ಬಿಸಿಯೂಟದ ಕೆಲಸ: ಶೀಘ್ರವೇ ಶಾಲಾ ಶಿಕ್ಷಕರಿಗೆ ಸಿಗಲಿದೆ ಗುಡ್ ನ್ಯೂಸ್
ಬೆಂಗಳೂರು, ನವೆಂಬರ್ 25: ಶಾಲಾ ಶಿಕ್ಷಕರನ್ನು ಮಧ್ಯಾಹ್ನ ಬಿಸಿಯೂಟ ಕರ್ತವ್ಯದಿಂದ ಮುಕ್ತಗೊಳಿಸಬೇಕು. ಅವರು ಪಾಠ, ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನ ಹರಿಸಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಈಗ ಈ ಕುರಿತು ಮುಖ್ಯಮಂತ್ರಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿಯೊಂದು ಸಲ್ಲಿಕೆಯಾಗಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಈ ಕುರಿತು ಪತ್ರವನ್ನು ಬರೆದು ಮನವಿ ಮಾಡಿದ್ದಾರೆ. ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ.
ಬಸವರಾಜ ಹೊರಟ್ಟಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಜೊತೆ ಜೊತೆಗೆ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ವೃದ್ಧಿಗಾಗಿ ಬಿಸಿಯೂಟದ ಯೋಜನೆ ಹಾಗೂ ಮಗುವಿನ ದೈಹಿಕ ಸಮತೋಲನ ಬೆಳವಣಿಗೆಗಾಗಿ ಮತ್ತು ಅಪೌಷ್ಟಿಕತೆ ನಿವಾರಣೆಗಾಗಿ ಕರ್ನಾಟಕ ಸರ್ಕಾರ 2022-23ನೇ ಸಾಲಿನಿಂದ ಪೂರಕ ಪೋಷಕಾಂಶ ಒದಗಿಸುವ ಕುರಿತಂತೆ ವಿದ್ಯಾರ್ಥಿಗಳಿಗೆ ಮೊಟ್ಟೆ (ಮೊಟ್ಟೆ ತಿನ್ನದ ಮಕ್ಕಳಿಗೆ ಮೊಟ್ಟೆ ಬದಲಾಗಿ ಚಕ್ಕಿ, ಬಾಳೆಹಣ್ಣು) ವಿತರಣೆ ಮಾಡುವ ಕುರಿತಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಅಜಿಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಸದರಿ ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯ ಒದಗಿಸಿದ ಕಾರಣ ವಾರದಲ್ಲಿ ಎರಡು ದಿನ ವಿತರಿಸುತ್ತಿದ್ದ ಪೂರಕ ಪೋಷಕಾಂಶ ಆಹಾರವನ್ನು ವಾರದಲ್ಲಿ ಎಲ್ಲ ದಿನಗಳಲ್ಲಿ ವಿತರಿಸಲಾಗುತ್ತಿದೆ. ಇಂದಿನ ದಿನಮಾನಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ನಿರ್ವಹಿಸುತ್ತಾ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಅನುಷ್ಠಾನ, ಗುಣಮಟ್ಟದ ಬಿಸಿಯೂಟದ ತಯಾರಿಕೆ ಎಲ್ಲವನ್ನು ನಿರ್ವಹಣೆ ಮಾಡುವುದು ಶಿಕ್ಷಕರಿಗೆ ಬಹಳ ಕಷ್ಟಸಾಧ್ಯವಾಗಿದೆ.
ಶಿಕ್ಷಕರಿಗೆ ಹಲವು ಕೆಲಸಗಳು: ಪ್ರತಿ ದಿನದ ಹಾಜರಾತಿ, ಬಿಸಿಯೂಟ ಪಡೆದ ಫಲಾನುಭವಿಗಳ ಮಾಹಿತಿ, ಹಾಲು ಸ್ವೀಕರಿಸಿದ ಫಲಾನುಭವಿಗಳ ಮಾಹಿತಿ ಮತ್ತು ಪೂರಕ ಪೌಷ್ಟಿಕಾಂಶ ಪಡೆದ ಫಲಾನುಭವಿಗಳು ಮಾಹಿತಿಯನ್ನು ಅದೇ ದಿನದಂದು ಕಡ್ಡಾಯವಾಗಿ SATS ನಲ್ಲಿ ಇಂದೀಕರಿಸುವುದು ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಆದರೆ ಅನೇಕ ಶಿಕ್ಷಕರು ತಾಂತ್ರಿಕವಾಗಿ ಸಶಕ್ತರಲ್ಲದ ಕಾರಣ ಒತ್ತಡಕ್ಕೆ ಒಳಗಾಗಿ ಅನೇಕ ಆರೋಗ್ಯಕ್ಕೆ ಸಂಬಂಧಿಸದಂತಹ ತೊಂದರೆಗಳನ್ನು ಅನುಭವಿಸುತ್ತಿರುವುದಾಗಿ ನನ್ನ ಗಮನಕ್ಕೆ ಬಂದಿರುತ್ತದೆ.
ಶೈಕ್ಷಣಿಕ ಚಟುವಟಿಕೆಗಳಿಂದ ಇಲಾಖೆ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಕುರಿತಂತೆ ಇಲಾಖೆ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪ್ರತ್ಯೇಕ ವಿಭಾಗ ಮಾಡಿ ಶಿಕ್ಷಕರಿಗೆ ಪಠ್ಯ ಚಟುವಟಿಕೆಗೆ ಸಂಪೂರ್ಣ ಸಮಯ ವಿನಿಯೋಗ ಮಾಡಲು ಅವಕಾಶ ನೀಡಿದರೆ ಗುಣಾತ್ಮಕ ಶಿಕ್ಷಣ ಪರಿಕಲ್ಪನೆ ಸಾಕಾರಗೊಳಿಸಬಹುದು. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಶಿಕ್ಷಕರ ಪರಿಸ್ಥಿತಿ ಅರಿತು ಶಿಕ್ಷಕರ ಒತ್ತಡ ಕಡಿಮೆ ಮಾಡುವ ಕುರಿತಂತೆ ಅಗತ್ಯ ಕ್ರಮವಹಿಸಬೇಕು ಹಗೂ ಶಿಕ್ಷಕರ ಪರಿಸ್ಥಿತಿ ಏನಾಗಿದೆಯೆಂದರೆ ಕಲಿಸುವುದನ್ನು ಬಿಟ್ಟು ಎಲ್ಲವನ್ನು ಮಾಡುವಂತಾಗಿದೆ. ಆದ್ದರಿಂದ ಎಸ್‌ಎಸ್ಎಲ್‌ಸಿ ಫಲಿತಾಂಶ ನೀರಿಕ್ಷಿತ ಮಟ್ಟವನ್ನು ತಲುಪುವುದಿಲ್ಲ. ಬೇರೆ ಬೇರೆ ರೀತಿಯಿಂದ ಅಭ್ಯಾಸದಲ್ಲಿ ಹಿಂದುಳಿಯುತ್ತಾರೆ.
ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಅನುಷ್ಠಾನದ ಹೊರೆಯಿಂದ ಶಿಕ್ಷಕರು ಮಾನಸಿಕ ಒತ್ತಡದಿಂದ ಪಾಠ ಪ್ರವಚನ ಸರಿಯಾಗಿ ಮಾಡಲಾಗುತ್ತಿಲ್ಲವೆನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಈ ವಿಷಯವನ್ನು ನಾನು ಹತ್ತು ಬಾರಿ ವಿಚಾರಮಾಡಿ ಇದರ ಸಾಧಕ ಬಾಧಕಗಳನ್ನು ಅನೇಕ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಇದೆ ಪದ್ಧತಿ ಮುಂದುವರೆದಲ್ಲಿ ನೀವು ಯಾವುದೇ ರೀತಿಯ ಗುಣಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಿಲ್ಲ ಹಾಗೂ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಈ ಸೌಲಭ್ಯವನ್ನು ನೀಡುವುದು ಒಳ್ಳೆಯದು ಆದರೆ ಕಾರ್ಯಕ್ರಮ ಅನುಷ್ಠಾನ ಪದ್ಧತಿ ಬದಲಾಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸದರಿ ಕಾರ್ಯಕ್ರಮ ಅನುಷ್ಠಾನ ಕಾರ್ಯದಲ್ಲಿ ಶಿಕ್ಷಕರನ್ನು ಹೊರತುಪಡಿಸಿ ಬೇರೆಯ ವ್ಯವಸ್ಥೆ ಅಥವಾ ಬೇರೆ ಸಿಬ್ಬಂದಿಯನ್ನು ನೇಮಿಸುವುದು ಸೂಕ್ತ. ಒಂದು ವೇಳೆ ಬೇರೆ ಸಿಬ್ಬಂದಿ ನೇಮಿಸಲು ಹಣಕಾಸಿನ ಪರಿಸ್ಥಿತಿಯ ಕುರಿತು ಯೋಚನೆ ಮಾಡಿದರೆ ಮಕ್ಕಳ ಜೀವನ ಹಾಳಾಗುತ್ತದೆ. ಮಕ್ಕಳ ಭವಿಷ್ಯಕ್ಕಿಂತ ಹಣ ಮುಖ್ಯವಲ್ಲವೆಂದು ನನ್ನ ಅನಿಸಿಕೆ.
ಆದ್ದರಿಂದ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಹಾಗೂ ಪೂರಕ ಪೌಷ್ಠಿಕಾಂಶ ಕಾರ್ಯಕ್ರಮ ಅನುಷ್ಠಾನದ ಕುರಿತಂತೆ ಶಿಕ್ಷಕರನ್ನು ಹೊರತು ಪಡಿಸಿ ಬೇರೆ ವ್ಯವಸ್ಥೆ ಅಥವಾ ಬೇರೆ ಸಿಬ್ಬಂದಿಗಳನ್ನು ನೇಮಕ ಕುರಿತಂತೆ ತೀರ್ಮಾನ ನಿಮಗೆ ಬಿಟ್ಟಿದ್ದು ಎಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ಹೇಳಿದ್ದಾರೆ.












Click it and Unblock the Notifications