2011ನೇ ಸಾಲಿನ 362 ಕೆಎಎಸ್ ಅಧಿಕಾರಿಗಳ ನೇಮಕ ಸಕ್ರಮ: ಕಾಯ್ದೆ ಪ್ರಶ್ನಿಸಿದ್ದ ಪಿಐಎಲ್ ವಜಾ
ಬೆಂಗಳೂರು, ಏ.21. ಕರ್ನಾಟಕ ಲೋಕಸೇವಾ ಆಯೋಗ 2011ನೇ ಸಾಲಿನಲ್ಲಿ ನಡೆಸಿದ್ದ 362 ಗೆಜೆಟೆಡ್ ಪ್ರೊಬೆಷನರಿಗೆ ಹುದ್ದೆಗಳ ಆಯ್ಕೆ ಸಿಂಧುಗೊಳಿಸುವ ಸಂಬಂಧ ರೂಪಿಸಿರುವ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಅರೀಫ್ ಜಮೀಲ್ ಸಲ್ಲಿಸಿದ್ದ ಪಿಐಎಲ್ ಸಿಜೆ ರಿತುರಾಜ್ ಅವಸ್ಥಿ ಮತ್ತು ನ್ಯಾ. ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯಪೀಠದ ಮುಂದೆ ಬಂದಿತು.
ನ್ಯಾಯಪೀಠ ವಾದ ಆಲಿಸಿದ ಬಳಿಕ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಮತ್ತು ನೇಮಕ ಸಿಂಧುಗೊಳಿಸುವಿಕೆ) ಕಾಯ್ದೆಯನ್ನು ರದ್ದುಪಡಿಸಲು ನಿರಾಕರಿಸಿತಲ್ಲದೆ, ಆ ಕುರಿತು ಅರ್ಜಿಯನ್ನು ವಜಾಗೊಳಿಸಿತು.

"2011ನೇ ಸಾಲಿನ ನೇಮಕಾತಿಯನ್ನು ಹೈಕೋರ್ಟ್ ಈ ಹಿಂದೆ ರದ್ದುಪಡಿಸಿದ ಎಂಬ ಹಿನ್ನೆಲೆಯಲ್ಲಿ ಇಡೀ ಕಾಯ್ದೆಯನ್ನು ಅಸಂವಿಧಾನಿಕ ಎನ್ನಲಾಗದು. ಕಾಯ್ದೆಯಲ್ಲಿ ಯಾವ ನಿಯಮಗಳು ಅಸಾಂವಿಧಾನಿಕ ಎಂಬುದನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ,'' ಎಂದು ನ್ಯಾಯಪೀಠ ಹೇಳಿದೆ.
ಜೊತೆಗೆ ಇದೇ ವಿಚಾರದ ಕುರಿತು ಅರ್ಜಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮುಂದೆ ಬಾಕಿ ಇವೆ, ಹಾಗಾಗಿ ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಾಗುದು ಎಂದೂ ಸಹ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರು, ಇದೇ ನ್ಯಾಯಾಲಯ ನೇಮಕವನ್ನು ರದ್ದುಗೊಳಿಸಿದ್ದರೂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಆ 362 ಅಭ್ಯರ್ಥಿಗಳ ನೇಮಕ ಸಕ್ರಮಕ್ಕೆ ಹೊಸದಾಗಿ ಕಾನೂನು ರೂಪಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕೆಎಟಿ ಮುಂದೆ ಬಾಕಿ:
2011ನೇ ಸಾಲಿನ ಕೆಎಎಸ್ ನೇಮಕದಲ್ಲಿ 362 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸುವ ಸಂಬಂಧ ಕಾಯಿದೆ ಜಾರಿಗೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮುಂದೆ ವಿಚಾರಣೆಗೆ ಬಾಕಿ ಇವೆ.
ಈಗಾಗಲೇ ಎರಡು ಸುತ್ತಿನ ಕಾನೂನು ಸಮರ ಮುಗಿಸಿರುವ ವಿವಾದ, ಇದೀಗ ಮೂರನೇ ಸುತ್ತಿನ ಹೋರಾಟ ನಡೆಯುತ್ತಿದೆ. ಕೆಎಟಿ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಎ.ಟಿ.ಶ್ರೀನಿವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ನ್ಯಾ.ಜಿ.ನರೇಂದರ್ ಮತ್ತು ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸರ್ಕಾರದ ಪರ ವಾದ ಮಂಡಿಸಿದ
ಇದೇ ವಿಚಾರದ ಅರ್ಜಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮುಂದೆ ಇದ್ದು, ಅಲ್ಲಿ ಸೋಮವಾರ ವಿಚಾರಣೆಗೆ ಬರಲಿವೆ. ಹಾಗಾಗಿ ಇಲ್ಲಿ ಮತ್ತೆ ಅದೇ ವಿಚಾರದ ವಿಚಾರಣೆ ಸರಿಯಲ್ಲ. ಮೊದಲು ಕೆಎಟಿ ಅರ್ಜಿಗಳನ್ನು ತೀರ್ಮಾನಿಸಲಿ, ಆನಂತರ ಹೈಕೋರ್ಟ್ ಆ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳುವುದು ಸೂಕ್ತ ಎಂದರು.
ಅದನ್ನು ಮಾನ್ಯ ಮಾಡಿದ ನ್ಯಾಯಪೀಠ, ಕೆಎಟಿಯಲ್ಲಿ ವಿಚಾರಣೆ ಆರಂಭವಾಗಲಿದ್ದು, ಅದು ಮಧ್ಯಂತರ ಆದೇಶದ ಬಗ್ಗೆ ನಿರ್ಧರಿಸುವವರೆಗೆ ಸರ್ಕಾರ ಆಯ್ಕೆಯಾಗಿದ್ದಾರೆಂದು ಪರಿಗಣಿಸಲಾಗಿರುವ ಅಭ್ಯರ್ಥಿಗಳಿಗೆ ನೇಮಕ ಪತ್ರ ವಿತರಿಸಬಾರದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮೌಖಿಕ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
"ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಅರ್ಜಿದಾರರು ಕೋರಿರುವಂತೆ ಸಂಬಂಧಿಸಿದ ಎಲ್ಲ ವಾದಿಗಳು-ಪ್ರತಿವಾದಿಗಳ ವಾದ ಆಲಿಸಿ ಬಳಿಕ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಮಧ್ಯಂತರ
ಆದೇಶ ಹೊರಡಿಸಬೇಕು," ಎಂದು ನಿರ್ದೇಶನ ನೀಡಿತು.
ಅಲ್ಲಿಯವರೆಗೆ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯಿದೆ ಜಾರಿಗೆ ಸಂಬಂಧಿಸಿದಂತೆ ನೀಡಿರುವ ಮಧ್ಯಂತರ ತಡೆ ಮುಂದುವರಿಸಲಾಗುವುದು. ಸರ್ಕಾರ ಯಾವುದೇ ಅಭ್ಯರ್ಥಿಗಳಿಗೆ ನೇಮಕ ಪತ್ರಗಳನ್ನು ನೀಡಬಾರದು ಎಂದು ಮೌಖಿಕವಾಗಿ ಸೂಚಿಸಿತು.
ಅರ್ಜಿದಾರರ ಆಕ್ಷೇಪವೇನು? ಅರ್ಜಿದಾರರು, ಸಿಐಡಿ ವರದಿ ಆಧರಿಸಿ ಹೈಕೋರ್ಟ್ ನೇಮಕ ರದ್ದುಗೊಳಿಸಿತ್ತು. ಅದನ್ನು ಸುಪ್ರೀಂಕೋಟ್ ಕೂಡ ಎತ್ತಿಹಿಡಿದಿದೆ. ಆದರೂ ಸಹ ನ್ಯಾಯಾಲಯ ಆದೇಶವನ್ನು ಬದಿಗೊತ್ತಿ 362 ಅಭ್ಯರ್ಥಿಗಳ ಅಕ್ರಮ ನೇಮಕ ಸಕ್ರಮಗೊಳಿಸಲು ರೂಪಿಸಿರುವ ಕಾಯಿದೆ ಕಾನೂನು ಬಾಹಿರವಾದುದು. ಹಾಗಾಗಿ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.
ನೇಮಕ ಸಿಂಧುಗೊಳಿಸುವ ಸರಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲೂ ಅರ್ಜಿ ಸಲ್ಲಿಸಲಾಗಿತ್ತು, ಕೆಎಟಿ ಯಾವುದೇ ಮಧ್ಯಂತರ ಆದೇಶ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಹಿನ್ನೆಲೆ:
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗೆ 201ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಯಲ್ಲಿದ್ದ 363 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸಿ ನೇಮಕ ಆದೇಶ ನೀಡುವ ಸಂಬಂಧ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕಕ್ಕೆ ರಾಜ್ಯಪಾಲರು ಕಳೆದ ವಾರ ಅಂಕಿತ ಹಾಕಿದ್ದರು.
ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಕಾರದ ಯಾವುದೇ ತೀರ್ಪು, ಡಿಕ್ರಿ ಇಲ್ಲವೇ ಆದೇಶದಲ್ಲಿ ಅ'ರ್ಥಿಗಳ ಅಂತಿಮ ಆಯ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಅಭ್ಯರ್ಥಿಗಳ ಯಾವುದೇ ಲೋಪಗಳಿಲ್ಲದ ಕಾರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ನಿರ್ಧರಿಸಿತ್ತು. ಕಳೆದ ಫೆಬ್ರವರಿಯಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ವಿಧೇಯಕಕ್ಕೆ ಅನುಮೋದನೆ ಪಡೆದಿತ್ತು.












Click it and Unblock the Notifications