Republic day 2024; ಜಿಲ್ಲೆಗಳಿಗೆ 1 ಲಕ್ಷ ರೂ. ಅನುದಾನ ಬಿಡುಗಡೆ
ಬೆಂಗಳೂರು, ಜನವರಿ 23: ಗಣರಾಜ್ಯೋತ್ಸವ 2024ರ ಆಚರಣೆಗೆ ಕರ್ನಾಟಕ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಈ ಕುರಿತು ಆದೇಶ ಹೊರಡಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಪಿ. ಎನ್. ನಾಗಪ್ರಶಾಂತ್ ಸರ್ಕಾರದ ಅಧೀನ ಕಾರ್ಯದರ್ಶಿ-1, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದ್ದಾರೆ.

ಈ ಆದೇಶ ಜನವರಿ 26, 2024ರಂದು ನಡೆಯಲಿರುವ ರಾಜ್ಯ/ ಜಿಲ್ಲಾ/ ತಾಲ್ಲೂಕು ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಸರ್ಕಾರದ ನೀತಿಯಂತೆ ಪ್ರತಿ ವರ್ಷ ಜನವರಿ 26, 2024ರಂದು ಗಣರಾಜ್ಯೋತ್ಸವ ದಿನಾಚರಣೆಯನ್ನು ರಾಜ್ಯ/ ಜಿಲ್ಲಾ/ ತಾಲ್ಲೂಕು ಮಟ್ಟದಲ್ಲಿ ಸಂಭ್ರಮದಿಂದ ಸರ್ಕಾರದ ಕಾರ್ಯಕ್ರಮವಾಗಿ ಆಚರಿಸುತ್ತಿದ್ದು, ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ರೂ 50 ಲಕ್ಷಗಳು, ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಗೆ ರೂ.1 ಲಕ್ಷ ಮತ್ತು ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕಿಗೆ ರೂ. 20,000ಗಳ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ.
ಜನವರಿ 26, 2024ರಂದು ನಡೆಯಲಿರುವ ರಾಜ್ಯ/ ಜಿಲ್ಲಾ/ ತಾಲ್ಲೂಕು ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ನಿಯಮಾನುಸಾರ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ದಿನಾಂಕ 8/1/2024ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.
ಆದ್ದರಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ. 2024ನೇ ಸಾಲಿನ ರಾಜ್ಯ/ ಜಿಲ್ಲಾ/ ತಾಲ್ಲೂಕು ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಿ ಈ ಆದೇಶ ಹೊರಡಿಸಲಾಗಿದೆ.
ಆದೇಶದ ವಿವರಗಳು; ರಾಜ್ಯ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭವನ್ನು ಬೆಂಗಳೂರು ನಗರದಲ್ಲಿ ದಿನಾಂಕ 26/01/2024ರಂದು ಏರ್ಪಡಿಸುವ ನಿಮಿತ್ತ ಬೆಂಗಳೂರು ನಗರ ಜಿಲ್ಲೆಗೆ ರೂ. 50 ಲಕ್ಷಗಳನ್ನು ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಬಿಡುಗಡೆ
ಮಾಡಲಾಗಿದೆ.
ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭವನ್ನು ಆಚರಿಸುವ ಸಂಬಂಧ 30 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ರೂ. 1 ಲಕ್ಷ ರೂ. ನಂತೆ ಒಟ್ಟು ರೂ .30 ಲಕ್ಷ ಮೊತ್ತವನ್ನು ಹಾಗೂ ಜಿಲ್ಲೆಗಳಲ್ಲಿನ 232 ತಾಲ್ಲೂಕುಗಳಲ್ಲಿ, ಪ್ರತಿ ತಾಲ್ಲೂಕಿಗೆ ರೂ. 20,000 ಒಟ್ಟು ರೂ. 46,40,000 ಮೊತ್ತವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳು ಹಣವನ್ನು ಪಡೆಯಲು ಅಧಿಕಾರವನ್ನು ಹೊಂದಿದ್ದು, ಹಣವನ್ನು ಪಡೆದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಮಹಾಲೇಖಪಾಲರಿಗೆ ಎನ್.ಡಿ.ಸಿ.ಬಿಲ್ಲನ್ನು ಕಳುಹಿಸತಕ್ಕದ್ದು, ಅಲ್ಲದೆ ಲೆಕ್ಕ ಪತ್ರಗಳನ್ನು ಪೂರ್ಣಗೊಳಿಸಿ, ಕರ್ನಾಟಕ ಆರ್ಥಿಕ ಸಂಹಿತೆಯಲ್ಲಿನ 62(ಬಿ) ನಮೂನೆಯ ವಿವರ ಪತ್ರವನ್ನು ಸರ್ಕಾರಕ್ಕೆ ಒಂದು ತಿಂಗಳೊಳಗಾಗಿ ತಪ್ಪದೇ ಕಳುಹಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶವನ್ನು ಸರ್ಕಾರದ ಆದೇಶ ದಿನಾಂಕ 21/11/2023ರಲ್ಲಿ ಸರ್ಕಾರದ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದ ಮೇರೆಗೆ ಹೊರಡಿಸಲಾಗಿದೆ.
ರಾಜ್ಯ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಧ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಲ್ಲಾ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಸಮ್ಮುಖದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ, ಕೆಎಸ್‌ಆರ್‌ಪಿ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಪರೇಡ್‌ನಲ್ಲಿ ಹಲವರು ಪಾಲ್ಗೊಳ್ಳುತ್ತಾರೆ.












Click it and Unblock the Notifications