ಮತ್ತೆ ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರ ನಿರ್ಧಾರ
ಬೆಂಗಳೂರು, ಜುಲೈ 9: ರಾಜೀನಾಮೆ ಪತ್ರವು ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಕೆಲವು ಶಾಸಕರ ರಾಜೀನಾಮೆಯನ್ನು ತಿರಸ್ಕರಿಸಿರುವ ಕಾರಣ ಪುನಃ ರಾಜೀನಾಮೆ ಪತ್ರ ಸಲ್ಲಿಸಲು ಅತೃಪ್ತ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
13 ಶಾಸಕರ ಪೈಕಿ ಎಂಟು ಶಾಸಕರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಹೀಗಾಗಿ ಅವರ ರಾಜೀನಾಮೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದ್ದರು.
ತಮ್ಮ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿರುವ ಶಾಸಕರು ಇದರಿಂದ ವಿಚಲಿತರಾದರೂ ನಿರ್ಧಾರದಿಂದ ಹಿಂದೆ ಸರಿಯದೆ ಇರಲು ತೀರ್ಮಾನಿಸಿದ್ದಾರೆ. ಹೀಗಾಗಿ ಸ್ಪೀಕರ್ ಅವರಿಗೆ ಪುನಃ ರಾಜೀನಾಮೆ ಪತ್ರ ನೀಡಲು ಬಯಸಿದ್ದಾರೆ. ನಾಳೆ ಸಂಜೆಯ ಒಳಗೆ ಸ್ಪೀಕರ್ ಅವರಿಗೆ ಮತ್ತೊಮ್ಮೆ ರಾಜೀನಾಮೆ ಪತ್ರ ನೀಡಲು ಅವರು ಉದ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.

ರಾಜೀನಾಮೆ ಪತ್ರಗಳನ್ನು ಪರಿಶೀಲನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್ ಅವರು ಕ್ರಮಬದ್ಧವಾಗಿರದ ರಾಜೀನಾಮೆ ಪತ್ರಗಳನ್ನು ನೀಡಿರುವ ಶಾಸಕರು ಬಯಸಿದ್ದಲ್ಲಿ ಮತ್ತೊಮ್ಮೆ ರಾಜೀನಾಮೆ ನೀಡಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದರು.
ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ನಾರಾಯಣ ಗೌಡ, ರಾಮಲಿಂಗಾ ರೆಡ್ಡಿ, ಗೋಪಾಲಯ್ಯ ಅವರ ರಾಜೀನಾಮೆ ಕ್ರಮಬದ್ಧವಾಗಿದೆ ಎಂದು ಅವರು ತಿಳಿಸಿದ್ದರು. ರಮೇಶ್ ಜಾರಕಿಹೊಳಿ, ಬಿಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಎಚ್ ವಿಶ್ವನಾಥ್, ಮಹೇಶ್ ಕುಮಟಳ್ಳಿ ಮತ್ತು ಮುನಿರತ್ನ ಅವರ ರಾಜೀನಾಮೆ ತಿರಸ್ಕೃತವಾಗಿದೆ.












Click it and Unblock the Notifications