ಕೋವಿಡ್ ಪ್ಯಾಕೇಜ್; ಆಟೋ ಚಾಲಕರು ಅರ್ಜಿ ಹಾಕುವುದು ಹೇಗೆ?
ಬೆಂಗಳೂರು, ಮೇ 24; ಕೋವಿಡ್ 2ನೇ ಅಲೆಯು ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಘೋಷಣೆ ಮಾಡಿದ್ದ ಲಾಕ್‌ಡೌನ್ ಅನ್ನು ಜೂನ್ 7ರ ತನಕ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಆಟೋ, ಕ್ಯಾಬ್ ಚಾಲಕರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಮೇ 19ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದರಲ್ಲಿ ವಿವಿಧ ಇಲಾಖೆಗಳಿಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಸಾರಿಗೆ ಇಲಾಖೆಗೆ ಒಟ್ಟು 63 ಕೋಟಿ ರೂ. ನೀಡಲಾಗಿದೆ. ಪ್ಯಾಕೇಜ್ ಅನ್ವಯ ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ರೂ. 3000 ಸಾವಿರ ರೂ. ಸಹಾಯಧನ ಸಿಗಲಿದೆ. ಆದರೆ ಚಾಲಕರು ಲೈಸೆನ್ಸ್ ಮತ್ತು ನೋಂದಣಿ ಮಾಡಿಸಿರಬೇಕು. ಸುಮಾರು 2.10 ಲಕ್ಷ ಫಲಾನುಭವಿಗಳಿಗೆ ಈ ಪ್ಯಾಕೇಜ್ ಅಡಿ ಅನುಕೂಲ ಸಿಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?; ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರು ರೂ. 3000 ಪರಿಹಾರ ಧನ ಪಡೆಯಲು ಅರ್ಜಿಗಳನ್ನು 'ಸೇವಾಸಿಂಧು' ಪೋರ್ಟಲ್ ಮೂಲಕ ಮಾತ್ರ ಸಲ್ಲಿಸಬೇಕು.
ಸಾರಿಗೆ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಗತ್ಯವಾದ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದೆ.
ಪರಿಹಾರ ಧನ ಪಡೆಯಲು ಅನ್ಯ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಯಾವುದೇ ವ್ಯವಸ್ಥೆ ಇಲ್ಲ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಚಾಲಕರುಗಳಿಗೆ ಪರಿಹಾರ ಧನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.












Click it and Unblock the Notifications