Ramesh Jarkiholi Meets HD Kumaraswamy: ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 18: 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಠಕ್ಕರ್ ಕೊಡಲು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಸಿದ್ದತೆ ನಡೆಸುತ್ತಿದ್ದು, ಸೋಮವಾರ ಬೆಂಗಳೂರಿನ ಜೆಪಿ ನಗರ ನಿವಾಸದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಈ ಹಿಂದೆ ಮೈತ್ರಿ ಸರ್ಕಾರವಿದ್ದಾಗ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಮೇಶ್ ಜಾರಕಿಹೊಳಿ ಅವರ ಈ ಭೇಟಿ ಸಾಕಷ್ಟು ಪ್ರಶ್ನೆಗಳು ಹುಟ್ಟು ಹಾಕುವಂತೆ ಮಾಡಿದೆ.

ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕೆಟ್ಟ ಸರ್ಕಾರವನ್ನು ತೆಗೆದು ಹಾಕಲು ಆದಷ್ಟು ಬೇಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆದರೆ ಉತ್ತಮ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು
ಅಲ್ಲದೇ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಎಚ್ ಡಿ ಕುಮಾರಸ್ವಾಮಿ ಭೇಟಿಯ ಹಿಂದೆ ವಿಶೇಷತೆ ಏನಿಲ್ಲ. ಬದಲಾಗಿ ಆರೋಗ್ಯ ವಿಚಾರಿಸಲು ಬಂದಿದ್ದೆ. ಒಳ್ಳೆದಾಗಲಿ ಎಂದು ಹಾರೈಸಿದ್ದೇನೆ ಎಂದು ಹೇಳಿದರು.
ಇನ್ನೂ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ಹೈಕಮಾಂಡ್ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ. ಈ ಕೆಟ್ಟ ಸರ್ಕಾರವನ್ನು ತೆಗೆಯಲು ಹಾಗೂ ಮುಂದಿನ ದಿನಗಳಲ್ಲಿ ಸೂಕ್ತ ಹೋರಾಟ ಮಾಡಲು ಆದಷ್ಟು ಬೇಗ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಆದರೆ ಒಳ್ಳೆಯದು ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಈಗಾಗಲೇ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕರಾದ ಎಚ್‌ಡಿ ಕುಮಾರಸ್ವಾಮಿ ಸತತವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಎರಡು ಪಕ್ಷಗಳ ನಡುವೆ ಮೈತ್ರಿಯಿಂದ ಇನ್ನಷ್ಟು ಶಕ್ತಿ ಬರಲಿದೆ. ಮೈತ್ರಿ ಆದರೆ ಹೈಕಮಾಂಡ್ ನಿರ್ಧಾರಕ್ಕೆ ಒಪ್ಪಿಗೆ ಇದೆ ಎಂದು ಹೇಳಿದರು.
ಇನ್ನೂ ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಬಿಜೆಪಿ- ಜೆಡಿಎಸ್ ಮೈತ್ರಿಗೆ ಅಮಿತ್ ಶಾ ಒಪ್ಪಿದ್ದಾರೆ. ನಾಲ್ಕು ಸ್ಥಾನ ಬಿಟ್ಟುಕೊಡಲು ಅವರು ಹೇಳಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದ ನಮಗೆ ಶಕ್ತಿ ಬರುತ್ತೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಮೈತ್ರಿ ವಿಚಾರವಾಗಿ ಮಾತುಕತೆ ನಡೆಸಲು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್‌ಡಿ ದೇವೇಗೌಡ ಅವರು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕುರಿತು ಎರಡು ಪಕ್ಷಗಳ ಮುಖಂಡರು ಒಪ್ಪಿಕೊಂಡಿದ್ದರು. ಆದರೆ ನಂತರದಲ್ಲಿ ನಡೆದ ಬೆಳವಣಿಗೆಯಲ್ಲಿ ಮೈತ್ರಿ ಬಗ್ಗೆ ವರಿಷ್ಠರೇ ನಿರ್ಧಾರ ಮಾಡುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರು.
ಇನ್ನೂ ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಕೆಲವು ನಾಯಕರಿಗೆ ಮೈತ್ರಿ ಬಗ್ಗೆ ಇರುವು ಅಸಮಾಧಾನ ಹೊರ ಹಾಕಿದ್ದು, ಜೆಡಿಎಸ್ ನಲ್ಲೂ ಮೈತ್ರಿ ಕುರಿತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಮುಂದೆ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.












Click it and Unblock the Notifications