ಅಪ್ರಾಪ್ತೆ ಮೇಲೆ ಅತ್ಯಾಚಾರ: ತಾಯಿ ಮನವಿಯಂತೆ ಆರೋಪಿಗೆ ಜಾಮೀನು
ಬೆಂಗಳೂರು, ಜುಲೈ 18; ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗೆ ತಾಯಿಯ ಮನವಿ ಮೇರೆಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ಅಪರೂಪದ ಘಟನೆ ನಡೆದಿದೆ. ಜಾಮೀನು ಕೋರಿ ಧಾರವಾಡ ಮೂಲದ ಆರೋಪಿ ಮನೋಜ್ ತನ್ನ ತಾಯಿ ಮೂಲಕ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅನಿಲ್ ಬಿ. ಕಟ್ಟಿ ಅವರ ಪೀಠ ಈ ಆದೇಶ ಮಾಡಿದೆ.
ಜಾಮೀನು ನೀಡುವಾಗ ಕೋರ್ಟ್ ಆರೋಪಿ ಭವಿಷ್ಯದಲ್ಲಿ ಅಪರಾಧಿಕ ಹಿನ್ನೆಲೆಯುಳ್ಳವರೊಂದಿಗೆ ಸಂಪರ್ಕ ಬೆಳೆಸದಂತೆ ಮತ್ತು ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಬಾಲ ನ್ಯಾಯಮಂಡಳಿಗೆ ವರದಿ ಸಲ್ಲಿಸಬೇಕು ಎಂದು ತಾಯಿಗೆ ಷರತ್ತು ವಿಧಿಸಿದೆ.

ಬಾಲ ನ್ಯಾಯ (ಆರೈಕೆ ಮತ್ತು ಸಂರಕ್ಷಣೆ) ಕಾಯ್ದೆ-2015ರ ಸೆಕ್ಷನ್ 12ರ ಅಡಿ ಜಾಮೀನು ಕೋರಿ ಅಪ್ರಾಪ್ತ ಆರೋಪಿ ಅರ್ಜಿಯನ್ನು ನಿರ್ಧರಿಸುವಾಗ ಅಪರಾಧ ಪ್ರಕರಣದ ಗಂಭೀರತೆ ಪರಿಗಣಿಸುವ ಅಗತ್ಯವಿಲ್ಲ ಎಂಬ ಆರೋಪಿ ಪರ ವಕೀಲರ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿದೆ.
ಅಲ್ಲದೆ, ಆರೋಪಿಯ ದೈಹಿಕ, ಮಾನಸಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಧಾರವಾಡದ ನಿಮ್ಹಾನ್ಸ್ ಆಸ್ಪತ್ರೆಯಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿತು. ಜತೆಗೆ, ಘಟನೆ ನಡೆದಾಗ ಅರ್ಜಿದಾರನಿಗೆ 17 ವರ್ಷವಾಗಿದ್ದ ಮತ್ತು ಆರೋಪಿಯನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳಲು ತಾಯಿ ಸಮರ್ಥಳಾಗಿರುವ ಅಂಶವನ್ನು ಪರಿಗಣಿಸಿ ಜಾಮೀನು ನೀಡಿದೆ.
ಪ್ರಕರಣದ ಹಿನ್ನಲೆ: ಆರೋಪಿ ಮನೋಜ್ 7 ಸ್ನೇಹಿತರ ಜೊತೆಗೂಡಿ ಧಾರವಾಡದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರು. ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಘಟನೆ ಬಹಿರಂಗಪಡಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದರು.
ಘಟನೆ ಸಂಬಂಧ ಧಾರವಾಡದ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಮನೋಜ್ ಸೇರಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು. ಬಾಲ ನ್ಯಾಯ ಮಂಡಳಿ ಮತ್ತು ಧಾರವಾಡ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಮನೋಜ್ ತನ್ನ ತಾಯಿ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದ.
ವಿಚಾರಣೆ ವೇಳೆ ಮನೋಜ್ ಪರ ವಕೀಲರು, ಘಟನೆ ನಡೆದಾಗ ಆರೋಪಿಗೆ 17 ವರ್ಷವಾಗಿತ್ತು. ಸಂತ್ರಸ್ತೆ ಸಹ ಅಪ್ರಾಪ್ತೆಯಾಗಿದ್ದಳು. ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾಗಿರುವ ಬಾಲಕ, ಸಿಆರ್‌ಪಿಸಿ ಕಾಯ್ದೆಯ ಸೆಕ್ಷನ್ 457ರ ಅಡಿಯಲ್ಲಿ ರೆಗ್ಯೂಲರ್ ಜಾಮೀನಿಗೆ ಕೋರಿದ ಅರ್ಜಿ ಮತ್ತು ಬಾಲ ನ್ಯಾಯ (ಆರೈಕೆ ಮತ್ತು ಸಂರಕ್ಷಣೆ) ಕಾಯ್ದೆ-2015ರ ಸೆಕ್ಷನ್ 12 ಅಡಿಯಲ್ಲಿ ಅರ್ಜಿ ಸಲ್ಲಿಸಿದಾಗ ವಿಭಿನ್ನವಾಗಿ ನಿಲ್ಲುತ್ತದೆ ಆದ್ದರಿಂದ ಜಾಮೀನು ನೀಡುವಂತೆ ಕೋರಿದ್ದರು.
ಕೋರ್ಟ್ ವಿಧಿಸಿರುವ ಷರತ್ತುಗಳೇನು?; ಆರೋಪಿಯ ಯೋಗಕ್ಷೇಮ ಮತ್ತು ಕಲ್ಯಾಣವನ್ನು ನೋಡಿಕೊಳ್ಳಬೇಕು. ಧಾರವಾಡದ ಬಾಲ ನ್ಯಾಯ ಮಂಡಳಿಗೆ ಮಗನ ಪರವಾಗಿ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಮಗ ಯಾವುದೇ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಲು ಬಿಡುವುದಿಲ್ಲ ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು.
ಆತ ವ್ಯಾಸಂಗ ಮುಂದುವರಿಸುವ ಅಥವಾ ರಚನಾತ್ಮಕ ಚಟುವಟಿಕೆಗಳನ್ನು ಪಾಲ್ಗೊಳ್ಳುವುದನ್ನು ಖಾತರಿಪಡಿಸಬೇಕು. ಅನುತ್ಪಾದಕ ಮತ್ತು ಮನೋರಂಜನಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ವ್ಯರ್ಥಮಾಡದಂತೆ ನೋಡಿಕೊಳ್ಳಬೇಕು. ಅದನ್ನು ದೃಢಪಡಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಮನೋಜ್ ತಾಯಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.
ಅಲ್ಲದೇ, ಈ ಕುರಿತಂತೆ ಮನೋಜ್ ಮತ್ತು ತಾಯಿ 2023ರ ಆಗಸ್ಟ್ 1 ರಿಂದ ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಾಲ ನ್ಯಾಯಮಂಡಳಿ ಪ್ರೊಬೆಷನರಿಗೆ ಅಧಿಕಾರಿಗೆ ವರದಿ ಸಲ್ಲಿಸಬೇಕು ಎಂಬ ಷರತ್ತು ಹಾಕಿದೆ.












Click it and Unblock the Notifications