Ration Card: ರಾಜ್ಯದ ಪಡಿತರ ಚೀಟಿದಾರರು ಗಮನಿಸಲೇಬೇಕಾದ ಮಾಹಿತಿ
Ration Card: ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರವು ಮಹತ್ವದ ಸೂಚನೆಯನ್ನು ನೀಡಿದೆ. ಅರ್ಹ ಫಲಾನುಭವಿಗಳು ಇದನ್ನ ಪಾಲಿಸದಿದ್ದರೆ ಕಾರ್ಡ್ ರದ್ದು ಅಥವಾ ರೇಷನ್ ತಡೆಹಿಡಿಯುವ ಸಾಧ್ಯತೆಯಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ಸರ್ಕಾರವು ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಮಹತ್ವದ ಸೂಚನೆಯೊಂದನ್ನ ನೀಡಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ತಲುಪಬೇಕು ಮತ್ತು ನಕಲಿ ಅಥವಾ ಅನರ್ಹ ಕಾರ್ಡ್‌ಗಳನ್ನು ತಡೆಯಬೇಕೆಂಬ ಉದ್ದೇಶದಿಂದ ರೇಷನ್ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆಹಾರ ಇಲಾಖೆ ತಿಳಿಸಿದೆ.

ಒಂದು ವೇಳೆ ನಿಗದಿತ ಅವಧಿಯೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಅಂತಹ ಸದಸ್ಯರ ಹೆಸರನ್ನು ರೇಷನ್ ಕಾರ್ಡ್‌ನಿಂದ ತೆಗೆದುಹಾಕುವ, ಕಾರ್ಡ್ ರದ್ದುಪಡಿಸುವ ಅಥವಾ ಪಡಿತರ ಧಾನ್ಯ ವಿತರಣೆಯನ್ನು ತಡೆಹಿಡಿಯುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರತಿಯೊಬ್ಬ ಸದಸ್ಯರಿಗೂ ಇ-ಕೆವೈಸಿ ಕಡ್ಡಾಯ
ಸಾಮಾನ್ಯವಾಗಿ ಕುಟುಂಬದ ಯಜಮಾನಿ ಅಥವಾ ಒಬ್ಬ ಸದಸ್ಯ ಇ-ಕೆವೈಸಿ ಮಾಡಿದರೆ ಸಾಕು ಎಂದು ನಿರ್ಲಕ್ಷಿಸಬೇಡಿ. ಆದರೆ ನಿಮ್ಮ ಬಳಿ ಅಂತ್ಯೋದಯ, ಬಿಪಿಎಲ್ ಅಥವಾ ಎಪಿಎಲ್ ಯಾವುದೇ ಕಾರ್ಡ್ ಇರಲಿ, ಅದರಲ್ಲಿ ನಮೂದಾಗಿರುವ ಪ್ರತಿಯೊಬ್ಬ ಸದಸ್ಯರೂ ಪ್ರತ್ಯೇಕವಾಗಿ ತಮ್ಮ ಫೇಸ್ ಆಥೆಂಟಿಕೇಶನ್ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಮೊಬೈಲ್‌ನಲ್ಲೇ ಇ-ಕೆವೈಸಿ ಮಾಡುವ ವಿಧಾನ
* ಇದಕ್ಕಾಗಿ ಸಾರ್ವಜನಿಕರು ಯಾವುದೇ ಸೇವಾ ಕೇಂದ್ರಗಳಿಗೆ ಅಲೆಯುವ ಅಗತ್ಯ ಇಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಉಚಿತವಾಗಿ ಇದನ್ನು ಮಾಡಿಕೊಳ್ಳಬಹುದು. ಗೂಗಲ್ ಪ್ಲೇ-ಸ್ಟೋರ್‌ಗೆ ತೆರಳಿ 'Mera eKYC' (ಅಥವಾ 'ಮೇರಾ ರೇಷನ್') ಮತ್ತು 'Aadhaar FaceRD' ಎಂಬ ಎರಡು ಅಧಿಕೃತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.
* Mera eKYC' ಆಪ್ ಓಪನ್ ಮಾಡಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿ. ಬಳಿಕ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಎಂಟರ್ ಮಾಡಿ ಸರ್ಚ್ ನೀಡಿ.
* ನಂತರ ನಿಮ್ಮ ಕುಟುಂಬದ ಸದಸ್ಯರ ಪಟ್ಟಿ ಕಾಣಿಸುತ್ತದೆ. ಯಾವ ಸದಸ್ಯರ ಇ-ಕೆವೈಸಿ ಆಗಬೇಕಿದೆಯೋ ಅವರ ಹೆಸರನ್ನ ಆಯ್ಕೆ ಮಾಡಿ 'Face Authentication'ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಕ್ಯಾಮೆರಾ ಆನ್ ಆದಾಗ ಬೆಳಕಿರುವ ಜಾಗದಲ್ಲಿ ನಿಂತು, ಕ್ಯಾಮೆರಾವನ್ನು ನೇರವಾಗಿ ನೋಡಿ. ಕ್ಯಾಮೆರಾ ಶೇಕ್ ಆಗದಂತೆ ಸ್ಥಿರವಾಗಿ ಹಿಡಿಯಿರಿ. ಸ್ಕ್ಯಾನ್ ಯಶಸ್ವಿಯಾದ ತಕ್ಷಣ 'eKYC Successful' ಎಂಬ ಸಂದೇಶ ಬರುತ್ತದೆ. ಇದೇ ರೀತಿ ಉಳಿದ ಸದಸ್ಯರಿಗೂ ಪೂರ್ಣಗೊಳಿಸಿ.
ಇ-ಕೆವೈಸಿ ವಿಫಲವಾದರೆ ಏನು ಮಾಡಬೇಕು?
ಸಾಕಷ್ಟು ಬೆಳಕಿಲ್ಲದಿರುವುದು, ಮುಖದ ಮೇಲೆ ಧೂಳು, ಗ್ಲಾಸ್ ಅಥವಾ ಟೋಪಿ ಇರುವುದು ಹಾಗೂ ಆಪ್ ಅಪ್‌ಡೇಟ್ ಇಲ್ಲದಿರುವುದು ಸ್ಕ್ಯಾನಿಂಗ್ ವಿಫಲವಾಗಲು ಮುಖ್ಯ ಕಾರಣಗಳು. ಆದ್ದರಿಂದ ಸ್ಕ್ಯಾನ್ ಮಾಡುವಾಗ ಮುಖ ಸ್ಪಷ್ಟವಾಗಿ ಕಾಣುವಂತೆ ನೋಡಿಕೊಳ್ಳಿ.
ಇ-ಕೆವೈಸಿ ನೆಪದಲ್ಲಿ ಬರುವ ಅಪರಿಚಿತ ಕರೆಗಳು ಅಥವಾ ಒಟಿಪಿ ಕೇಳುವ ವಂಚಕರ ಬಗ್ಗೆ ಜಾಗರೂಕರಾಗಿರಿ. ತಾಂತ್ರಿಕ ತೊಂದರೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಥವಾ ಆಹಾರ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1967ಗೆ ಕರೆ ಮಾಡಿ ನೆರವು ಪಡೆಯಬಹುದು ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ರಾಜ್ಯದಲ್ಲಿನ ಪಡಿತರ ಚೀಟಿದಾರರು ಈ ಪ್ರಕ್ರಿಯೆಯನ್ನು ಬೇಗ ಮುಗಿಸಿಕೊಳ್ಳುವುದು ಒಳಿತು. ಯಾಕಂದ್ರೆ ಮುಂದಿನ ದಿನಗಳಲ್ಲಿ ಡೆಡ್‌ಲೈನ್ ವೇಳೆ ಸರ್ವರ್ ಸಮಸ್ಯೆ, ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾದರೂ ಆಗಬಹುದು. ಆದ್ದರಿಂದ ಈಗಲೇ ಮಾಡಿಕೊಂಡರೆ ಉತ್ತಮ ಎನ್ನಲಾಗುತ್ತಿದೆ.


Click it and Unblock the Notifications
