ಹೊರಗುತ್ತಿಗೆ ಸರ್ಕಾರಿ ಉದ್ಯೋಗಗಳಲ್ಲೂ ಮೀಸಲಾತಿ ಜಾರಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜುಲೈ 10: ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಆಯೋಜಿಸಿದ್ದ 'ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶ' ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದ ಸಿದ್ದರಾಮಯ್ಯ, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಕಾಂಗ್ರೆಸ್ ಪ್ರಣಾಳಿಕೆಯ ಭಾಗವಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ನಾವು ಬದ್ಧರಾಗಿದ್ದು, ಅಲ್ಲಿಯವರೆಗೆ ಹೊರಗುತ್ತಿಗೆ ಉದ್ಯೋಗಕ್ಕೆ ಮೊರೆ ಹೋಗಲಿದ್ದು, ಇದರಲ್ಲಿ ಮೀಸಲಾತಿ ಜಾರಿಗೆ ತರಲು ಚಿಂತನೆ ನಡೆಸಿದ್ದೇವೆ ಎಂದರು.

ಕರ್ನಾಟಕದಲ್ಲಿ 43 ಇಲಾಖೆಗಳಲ್ಲಿ 7.72 ಲಕ್ಷ ಹುದ್ದೆಗಳ ಮಂಜೂರಾತಿ ಆಗಿದ್ದು, ಪ್ರಸ್ತುತ 2.55 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇವೆ. ಸದ್ಯ 75,474 ಹೊರಗುತ್ತಿಗೆ ನೌಕರರಿದ್ದಾರೆ. ಚಾಲಕರು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳಂತಹ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಪೋಸ್ಟ್‌ಗಳಿಗೆ ಸಿಬ್ಬಂದಿಯನ್ನು ಒದಗಿಸಲು ಸರ್ಕಾರವು ಸಾಮಾನ್ಯವಾಗಿ ಏಜೆನ್ಸಿಗಳ ಮೊರೆ ಹೋಗುತ್ತದೆ ಎಂದರು.
ಹೊರಗುತ್ತಿಗೆ ಉದ್ಯೋಗಗಳಿಗೆ ಮೀಸಲಾತಿ ಈ ವಿಷಯದಲ್ಲಿ ಸರ್ಕಾರದ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಫೆಬ್ರವರಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ತಿಗೆ ಲಿಖಿತ ಉತ್ತರದಲ್ಲಿ ಗುತ್ತಿಗೆ ಆಧಾರಿತ ನೇಮಕಾತಿ ವಿಶೇಷ ವಿಧಾನ ಮತ್ತು ಅವು ನಿಯಮಿತ ನೇಮಕಾತಿಗಳಲ್ಲ ಎಂದಿದ್ದರು.
ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಷಡಕ್ಷರಿ ಡಿ.ಎಚ್. ಮಾತನಾಡಿ, ಸಿದ್ದರಾಮಯ್ಯ ಅವರ ಯೋಜನೆ ಸ್ವಾಗತಾರ್ಹ, ಆದರೆ ಹೆಚ್ಚಿನ ಚಿಂತನೆ ಮತ್ತು ಚರ್ಚೆ ಅಗತ್ಯವಿದೆ. ಹೊರಗುತ್ತಿಗೆ ಉದ್ಯೋಗದ ಸಂದರ್ಭದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಮೂರನೇ ವ್ಯಕ್ತಿಯ ಏಜೆನ್ಸಿಯ ಕೆಲಸವಾಗಿರುತ್ತದೆ. ಅಗತ್ಯವಿರುವ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲು ಏಜೆನ್ಸಿಯನ್ನು ಗುರುತಿಸಲು ಟೆಂಡರ್‌ಗಳನ್ನು ಕರೆಯುವುದು ಸರ್ಕಾರದ ಪಾತ್ರವಾಗಿದೆ. ಸರ್ಕಾರವು ಏಜೆನ್ಸಿಯು ಮೀಸಲಾತಿ ರೋಸ್ಟರ್ ಅನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗುತ್ತದೆ ಅವರು ವಿವರಿಸಿದರು.
ಮೇ 2022 ರಲ್ಲಿ, ಹೊರಗುತ್ತಿಗೆ ಉದ್ಯೋಗದಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿತ್ತು. ಸಾಮಾನ್ಯವಾಗಿ ಪುರುಷರಿಗೆ ಹೊರಗುತ್ತಿಗೆ ನೀಡಲಾಗುವ ಡ್ರೈವಿಂಗ್, ಡಾಟಾ ಎಂಟ್ರಿ, ಹೌಸ್‌ಕೀಪಿಂಗ್ ಮತ್ತು ಇತರ ಕೆಲಸಗಳನ್ನು ನಿಭಾಯಿಸಲು ಮಹಿಳೆಯರು ಸಮಾನ ಸಾಮರ್ಥ್ಯ ಹೊಂದಿದ್ದಾರೆ ಎಂದು ಆಗಿನ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದರು.
ಇದೇ ವೇಳೆ ಸಮಾರಂಭದಲ್ಲಿ ಮಹಿಳೆಯರಿಗೆ ಋತುಚಕ್ರದ ರಜೆ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸರ್ಕಾರ ಈ ಬಗ್ಗೆ ಪರಿಶೀಲಿಸಲಿದೆ ಎಂದರು. ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ ಸದಸ್ಯರ ನೇಮಕಾತಿಗಾಗಿ ಸರ್ಕಾರವು ಶೀಘ್ರದಲ್ಲೇ ಆಯ್ಕೆ ಸಮಿತಿಯನ್ನು ರಚಿಸಲಿದೆ. ಕೋಮುವಾದಿ ಮತ್ತು ಸಾಮಾಜಿಕ ಸೌಹಾರ್ದತೆಗೆ ಭಂಗ ತರುವವರಿಗೆ ಜಾಗ ಸಿಗದಂತೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು.












Click it and Unblock the Notifications