ಶಾಸಕ ಭರತ್ ಶೆಟ್ಟಿ ಗಂಡು ಮಗ ಆಗಿದ್ದರೆ ಅವರ ಕೆನ್ನೆಗೆ ಹೊಡೆದು ನೋಡಲಿ: ರಮಾನಾಥ ರೈ ಸವಾಲು
ಮಂಗಳೂರು, ಜುಲೈ 10: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಪ್ರಚೋದನಾಕಾರಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಡಾ.ಭರತ್ ಶೆಟ್ಟಿ ಗಂಡು ಮಗ ಆಗಿದ್ದರೆ ಸಾಮಾನ್ಯ ಕಾರ್ಯಕರ್ತನ ಮೈ ಮುಟ್ಟಿ ನೋಡಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸವಾಲು ಹಾಕಿದ್ದಾರೆ.
ವಿರೋಧಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಿಂದೂ ವಿರೋಧಿ ಭಾಷಣ ಮಾಡಿದ್ದಾರೆಂದು ಆಪಾದಿಸಿ ನಡೆಸಿರುವ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿಯವರು, ರಾಹುಲ್ ಗಾಂಧಿಗೆ ಕಪಾಳಮೋಕ್ಷ ಮಾಡಬೇಕೆಂದು ಸೋಮವಾರ ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಶಾಸಕ ಭರತ್ ಶೆಟ್ಟಿ ವಿರುದ್ಧ ಸರಕಾರ ಸುಮೋಟೋ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದರು.

ಶಾಸಕ ಭರತ್ ಶೆಟ್ಟಿಗೆ ತಾಕತ್ತಿದ್ದರೆ, ಗಂಡುಮಗ ಹೌದಾದರೆ ರಾಹುಲ್ ಗಾಂಧಿಯವರಿಗೆ ಅಲ್ಲ, ಕಾಂಗ್ರೆಸ್‌ನ ಕಾರ್ಯಕರ್ತನ ಕೆನ್ನೆಗೆ ಹೊಡೆಯಲಿ ನೋಡುವಾ ಎಂದು ಮಾಜಿ ಸಚಿವ ರಮಾನಾಥ ರೈ ಸವಾಲೆಸೆದರು. ಸಂಸತ್ತಿನ ವಿಪಕ್ಷ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರು ದೇಶಕ್ಕಾಗಿ ಪ್ರಾಣ ತೆತ್ತಿರುವ ಮನೆತನದ ಮಗ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಕೆಟ್ಟದಾಗಿ ಪ್ರತಿಬಿಂಬಿಸುವ ಪ್ರಯತ್ನ ಬಿಜೆಪಿಯಿಂದ ಆಗುತ್ತಿದೆ.
ಭರತ್ ಶಾಸಕನಾಗಲು ನಾಲಾಯಕ್. ಯೋಗ್ಯತೆ ಇಲ್ಲದ ಮನುಷ್ಯ. ಜೆಡಿಎಸ್ ನಾಯಕ ಅಮರನಾಥ್ ಶೆಟ್ಟಿಯವರ ಕೃಪಾಕಟಾಕ್ಷದಿಂದ ರಾಜಕೀಯದಲ್ಲಿ ಮೇಲೆ ಬಂದ ಬಳಿಕ ಅವರಿಗೂ ಎಲ್ಲಾ ರೀತಿಯಲ್ಲಿ ಕೈ ಕೊಟ್ಟಿದ್ದಾನೆ. ರಾಹುಲ್ ಗಾಂಧಿ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ಮಾತನಾಡಿರುವುದು, ಹುಚ್ಚ ಎಂದು ಹೇಳಿರುವುದು ಆತನಿಗೆ ಶೋಭೆ ತರುವುದಿಲ್ಲ. ಹುಚ್ಚ ಯಾರೆಂದು ಅವರ ನಾಯಕರ ಕಟೌಟ್‌ನಲ್ಲಿ ವೇಷ ಭೂಷಣ ನೋಡಿದಾಗ ತಿಳಿಯುತ್ತೆ ಎಂದು ರಮಾನಾಥ ರೈ ತೀವ್ರ ವಾಗ್ದಾಳಿ ನಡೆಸಿದರು.
ಶಾಸಕ ಡಾ.ವೈ.ಭರತ್ ಶೆಟ್ಟಿ ವಿರುದ್ಧ ಎಫ್.ಐ.ಆರ್ ದಾಖಲು
ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಶಾಸಕ ಡಾ. ವೈ ಭರತ್ ಶೆಟ್ಟಿ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪಾಲಿಕೆ ಸದಸ್ಯ ಕಾಂಗ್ರೆಸ್ ನ ಅನಿಲ್ ಕುಮಾರ್ ದೂರಿನ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿಕೆ ನೀಡಿದರು.
ಮಂಗಳೂರಿನ ಕಾವೂರಿನಲ್ಲಿ ಸೋಮವಾರ ನಡೆದಿದ್ದ ಬಿಜೆಪಿ ಪ್ರತಿಭಟನೆಯ ವೇಳೆ ಈ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್ಲ ಎಂದು ಭರತ್ ಶೆಟ್ಟಿ ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಅಲ್ಲದೇ ಶಸ್ತ್ರಾಸ್ತ್ರ ಉಪಯೋಗಿಸಿ ಹೋರಾಟ ಮಾಡೋಣ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.












Click it and Unblock the Notifications