Vijayendra vs Ramesh Fight: ವಿಜಯೇಂದ್ರ ನೀನಿನ್ನೂ ಬಚ್ಚಾ, ರಾಜ್ಯಾಧ್ಯಕ್ಷ ಆಗಲು ನೀನು ಯೋಗ್ಯ ಇಲ್ಲ: ರಮೇಶ್ ಜಾರಕಿಹೊಳಿ
ಬೆಳಗಾವಿ, ಜನವರಿ 18: ವಿಜಯೇಂದ್ರ ನೀನು ಬಚ್ಚಾ, ರಾಜ್ಯಾಧ್ಯಕ್ಷ ಆಗಲು ನೀನು ಯೋಗ್ಯ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಗೋಕಾಕನ ಅಂಕಲಗಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಎಚ್ಚರಿಕೆಯಿಂದ ಮಾತಾಡಿ, ಇಲ್ಲ ಅಂದ್ರೇ ರಾಜ್ಯದಲ್ಲಿ ತಿರುಗಾಡಲು ಕಷ್ಟ ಆಗುತ್ತದೆ ಎಂದು ಹೇಳಿದ್ದಾನೆ. ಆಯ್ತಪ್ಪ, ವಿಜಯೇಂದ್ರ ನಾನು ಶಿಕಾರಿಪುರಕ್ಕೆ ಬರ್ತೆನೆ, ನೀನೇ ಡೇಟ್ ಫಿಕ್ಸ್ ಮಾಡು, ನೀನು ಯಾವಾಗ ಬಾ ಅಂತಿ ಆವಾಗ್ಲೇ ಬರ್ತಿನಿ. ನಿನ್ನ ಮನೆ ಮುಂದೆಯಿಂದಲೇ ಪ್ರವಾಸ ಶುರು ಮಾಡ್ತೀನಿ, ನಿಂದು ಎಷ್ಟಿದೆ ನೋಡೋಣ ಎಂದರು.

ನಿನ್ನ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ, ಯಾವಾಗ ಅಂತೀಯಾ ಆವಾಗ್ಲೇ ಬರ್ತಿನಿ. ನಾನು ಪೊಲೀಸರ ಜೊತೆ ಬರಲ್ಲ, ನಾನು ಗನ್ ಮ್ಯಾನ್ ಕರ್ಕೊಂಡು ಬರಲ್ಲ, ಒಬ್ಬನೇ ಬರ್ತಿನಿ. ನಿಂಗ್ ಎಲ್ಲಿ ಬೇಕಾದ್ರೇ ಅಲ್ಲಿ ಹೆದರಿಸುವ ಶಕ್ತಿ ನನಗೆ ಕೊಟ್ಟಿದ್ದಾನೆ.
ಆದರೆ, ನಾನು ಅದನ್ನು ಮಾಡಲ್ಲ, ನಿನ್ನಂತ ಕೀಳು ಮಟ್ಟದ ರಾಜಕಾರಣ ಮಾಡೋಕೆ ಹೋಗಲ್ಲ. ವೈಯಕ್ತಿಕ ವಿಜಯೇಂದ್ರ ಕೆಟ್ಟ ಇರಬಹುದು, ಆದರೆ, ಪಕ್ಷದ ಅಧ್ಯಕ್ಷನಾಗಿರೋದಕ್ಕೆ ನಾನು ನಿನಗೆ ಗೌರವ ಕೊಡ್ತೀನಿ. ವಿಜಯೇಂದ್ರ ಬಗ್ಗೆ ಗೌರವ ಇಲ್ಲ, ಪಕ್ಷದ ಅಧ್ಯಕ್ಷನಿಗೆ ಗೌರವ ಕೊಡ್ತೀನಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇತ್ತೀಚೆಗೆ ಬಿ ಎಸ್ ಯಡಿಯೂರಪ್ಪ ಕುರಿತು ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡು ಎಂಬ ಹೇಳಿಕೆಗೆ ಗೋಕಾಕ ಸಾಹುಕಾರ ತಿರುಗೇಟು ನೀಡಿದ್ದು, ನಿಮ್ಮ ಅಪ್ಪನನ್ನು ಮುಖ್ಯಮಂತ್ರಿ ಮಾಡಲು ನಾನು ಬಿಜೆಪಿಗೆ ಬಂದಿದ್ದು, ನಿಮ್ಮ ಅಪ್ಪನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಾನು 17 ಜನ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬಂದಿದ್ದು ಎಂದು ತಿಳಿಸಿದರು. ಇಂದಿಗೂ ಯಡಿಯೂರಪ್ಪ ವಿರುದ್ಧ ಅಗೌರವದಿಂದ ನಾನು ಮಾತನಾಡಿಲ್ಲ. ಇಂದಿಗೂ ನನಗೆ ಬಿಎಸ್ ಯಡಿಯೂರಪ್ಪ ಅವರ ಮೇಲೆ ಗೌರವ ಇದೆ.ಆದರೆ ನೀನು ಸುಳ್ಳು ಹೇಳುವುದು ಬಿಡು ಎಂದು ರಮೇಶ್ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಯಿಂದ ರಾಜ್ಯ ಹಿಂದುಳಿಯುತ್ತೆ ಅನ್ನೋದು ತಪ್ಪು ಕಲ್ಪನೆ. ಗ್ಯಾರಂಟಿ ಸ್ಕೀಂಗೆ ಎಪ್ಪತ್ತು ಸಾವಿರ ಕೋಟಿ ಖರ್ಚಾಗುತ್ತದೆ. ಸಿದ್ದರಾಮಯ್ಯ ನವರು ಇದರ ಎರಡು ಪಟ್ಟು ಟ್ಯಾಕ್ಸ್ ಏರಿಸಿದ್ದಾರೆ.
ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ ಆಗುತ್ತೆ ಅನ್ನೋದು ಸುಳ್ಳು. ಈ ದುಡ್ಡು ಎಲ್ಲಿ ಹೋಗ್ತಿದೆ ಅನ್ನೋದು ಗೊತ್ತಾಗಬೇಕಿದೆ.ಆದರೆ, ಈ ಹಣ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತನೆ ಅಗಿದೆ. ಗ್ಯಾರಂಟಿ ಹೆಸರಿನಲ್ಲಿ ಟ್ಯಾಕ್ಸ್ ಡಬಲ್ ಮಾಡಿ ಎರಡು ಪಟ್ಟು ಹಣ ಪಡೆಯುತ್ತಿದ್ದೀರಿ.ಹೀಗೆ ಪಡೆದ ಹಣವನ್ನ ಕಾಂಗ್ರೆಸ್ ಹೈಕಮಾಂಡ್ ಗೆ ಕಳುಹಿಸುತ್ತಿದೀರಿ ಎಂದು ಆರೋಪಿಸಿದ್ದಾರೆ.
ನಮ್ಮ ಪಕ್ಷದಲ್ಲಿನ ಆಂತರಿಕ ಜಗಳ ಪಕ್ಷಕ್ಕೆ ಮುಳುವಾಗುವುದಿಲ್ಲ. ಪಕ್ಷ ಸಂಘಟನೆ ಬಂದಾಗ ನಾವೆಲ್ಲಾ ಒಂದಾಗುತ್ತೇವೆ. ಮತ್ತೆ ರಾಜ್ಯದಲ್ಲಿ ನಮ್ಮ ಜೇಂಡಾ ಏರಿಸುತ್ತೇವೆ, ಮುಸ್ಲಿಂ, ಎಸ್ಸಿ, ಎಸ್ಟಿ ಯವರನ್ನ ಹೆದರಿಸಿ ವೋಟ್ ಬ್ಯಾಂಕ್ ಮಾಡ್ಕೊಂಡಿದ್ದಾರೆ. ಜಾತಿ ಗಣತಿ ಯಾವಾಗೋ ಬರಬೇಕಿತ್ತು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗ ಯಾಕೆ ಜಾತಿ ಗಣತಿ ಮಾಡಲಿಲ್ಲ. ಈಗ ಯಾಕೆ ಜಾತಿ ಗಣತಿ ಬಗ್ಗೆ ಮಾಡ್ತಿದ್ದಾರೆ. ಹಿಂದುಳಿದ ನಾಯಕರಾಗಿ ಸಿದ್ದರಾಮಯ್ಯ ಉಳಿದಿಲ್ಲ ಎಂದು ಹೇಳಿದರು.












Click it and Unblock the Notifications