ಸಫಾಯಿ ಕರ್ಮಚಾರಿಗಳಿಗೆ ಸಿಗದ ಪುನರ್ವಸತಿ: ಹೈಕೋರ್ಟ್ ಎಚ್ಚರಿಕೆ
ಬೆಂಗಳೂರು, ಜ.31: ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಒದಗಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೋಮವಾರ ಸಫಾಯಿ ಕರ್ಮಚಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ ಪುನರ್ವಸತಿ ಸಂಬಂಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಅವರನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ.
ಕೆಜಿಎಫ್ ನ ಆಂಟನಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ನಿಗಮನದ ಕಾರ್ಯವೈಖರಿಗೆ ತೀವ್ರ ಬೇಸರ ವ್ಯಕ್ತಪಡಿಸಿತು.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, "ಮಲಹೊರುವ ಪದ್ಧತಿ ನಿಷೇಧ"ದ ನಂತರ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿಯನ್ನು ಕಲ್ಪಿಸಬೇಕಾಗಿರುವುದು ಸಫಾಯಿ ಕರ್ಮಚಾರಿ ನಿಗಮದ ಕರ್ತವ್ಯವಾಗಿದೆ. ಆದರೆ ನಿಗಮದ ಆದೇಶಗಳು ಕೆಲಸಕ್ಕೆ ಬಾರದಾಗಿದೆ ಎಂದರು. ಮಲಹೊರುವ ಪದ್ಧತಿ ನಿಷೇಧ ಸಮರ್ಪಕ ಜಾರಿಯಾಗಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯ ಈಗಲೂ ಪಾಲನೆಯಾಗುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ನಿಗಮದ ಹೇಳಿಕೆಯನ್ನು ಒಪ್ಪದ ನ್ಯಾಯಪೀಠ ಸಫಾಯಿ ಕರ್ಮಚಾರಿಗಳ ಪುನರ್ವಸತಿಗೆ ಸಮರೋಪಾದಿಯಲ್ಲಿ ಸರ್ಕಾರದ ನೀತಿಯನ್ನು ಜಾರಿಗೊಳಿಸಬೇಕು. ಪುನರ್ವಸತಿ ಸಂಬಂಧ ಎರಡು ವಾರದಲ್ಲಿ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಇಲ್ಲವಾದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ನಿಗಮದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿತು.
2021ರ ಜನವರಿಯಲ್ಲಿ ಅರ್ಜಿ ವಿಚಾರಣೆಗೆ ಬಂದಾಗ ಸರಕಾರಿ ವಕೀಲರು, ನಿಗಮದ ಸಫಾಯಿ ಕರ್ಮಚಾರಿಗಳ ಪುನರ್ ವಸತಿಗೆ ಕೈಗೊಂಡಿರುವ ಕ್ರಮಗಳನ್ನು ಬಗ್ಗೆ ತಿಳಿಸಿದಾಗ ಅದನ್ನು ಒಪ್ಪದ ನ್ಯಾಯಪೀಠ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.












Click it and Unblock the Notifications