ಕಾಂಗ್ರೆಸ್‌ನಲ್ಲೇ ಇರುವೆ : ಕಾರ್ಯಕರ್ತರಿಗೆ ರಾಮಲಿಂಗಾ ರೆಡ್ಡಿ ಪತ್ರ
ಬೆಂಗಳೂರು, ಜುಲೈ 17 : ಮಾಜಿ ಸಚಿವ, ಬಿ.ಟಿ.ಎಂ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯುತ್ತೇನೆ ಎಂದು ಘೋಷಣೆ ಮಾಡಿದರು. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯುವ ಕುರಿತು ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.
ರಾಮಲಿಂಗಾ ರೆಡ್ಡಿ ಬುಧವಾರ ರಾತ್ರಿ ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ತೀರ್ಮಾನದ ಕುರಿತು ವಿವರಣೆ ನೀಡಿದ್ದಾರೆ. "ಕಾಂಗ್ರೆಸ್‍ನ ಹಲವಾರು ವಿದ್ಯಾಮಾನಗಳಿಂದ ಶಾಸಕ ಸ್ಥಾನಕ್ಕೆ ಮಾತ್ರ ನನ್ನ ರಾಜೀನಾಮೆ ಹೊರತು ಪಕ್ಷಕ್ಕಲ್ಲ ಎಂದು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ" ಎಂದು ಹೇಳಿದ್ದಾರೆ.
"ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯಲು ತೀರ್ಮಾನಿಸಿದ್ದು ನಾನು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುತ್ತಿದ್ದೇನೆ" ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಇಲ್ಲಿದೆ....
ಕಾಂಗ್ರೆಸ್ ಹೈಕಮಾಂಡ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾಡುವ ವಿಜ್ಞಾಪನೆಗಳು...
ಕರ್ನಾಟಕದಲ್ಲಿ ನಡೆಯುತ್ತಿರುವ ಬಹುತೇಕ ರಾಜಕೀಯ ವಿದ್ಯಮಾನಗಳ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಹಾಗೂ ಕಾರ್ಯಕರ್ತರಿಗೆ ಬಹುತೇಕ ಅರಿವಿದೆ.
ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ವಿದ್ಯಾಮಾನಗಳಿಂದ ಬೇಸರವಾಗಿ (ಕಾರಣಗಳನ್ನು ಅನೇಕ ಬಾರಿ ಮಾಧ್ಯಮ ಮುಖಾಂತರ ತಿಳಿಸಿದ್ದೇನೆ) ದಿನಾಂಕ 06-07-2019 ರಂದು ನಾನು ಆಯ್ಕೆಯಾಗಿರುವ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ.
ನಾನೆಂದು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟವನಲ್ಲ ಸ್ಥಾನಮಾನ ಪಡೆಯಲು ನಾನು ಎಂದೂ ಆಸೆಪಟ್ಟವನಲ್ಲ. ಕಳೆದ 45 ವರ್ಷದ ಸುಧೀರ್ಘ ರಾಜಕೀಯ ಜೀವನದಲ್ಲಿ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ, 7 ಬಾರಿ ಶಾಸಕನಾಗಿ ಪಕ್ಷದ ಶ್ರೇಯೋಭಿವೃದ್ದಿಗಾಗಿ ಹಾಗೂ ನನ್ನ ಮತಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಸಚಿವನಾಗಿದ್ದಂತಹ ಸಂದರ್ಭದಲ್ಲಿ ರಾಜ್ಯಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ.
ಕಾಂಗ್ರೆಸ್‍ನ ಹಲವಾರು ವಿದ್ಯಾಮಾನಗಳಿಂದ ಶಾಸಕ ಸ್ಥಾನಕ್ಕೆ ಮಾತ್ರ ನನ್ನ ರಾಜೀನಾಮೆ ಹೊರತು ಪಕ್ಷಕ್ಕಲ್ಲ ಎಂದು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ. ಕಾಂಗ್ರೆಸ್‌ನ ಹಿರಿಯ ನಾಯಕರು ರಾಜೀನಾಮೆ ವಾಪಾಸ್ ಪಡೆದು ಪಕ್ಷದಲ್ಲಿರುವಂತೆ ಕೋರಿರುತ್ತಾರೆ. ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆ ವಾಪಾಸ್ ಪಡೆಯಲು ಮನವಿ ಮಾಡಿಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯಲು ತೀರ್ಮಾನಿಸಿದ್ದು ನಾನು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುತ್ತಿದ್ದೇನೆ.
ತಮ್ಮ ವಿಶ್ವಾಸಿ
ರಾಮಲಿಂಗಾ ರೆಡ್ಡಿ












Click it and Unblock the Notifications