ಜಾರಕಿಹೊಳಿ ಸಿಡಿ ಪ್ರಕರಣ: ಲಿಖಿತ ವಾದಾಂಶ ಸಲ್ಲಿಸಲು ಸೂಚನೆ
ಬೆಂಗಳೂರು,ಸೆ.5: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ವಾದವನ್ನು ಸಲ್ಲಿಸುವಂತೆ ಹೈಕೋರ್ಟ್, ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ಆದೇಶ ನೀಡಿದೆ.
ಅಲ್ಲದೆ, ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ಪ್ರಕರಣದ ಎಫ್‌ಐಆರ್ ರದ್ದು ಕೋರಿ ಸಂತ್ರಸ್ತೆ ಮತ್ತಿಬ್ಬರು ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಸೆ.26ಕ್ಕೆ ಮುಂದೂಡಿದೆ.
ಸಂತ್ರಸ್ತ ಯುವತಿ ಮತ್ತಿಬ್ಬರು ಆರೋಪಿಗಳಾದ ಎಸ್. ಶ್ರವಣ್ ಕುಮಾರ್ ಹಾಗೂ ಬಿ.ಎಂ. ನರೇಶ್ ಗೌಡ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಸಂತ್ರಸ್ತೆ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹಾಜರಾಗಿ, ಕಳೆದ ಜು.25ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಕಾನೂನು ವಿಚಾರಗಳ ಕುರಿತು ನ್ಯಾಯಾಲಯಕ್ಕೆ ಸಲಹೆ ಹಾಗೂ ನೆರವು ನೀಡಲು ಹಿರಿಯ ವಕೀಲ ಸಂದೇಶ್ ಚೌಟ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿತ್ತು.

ಜತೆಗೆ, ಅರ್ಜಿದಾರರು ಹಾಗೂ ಪ್ರತಿವಾದಿಗಳ ಪರ ವಕೀಲರು ಪ್ರಕರಣದ ಬೆಳವಣಿಗೆಗಳ ಕುರಿತು ದಿನಾಂಕ ಸಹಿತ ಸಂಕ್ಷಿಪ್ತ ವಿವರ ಹಾಗೂ ಮಂಡಿಸಲಿರುವ ಕಾನೂನಾತ್ಮಕ ಅಂಶಗಳ ಲಿಖಿತ ವಾದ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದನ್ನು ಎರಡೂ ಪಕ್ಷದವರು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿತ್ತು ಎಂದರು.
ಕಾಲಾವಕಾಶ ಕೋರಿಕೆ: ಪ್ರತಿವಾದಿಗಳು ಈವರೆಗೂ ಯಾವುದೇ ಆಕ್ಷೇಪಣೆಗಳನ್ನು ನಮಗೆ ತಲುಪಿಸಿಲ್ಲ. ಇದರಿಂದ, ವಾದ ಮಂಡನೆಗೆ ಸಿದ್ಧವಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು. ಪ್ರತಿವಾದಿಗಳ ಪರ ವಕೀಲರು ಸಹ ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.
ಮನವಿ ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿತಲ್ಲದೆ, ಅಷ್ಟರೊಳಗೆ ಅರ್ಜಿದಾರರು ಮತ್ತು ಪ್ರತಿವಾದಿಗಳು ಪ್ರಕರಣದ ಸಿನಾಪ್ಸಿಸ್ ಹಾಗೂ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಅವುಗಳನ್ನು ಪರಸ್ಪರ ಹಂಚಿಕೊಂಡು ಮುಂದಿನ ವಿಚಾರಣೆ ವೇಳೆ ವಾದ ಮಂಡನೆಗೆ ಸಿದ್ಧರಾಗಬೇಕು ಎಂದು ಸೂಚಿಸಿತು.

ಆಕ್ಷೇಪಣೆ ಸಲ್ಲಿಸಲು ಸೂಚನೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ದೂರು ಕುರಿತ ಎಫ್‌ಐಆರ್ ರದ್ದು ಕೋರಿ ಆರೋಪಿಗಳಾದ ಶ್ರವಣ್ ಕುಮಾರ್ ಹಾಗೂ ನರೇಶ್ ಗೌಡ ಸಲ್ಲಿಸಿರುವ ಅರ್ಜಿಗಳನ್ನೂ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿಗೆ ಈವರೆಗೂ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಐಟಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.












Click it and Unblock the Notifications