ಲಾಟರಿ ಹಗರಣ : ಗೃಹ ಸಚಿವ ಜಾರ್ಜ್ ಹೇಳುವುದೇನು?
ಬೆಂಗಳೂರು, ಮೇ 25 : 'ಲಾಟರಿ ಹಗರಣ ಸಂಬಂಧ ಸಿಐಡಿ ವರದಿಯಲ್ಲಿ ಕೇವಲ ಅಲೋಕ್ ಕುಮಾರ್ ಅವರ ಹೆಸರು ಮಾತ್ರ ಇದೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಯಾರನ್ನು ರಕ್ಷಣೆ ಮಾಡುತ್ತಿಲ್ಲ. ತನಿಖೆಯನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲು ಸರ್ಕಾರ ಸಿದ್ಧವಿದೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಗೃಹ ಸಚಿವರು, 'ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ನಾನು ಯಾವ ಅಧಿಕಾರಿಗಳಿಗೂ ಸೂಚನೆ ಕೊಟ್ಟಿಲ್ಲ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಸೂಚನೆ ಕೊಡುವುದೂ ಇಲ್ಲ' ಎಂದು ಸ್ಪಷ್ಟಪಡಿಸಿದರು. [ಲಾಟರಿ ಹಗರಣ, ಸಿಬಿಐ ತನಿಖೆ ಇಲ್ಲ]

'ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾರನ್ನೂ ರಕ್ಷಿಸುತ್ತಿಲ್ಲ, ಲಾಟರಿ ಹಗರಣ ಸಂಬಂಧ ಸಿಐಡಿ ನೀಡಿರುವ ಮಧ್ಯಂತರ ವರದಿಯಲ್ಲಿ ಕೇವಲ ಅಲೋಕ್ ಕುಮಾರ್ ಅವರ ಹೆಸರು ಮಾತ್ರ ಇದೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ' ಎಂದು ಹೇಳಿದರು. [ಒಂದಂಕಿ ಲಾಟರಿ ಹಗರಣ, ವಿವರ ಕೇಳಿದ ರಾಜ್ಯಪಾಲರು]
ಗೃಹ ಸಚಿವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು
* ವಿರೋಧ ಪಕ್ಷಗಳ ಆಗ್ರಹಕ್ಕೆ ಅರ್ಥವಿಲ್ಲ. ಪ್ರತಿಯೊಂದಕ್ಕೂ ಸಿಬಿಐ ತನಿಖೆ ಏಕೆ? ಲಾಟರಿ ಪ್ರಕರಣ ಅಂತಾರಾಜ್ಯ ಮಟ್ಟದ್ದಾಗಿರುವುದರಿಂದ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲು ನಾವು ಸಿದ್ಧವಿದ್ದೇವೆ. ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಅಧೀನದಲ್ಲಿದೆ.
* ರಾಜ್ಯಪಾಲರು ಹಗರಣದ ವರದಿ ಕೇಳಿದ್ದಾರೆ. ನಾವು ರಾಜ್ಯಪಾಲರಿಗೆ ವರದಿ ಕೊಡುತ್ತೇವೆ. ಪ್ರಕರಣದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಅಂತಹ ಅಧಿಕಾರಿಗಳ ಬಗ್ಗೆ ಮಾಹಿತಿ, ದಾಖಲೆ ಇದ್ದರೆ ಸಿಐಡಿಗೆ ನೀಡಲಿ.
* ಸರ್ಕಾರ ಲಾಟರಿ ನಿಷೇಧ ದಳವನ್ನು ರದ್ದುಪಡಿಸಿದ ಕಾರಣ ಜಿಲ್ಲಾ ಎಸ್‍ಪಿಗಳಿಗೆ ಲಾಟರಿ ನಿಷೇಧ ಹೊಣೆ ವಹಿಸಲಾಗಿದೆ. ಇನ್ನು ಮುಂದೆ ಈ ದಳವನ್ನು ಪೊಲೀಸ್ ವಿಭಾಗದೊಂದಿಗೆ ವಿಲೀನ ಮಾಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಅಪರಾಧ ನಿಗ್ರಹ ದಳ (ಡಿಸಿಬಿ) ತೆರೆಯಲಾಗುತ್ತದೆ.












Click it and Unblock the Notifications