ರಾಮನಗರ: ರೈತರ ಬದುಕು ಬರಡಾಗಿಸಿದ ಕಾಡಾನೆಗಳು

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಜನವರಿ 29: ಈ ಬಾರಿ ರಾಮನಗರ ಬರದಿಂದ ತತ್ತರಿಸಿದೆ. ಇದರ ನಡುವೆಯೂ ಕಷ್ಟಪಟ್ಟು ಒಂದಷ್ಟು ರೈತರು ಕೃಷಿ ಮಾಡಿದ್ದಾರೆ. ಆದರೆ ಈ ಅಲ್ಪ ಸ್ವಲ್ಪ ಕೃಷಿಯನ್ನೂ ಅರಣ್ಯದಿಂದ ಬಂದ ಕಾಡಾನೆಗಳ ಹಿಂಡು ತಿಂದು ತೇಗುತ್ತಿದೆ. ತನ್ನ ಕಣ್ಣ ಮುಂದೆಯೇ ಬೆಳೆದ ಬೆಳೆ ನಾಶವಾಗುತ್ತಿದ್ದರೂ, ಕೈಕಟ್ಟಿ ಕೂರಬೇಕಾದ ದುರಂತ ಸ್ಥಿತಿಗೆ ರೈತ ಬಂದಿದ್ದಾನೆ.

ಕನಕಪುರ, ರಾಮನಗರ, ಮಾಗಡಿ, ಮತ್ತು ಚನ್ನಪಟ್ಟಣ ವ್ಯಾಪ್ತಿಯ ರೈತರ ಪಾಡು ಹೇಳ ತೀರದಂತಾಗಿದೆ. ಒಂದೆಡೆ ಕಾಡಾನೆಗಳು ಲಗ್ಗೆಯಿಟ್ಟರೆ ಮತ್ತೊಂದೆಡೆ ಚಿರತೆ, ಕಾಡುಹಂದಿ, ಕರಡಿಗಳು ದಾಳಿಯಿಡುತ್ತಿವೆ. ಬೆಳೆಯನ್ನು ರಕ್ಷಿಸಿಕೊಳ್ಳುವುದಲ್ಲದೆ, ಮನೆಯಲ್ಲಿ ಸಾಕು ಪ್ರಾಣಿಗಳನ್ನೂ ಕಣ್ಣಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.[ಆನೆ ಹಿಂಡು ದಾಳಿ ಮಾಡಿದಾಗ ಆತ ಏನು ಮಾಡಿದ?]

 What is Kambala, why it is significant for Karnataka

ಅರಣ್ಯದಲ್ಲಿ ಮೇವು, ನೀರಿಗೆ ಕೊರತೆಯುಂಟಾಗಿದ್ದು ಆಹಾರ ಅರಸಿಕೊಂಡು ಕಾಡುಪ್ರಾಣಿಗಳು ನಾಡಿನತ್ತ ಬರತೊಡಗಿವೆ. ಹಾಗೆ ಬರುವ ಪ್ರಾಣಿಗಳು ನೇರವಾಗಿ ರೈತರ ಜಮೀನಿಗೆ ನುಗ್ಗುತ್ತಿವೆ. ಹಿಂಡುಗಟ್ಟಲೆ ಬರುವ ಕಾಡಾನೆಗಳನ್ನು ರೈತರು ಓಡಿಸುವುದಾದರೂ ಹೇಗೆ? ಅವು ಕಷ್ಟಪಟ್ಟು ಬೆಳೆದ ಬಾಳೆ, ತೆಂಗು, ಅಡಿಕೆ ಮರಗಳನ್ನು ಮುರಿದು ತಿಂದು ತುಳಿದು ನಾಶ ಮಾಡಿ ತೆರಳುತ್ತಿದ್ದರೆ ರೈತರು ಅಸಹಾಯಕರಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬನ್ನೇರುಘಟ್ಟ, ಮುತ್ತತ್ತಿ, ಸಾವನದುರ್ಗ, ಹಂದಿಗೊಂದಿ, ತೆಂಗಿನಕಲ್ಲು ಅರಣ್ಯ ಪ್ರದೇಶ ಮತ್ತು ಕಾವೇರಿ ವನ್ಯಧಾಮ ಇರುವುದರಿಂದ ಇಲ್ಲಿಂದ ನೇರವಾಗಿ ವನ್ಯಪ್ರಾಣಿ ರೈತರ ಜಮೀನಿಗೆ ಬರುತ್ತಿವೆ. ಚಿರತೆ, ಕರಡಿಗಳ ಭಯವೂ ಇಲ್ಲಿನ ರೈತರನ್ನು ಕಾಡುತ್ತಿವೆ. ಒಬ್ಬೊಬ್ಬರೇ ಜಮೀನಿನಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. ಇನ್ನು ಸಾಕು ಪ್ರಾಣಿಗಳಾದ ಹಸು, ನಾಯಿ, ಮೇಕೆಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದು ಅವುಗಳನ್ನು ಕಾಪಾಡಿಕೊಳ್ಳುವುದೂ ಕಷ್ಟವಾಗುತ್ತಿದೆ.[ಸವದತ್ತಿಯಲ್ಲಿ ಕುಖ್ಯಾತ ಆನೆ ದಂತ ಚೋರರ ಬಂಧನ]

 What is Kambala, why it is significant for Karnataka

ಈ ನಡುವೆ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಚನ್ನಪಟ್ಟಣ ತಾಲೂಕಿನ ಹಲವೆಡೆ ದಾಂಧಲೆ ನಡೆಸುತ್ತಿವೆ. ಇವು ಮುತ್ತತ್ತಿ ಅರಣ್ಯದಿಂದ ಬಂದಿವೆ ಎಂದು ಹೇಳಲಾಗುತ್ತಿವೆ. ಮೊದಲಿಗೆ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಈ ಆನೆಗಳು ರಾತ್ರಿ ವೇಳೆ ತೋಟಗಳಿಗೆ ದಾಳಿ ಮಾಡಿ ತೆಂಗು, ಮಾವಿನಮರ, ಸೀಮೆಹುಲ್ಲು, ಜೋಳದ ಬೆಳೆಗಳನ್ನು ನಾಶಪಡಿಸುತ್ತಿವೆ. ಜತೆಗೆ ಕೊಳವೆ ಬಾವಿಗಳ ಪಂಪ್ ಸೆಟ್‍ಗಳ ಪರಿಕರಗಳನ್ನು ಮುರಿದು ಜಖಂಗೊಳಿಸುತ್ತಿವೆ. ಇದರಿಂದ ಭಯಭೀತರಾಗಿರುವ ರೈತರು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಪ್ರಾಣಿಗಳನ್ನು ಕಾಡಿಗೆ ಅಟ್ಟಿ ನಮ್ಮನ್ನು ಕಾಪಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ತುಂಬೇನಹಳ್ಳಿ ಗ್ರಾಮದ ಸಮೀಪದ ಸೀಗೆಹುದಿ ಅರಣ್ಯದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಮುತ್ತತ್ತಿ ಕಾಡಿಗೆ ಅಟ್ಟಿದ್ದರು. ಆದರೆ ನಾಡಿನಲ್ಲಿ ಸಿಗುವ ಮೇವಿನ ರುಚಿ ಕಂಡಿರುವ ಕಾಡಾನೆಗಳು ಮತ್ತೆ ನಾಡಿನತ್ತ ಮರಳಿವೆ. ರೈತರ ಕೃಷಿಭೂಮಿಯನ್ನೇ ಹುಡುಕುತ್ತಾ ಸಾಗುವ ಇವು ಎಲ್ಲಿ ಬಾಳೆ, ತೆಂಗು, ಅಡಿಕೆ ತೋಟಗಳು ಕಾಣುತ್ತೋ ಅಲ್ಲಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ.

 What is Kambala, why it is significant for Karnataka

ಅರಣ್ಯ ಇಲಾಖೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಮೂಲಕ ಅವು ಮರಳಿ ನಾಡಿನತ್ತ ಬಾರದಂತೆ ಕ್ರಮಕೈಗೊಳ್ಳಬೇಕಿದೆ. ಒಂದು ವೇಳೆ ಕಾಡು ಪ್ರಾಣಿಗಳ ಉಪಟಳ ಮುಂದುವರೆದರೆ ರೈತರ ಬದುಕು ಬರಡಾಗುವುದರಲ್ಲಿ ಸಂಶಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elephant and animals attacking on farm lands in and around Ramanagara, becoming much dangerous to farmers.
Please Wait while comments are loading...