Ration Card: ರೇಷನ್ KYCಗೆ ಸರ್ವರ್ ಕಾಟ, ಬಡವರ ಬದುಕಿಗೆ ಸರ್ಕಾರದ ನಿರ್ಲಕ್ಷ್ಯದ ಬರೆ!: ಆರ್. ಅಶೋಕ್ ತೀವ್ರ ಟೀಕೆ
Ration Card: ರೇಷನ್ KYCಗೆ ಸರ್ವರ್ ಕಾಟ, ಬಡವರ ಬದುಕಿಗೆ ಸರ್ಕಾರದ ನಿರ್ಲಕ್ಷ್ಯದ ಬರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರ ಟೀಕೆ ಮಾಡಿದ್ದಾರೆ. ಕರ್ನಾಟಕದಲ್ಲಿ ಇ - ಕೆವೈಸಿ ಪೂರ್ಣಗೊಳಿಸಲು ಇನ್ನೂ ಕೆಲವೇ ದಿನಗಳು ಬಾಕಿ ಇದ್ದರೂ, ಈವರೆಗೆ ಕೇವಲ ಶೇ.36.44ರಷ್ಟು ಮಾತ್ರ KYC ಪೂರ್ಣಗೊಂಡಿದೆ. ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಜನರು ಪರದಾಡುವಂತಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ರಿಜ್ವಾನ್ ಅರ್ಷದ್ ಅವರೇ ಇದರ ನೇರ ಹೊಡೆತ ಬೀಳುತ್ತಿರುವುದು ದಿನಗೂಲಿ ಕಾರ್ಮಿಕರ ಮೇಲೆ. ಬೆಳಗ್ಗೆಯಿಂದಲೇ ಕೆಲಸಕ್ಕೆ ಹೋಗಬೇಕಾದ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಬಿಟ್ಟು, ಕೆವೈಸಿ ಮಾಡಿಸಿಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ನಿಲ್ಲುವ ಪರಿಸ್ಥಿತಿ.

ಇತ್ತ ದಿನದ ಸಂಬಳ ಇಲ್ಲ. ಅತ್ತ KYC ಕೂಡ ಆಗುತ್ತಿಲ್ಲ! ತಾಂತ್ರಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ಸಿದ್ಧಪಡಿಸದೆ ಗಡುವು ವಿಧಿಸಿ, ಜನರನ್ನು ಸರ್ವರ್ ಸಮಸ್ಯೆಯ ನಡುವೆ ನಿಲ್ಲಿಸಿರುವುದು ಸರ್ಕಾರದ ನಿರ್ಲಕ್ಷ್ಯದ ಪರಮಾವಧಿ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಬಡವರ ಹೊಟ್ಟೆಪಾಡಿನ ಜೊತೆ ಚೆಲ್ಲಾಟವಾಡಬೇಡಿ. ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ. KYC ಪೂರ್ಣಗೊಳಿಸಲು ಸೂಕ್ತ ವ್ಯವಸ್ಥೆ ಹಾಗೂ ಅಗತ್ಯ ಕಾಲಾವಕಾಶ ನೀಡಿ.
ಸರ್ವರ್ ವೈಫಲ್ಯದಿಂದ ಯಾರೊಬ್ಬರಿಗೂ ಪಡಿತರ ಸೌಲಭ್ಯ ತಪ್ಪದಂತೆ ಗಮನ ನೀಡಿ. ಜನರ ಸಮಯವೂ ಅಮೂಲ್ಯ, ಅವರ ಒಂದು ದಿನದ ಕೂಲಿಯೂ ಅವರ ಜೀವನಕ್ಕೆ ಮುಖ್ಯ.. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.
ಸಬ್ ರಿಜಿಸ್ಟ್ರಾರ್ ವರ್ಗಾವಣೆಯಲ್ಲೂ ಕಾಂಗ್ರೆಸ್ ಸರ್ಕಾರದ 'ಕೌನ್ಸೆಲಿಂಗ್' ಕಣ್ಮರೆಯೇ?
ಸಬ್ ರಿಜಿಸ್ಟ್ರಾರ್ ವರ್ಗಾವಣೆಯಲ್ಲೂ ಕಾಂಗ್ರೆಸ್ ಸರ್ಕಾರದ 'ಕೌನ್ಸೆಲಿಂಗ್' ಕಣ್ಮರೆಯೇ ಎಂದು ವಿರೋಧ ಪಕ್ಷದ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ. ಸಬ್ ರಿಜಿಸ್ಟ್ರಾರ್‌ಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಸರ್ಕಾರವೇ ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಈಗ ಕೌನ್ಸೆಲಿಂಗ್ ನಡೆಸದೇ ಒಂದೇ ವಾರದಲ್ಲಿ 10ಕ್ಕೂ ಹೆಚ್ಚು ಸಬ್ ರಿಜಿಸ್ಟ್ರಾರ್‌ಗಳನ್ನು ವರ್ಗಾವಣೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಕೋಟ್ಯಂತರ ರೂಪಾಯಿ ವಹಿವಾಟಿನ ಆರೋಪಗಳಿಂದಾಗಿ ವರ್ಷಗಳಿಂದ ವಿವಾದಕ್ಕೆ ಕಾರಣವಾಗಿರುವ ಸಬ್ ರಿಜಿಸ್ಟ್ರಾರ್ ಹುದ್ದೆಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಅತ್ಯಂತ ಅಗತ್ಯ. ಹಾಗಾದರೆ ಸರ್ಕಾರವೇ ರೂಪಿಸಿದ ಕೌನ್ಸೆಲಿಂಗ್ ನಿಯಮಕ್ಕೆ ಈಗ ವಿನಾಯಿತಿ ಏಕೆ? ಯಾರ ಒತ್ತಡಕ್ಕೆ? ಯಾರ ಅನುಕೂಲಕ್ಕಾಗಿ? ರಾಜ್ಯ ಕಾಂಗ್ರೆಸ್ ಸರ್ಕಾರ ಇದಕ್ಕೆ ಉತ್ತರಿಸಬೇಕು. ಮುಂದಿನ ವರ್ಷದಿಂದ ಕೌನ್ಸೆಲಿಂಗ್ ಇಲ್ಲದೆ ವರ್ಗಾವಣೆ ಮಾಡುವುದಿಲ್ಲ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೇ ಹೇಳಿರುವಾಗ, ಈ ವರ್ಷದ ವರ್ಗಾವಣೆಗಳಿಗೆ ಮಾತ್ರ ಕೌನ್ಸೆಲಿಂಗ್ ಏಕೆ ಬೇಡವಾಯಿತು ಎಂದು ಪ್ರಶ್ನಿಸಿದ್ದಾರೆ.
ನಿಯಮ ಎಲ್ಲರಿಗೂ ಒಂದೇ ಆಗಿರಬೇಕು. ಪಾರದರ್ಶಕತೆ ಕಾಗದದಲ್ಲಲ್ಲ, ಕಾರ್ಯದಲ್ಲೂ ಕಾಣಬೇಕು. ಸಬ್ ರಿಜಿಸ್ಟ್ರಾರ್ ವರ್ಗಾವಣೆಗಳ ಸಂಪೂರ್ಣ ಪ್ರಕ್ರಿಯೆಯನ್ನು ಬಹಿರಂಗಪಡಿಸಿ ಎಂದು ಈ ಮೂಲಕ ನಾನು ಆಗ್ರಹಿಸುತ್ತೇನೆ ಎಂದಿದ್ದಾರೆ.


Click it and Unblock the Notifications
