಂಭ
ಕೆ.ರತ್ನಪ್ರಭಾ ಅವರು 1981ರಲ್ಲಿ ಬೀದರ್‌ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಸರ್ಕಾರಿ ಸೇವೆಯನ್ನು ಆರಂಭಿಸಿದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ನಿವೃತ್ತಿ ನಂತರವೂ ಸೇವೆ
ರಾಜಕೀಯಕ್ಕೆ ಬಂದಿದ್ದು ಏಕೆ ಎಂಬ ಕುರಿತು ಪ್ರತಿಕ್ರಿಯೆ ನೀಡಿರುವ ರತ್ನಪ್ರಭಾ ಅವರು, 'ನಿವೃತ್ತಿಯ ನಂತರವೂ ನಾನು ಜನರ ಸೇವೆಯನ್ನು ಮುಂದುವರೆಸಲು ತೀರ್ಮಾನಿಸಿದೆ. ಜನರನ್ನು ತಲುಪಲು ರಾಜಕೀಯ ಉತ್ತಮ ಮಾರ್ಗವಾಗಿದೆ. ಮಹಿಳೆಯರು ಮತ್ತು ಅಶಕ್ತರ ಪರವಾಗಿ ಕೆಲಸ ಮಾಡಲು ನಾನು ಇಷ್ಟ ಪಡುತ್ತೇನೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications