ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ರಾಮಚಂದ್ರಾಪುರ ಮಠದ 12 ಪ್ರಶ್ನೆಗಳು
ಬೆಂಗಳೂರು, ಸೆಪ್ಟೆಂಬರ್ 24 : ರಾಮಚಂದ್ರಾಪುರ ಮಠ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಅವರಿಗೆ 12 ಪ್ರಶ್ನೆಗಳನ್ನು ಕೇಳಿದೆ. ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾದ ನಂತರ ಹಲವು ಬಾರಿ ಈ ಕುರಿತು ಮಾತನಾಡಿರುವ ಅವರಿಗೆ ಈ ಪ್ರಶ್ನೆಗಳಿಗೆ ಉತ್ತರಿಸುವಂತೆ ಮನವಿ ಮಾಡಿದೆ.
ರಾಮಚಂದ್ರಾಪುರ ಮಠ ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಾಘವೇಶ್ವರ ಭಾರತಿ ಸ್ವಾಮೀಜಿಗಳು ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾದ ನಂತರ ಹಲವು ಬಾರಿ ಬೆಂಗಳೂರಿಗೆ ಆಗಮಿಸಿ ಶ್ರೀಗಳ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ, ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ತೀರ್ಪು ನೀಡುತ್ತಿರುವ ಲಲಿತಾ ಕುಮಾರಮಂಗಳಂ ಕಾರ್ಯವೈಖರಿಗೆ ಮಠ ಅಸಮಾಧಾನ ವ್ಯಕ್ತಪಡಿಸಿದೆ. [ಶ್ರೀಗಳಿಗೆ ಜಾಮೀನು ಸಿಕ್ಕಿದ್ದು ಹೇಗೆ?]
ಮಂಗಳವಾರ ಬೆಂಗಳೂರಿಗೆ ಬಂದಿದ್ದ ಲಲಿತಾ ಕುಮಾರಮಂಗಳಂ ಅವರು, 'ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಸ್ವಾಮೀಜಿಗಳಿಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆಯೇ? ಪ್ರಶ್ನಿಸಿದ್ದರು. 'ಸ್ವಾಮೀಜಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಜಾಮೀನು ಹೇಗೆ ಸಿಕ್ಕಿತು?, ಮೊದಲ ಪ್ರಕರಣ ದಾಖಲಾಗಿ ಒಂದು ವರ್ಷವಾದರೂ ಜಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ?' ಎಂದು ಹೇಳಿದ್ದರು.
ಈ ಎಲ್ಲಾ ಹೇಳಿಕೆಗಳನ್ನು ಉಲ್ಲೇಖಿಸಿ ಮಠ 12 ಪ್ರಶ್ನೆಗಳನ್ನು ಕೇಳಿದೆ. 1200 ವರ್ಷಗಳ ಇತಿಹಾಸವಿರುವ ಶಂಕರಾಚಾರ್ಯರ ಪರಂಪರೆಯ ಪೀಠವನ್ನು ವಿನಾಶಗೊಳಿಸುವ ಷಡ್ಯಂತ್ರದಲ್ಲಿ ಕೇಂದ್ರ ಸರ್ಕಾರದ ಭಾಗವಾಗಿರುವ ಮಹಿಳಾ ಆಯೋಗವನ್ನು ಅಸ್ತ್ರವಾಗಿ ಬಳಸಬೇಡಿ ಎಂದು ಮಠ ಆಗ್ರಹಿಸಿದೆ. ರಾಮಚಂದ್ರಾಪುರ ಮಠ ಕೇಳಿರುವ 12 ಪ್ರಶ್ನೆಗಳು.........

ಪ್ರಶ್ನೆ 1 : ನಷ್ಟವನ್ನು ತುಂಬಿಕೊಡಬಲ್ಲಿರಾ?
ಶ್ರೀಗಳ ಮೇಲೆ ದಾಖಲಾಗಿರುವ ಎರಡು ಪ್ರಕರಣಗಳು ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದವು ಎಂಬುದನ್ನು ಸಾಬೀತು ಮಾಡಲು ನಾವು ಸಿದ್ಧ. ಆದರೆ, ಹಾಗೆ ಸಾಬೀತಾದ ಮೇಲೆ ಅಲ್ಲಿಯವರೆಗೆ ಆದ ಮಾನಹಾನಿ ಮತ್ತಿತರ ನಷ್ಟಗಳನ್ನು ನೀವು ತುಂಬಿಕೊಡಬಲ್ಲಿರಾ?

ಪ್ರಶ್ನೆ 2 : ಶ್ರೀ ಮಠದ ಧ್ವನಿ ಆಲಿಸುವುದಿಲ್ಲವೇ?
ಜಗತ್ತಿನಲ್ಲಿ ಎಲ್ಲೂ ಒಂದು ಕಡೆಯ ಧ್ವನಿ ಕೇಳಿ ತೀರ್ಪು ನೀಡುವ ಕ್ರಮವಿಲ್ಲ. ಆದರೆ, ನೀವು ಬೆಂಗಳೂರಿಗೆ ಬಂದಾಗ ಇಬ್ಬರು ದೂರುದಾರರ ಮಾತನ್ನು ಮಾತ್ರ ಕೇಳಿ ತೀರ್ಪು ನೀಡುತ್ತಿದ್ದೀರಿ. ಶ್ರೀ ಮಠದ ಧ್ವನಿಯಲ್ಲಿ ಆಲಿಸಲು ಸತ್ಯದ ಭೀತಿಯೇ ನಿಮಗೆ?

ಪ್ರಶ್ನೆ 3 : ಮಠದ ಧ್ವನಿಯನ್ನು ನೀವಂತೂ ಕೇಳಲಿಲ್ಲ
ಶ್ರೀ ಮಠದ ಧ್ವನಿಯನ್ನು ನೀವು ಕೇಳಲಿಲ್ಲ. ಶ್ರೀ ಮಠದ ಧ್ವನಿಯನ್ನು ನಿಮಗೆ ಕೇಳಿಸಲು ಅಸಂಖ್ಯಾತ ಮಹಿಳಾ ಭಕ್ತರ ಪರವಾಗಿ ನಾಲ್ವರು ಮಹಿಳೆಯರು ಬಂದರೆ ಅವರ ಮಾತು ಕೇಳದೇ ಅವಮಾನಿಸಿ ಕಳುಹಿಸಿದಿರಿ. ಮಹಿಳಾ ಆಯೋಗದ ಅಧ್ಯಕ್ಷರಾದ ನಿಮಗೆ ಬಂದವರು ಮಹಿಳೆಯರೂ ಎಂಬುದು ತಿಳಿಯಲಿಲ್ಲವೇ?. ನಿಮ್ಮ ಹುದ್ದೆಗೆ ಇದು ಶೋಭೆಯೇ?

ಪ್ರಶ್ನೆ 4 : ನಮ್ಮ ಪ್ರಕರಣಕ್ಕೆ ಪ್ರಾಮುಖ್ಯತೆ ಏಕೆ?
ದೇಶದಲ್ಲಿ ಲೆಕ್ಕವಿಲ್ಲದಷ್ಟು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಆದರೆ, ನಮ್ಮ ಪ್ರಕರಣಕ್ಕೆ ಪ್ರಾಮುಖ್ಯತೆ ಏಕೆ?. ರಾಷ್ಟ್ರೀಯ ಮಹಿಳಾ ಆಯೋಗದ ನಿಮ್ಮ ಕಾರ್ಯ ವೈಖರಿ ಮಠದ ಪ್ರಕರಣಗಳಿಗೆ ಮಾತ್ರ ಸೀಮಿತವೇ?, ಏಕಿಷ್ಟು ಪ್ರಾಮುಖ್ಯತೆ ನೀಡುತ್ತಿದ್ದೀರಿ? ದೆಹಲಿಯಿಂದ ನೀವೇ ಬರುತ್ತಿದ್ದೀರೆ? ಅಥವ ಯಾರಾದರೂ ಕಳುಹಿಸುತ್ತಿದ್ದಾರೆಯೇ?

ಪ್ರಶ್ನೆ 5 : ಹಸ್ತಕ್ಷೇಪ ಮಾಡುತ್ತಿದ್ದೀರಾ?
ಅತ್ಯಾಚಾರ ಪ್ರಕರಣದಲ್ಲಿ ಜಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ ಎಂದು ಪದೇ-ಪದೇ ಹೇಳುತ್ತಿದ್ದೀರಿ?. ಇದು ಚಾರ್ಜ್‌ಶೀಟ್ ಆಗಬೇಕೆಂದು ಒತ್ತಡ ತಂದಂತೆ ಅಲ್ಲವೇ?. ಒತ್ತಡ ಹಾಕುವುದು, ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದು ಆಯೋಗದ ಕಾರ್ಯವೈಖರಿ ನಿಯಮಾವಳಿಯಂತೆಯೇ ಇದೆಯೇ?

ಪ್ರಶ್ನೆ 6 : ಸರ್ಕಾರ ಯಾರ ಬೆನ್ನಿಗೆ ನಿಂತಿದೆ
ಸರ್ಕಾರ ಶ್ರೀಗಳ ಬೆನ್ನಿಗೆ ನಿಂತಿದೆ ಎಂದು ಪದೇ-ಪದೇ ಆರೋಪ ಮಾಡುತ್ತಿದ್ದೀರಿ. ಸಿಐಡಿಯವರು ಶ್ರೀಗಳನ್ನು ವಿಚಾರಣೆಗೆ ಕರೆಸಿ, ವಿಚಾರಣೆಗೆ ಬಂದಿದ್ದನ್ನು ಕಾರಣ ಮಾಡಿಕೊಂಡು ಕೋರ್ಟ್‌ನಲ್ಲಿ ಗಿರಿನಗರದ ವ್ಯಾಪ್ತಿ ಮೀರಿದ್ದಾರೆ ಜಾಮೀನು ರದ್ದುಗೊಳಿಸಿ ಎಂದು ಆಗ್ರಹ ಮಾಡುತ್ತಿದೆ. ರಕ್ಷಣೆಗೆ ನಿಂತಿದ್ದರೆ ಹೀಗಾಗುತ್ತಿತ್ತೆ?

ಪ್ರಶ್ನೆ 7 : 60 ಗಂಟೆ ವಿಚಾರಣೆ ಎದುರಿಸಿದ್ದಾರೆ
ಶ್ರೀಗಳು ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದೀರಿ. ಶ್ರೀಗಳು ಇದುವರೆಗೂ 12 ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. 60 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಈ ವಿಷಯ ನಿಮಗೆ ತಿಳಿದಿಲ್ಲವೇ?, ಇಂತಹ ಜಾಣ ಕುರುಡು ಏಕೆ?

ಪ್ರಶ್ನೆ 8 : ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೇ?
ಶ್ರೀಗಳಿಗೆ ಜಾಮೀನು ಹೇಗೆ ಸಿಕ್ಕಿತ್ತು ಎಂದು ಹಾಸ್ಯಸ್ಪದವಾಗಿ ಹೇಳಿದ್ದೀರಿ. ಕರ್ನಾಟಕದ ಕೋರ್ಟ್‌ಗಳಲ್ಲಿ ನಡೆಯುವ ಕಲಾಪದ ಮೇಲೆ ನಿಮಗೆ ನಂಬಿಕೆ ಇಲ್ಲವೆ?. ನಿಮ್ಮ ದೃಷ್ಟಿಯಲ್ಲಿ ಕಾನೂನು ಹಾಸ್ಯಸ್ಪದವೇ?, ನೀವು ಕಾನೂನು-ಸಂವಿಧಾನವನ್ನು ಮೀರಿದವರೇ?

ಪ್ರಶ್ನೆ 9 : ಧಂಗೆ ಎಬ್ಬಿಸುವಿರೇ?
ಶ್ರೀಗಳ ವಿರುದ್ಧ 2 ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಜನರು ಏಕೆ ಸುಮ್ಮನಿದ್ದಾರೆ? ಎಂದು ಕೇಳಿದ್ದೀರಿ. ಇದೇ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಪ್ರಚೋದನಾಕಾರಿ ಹೇಳಿಕೆ ನೀಡಿ ಧಂಗೆ ಎಬ್ಬಿಸುವುದು ನಿಮ್ಮ ಅಜೆಂಡಾವೇ?

ಪ್ರಶ್ನೆ 10 : ಅಪರಾಧಿ ಎಂದು ನೋಡುತ್ತಿದ್ದೀರಿ
ಯಾವುದೇ ಆರೋಪಿ ಅಪರಾಧಿ ಎಂದು ನಿರ್ಣಯವಾಗುವ ತನಕ ನಿರಪರಾಧಿ ಎಂದು ಹೇಳಲಾಗುತ್ತದೆ. ಆದರೆ. ನೀವು ಆರೋಪಿಯನ್ನು ಅಪರಾಧಿಯನ್ನಾಗಿ ನೋಡುತ್ತಿದ್ದೀರಿ ಏಕೆ?

ಪ್ರಶ್ನೆ 11 : ನಿಮಗೆ ಹಕ್ಕು ಕೊಟ್ಟವರು ಯಾರು?
ಶ್ರೀಗಳು ಮುಖ ಮುಚ್ಚಿಕೊಂಡು ಓಡಾಡಯವಂತಹ ತಪ್ಪನ್ನು ಮಾಡಿಲ್ಲ. ಶ್ರೀಗಳು ಸ್ವತಂತ್ರ ಭಾರತದ ಪ್ರಜೆ. ಸಂವಿಧಾನ ಬದ್ಧವಾಗಿ ಬಂದ ಮೂಲಭೂತ ಹಕ್ಕುಗಳನ್ನು ಪ್ರಶ್ನಿಸುವ ಹಕ್ಕನ್ನು ನಿಮಗೆ ಕೊಟ್ಟವರು ಯಾರು?

ಪ್ರಶ್ನೆ 12 : ರಾಜ್ಯಪಾಲರಿಗೆ ಏಕೆ ಪತ್ರ ಬರೆಯಬಾರದು?
ಶ್ರೀಗಳು ಹಾಗೂ ಭಕ್ತರಿಂದ ದೂರುರಾದ ಮಹಿಳೆಯರಿಗೆ ತೊಂದರೆ ಆಗುತ್ತಿದೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೀರಿ. ಆದರೆ, ಶ್ರೀಗಳ ಮೇಲೆ ಹೊರಿಸಿರುವ ಸುಳ್ಳು ಆರೋಪಗಳಿಂದ ಇಂದಿಗೂ ಶ್ರೀಗಳ ಲಕ್ಷಾಂತರ ಭಕ್ತರಿಗೆ ನೋವಾಗುತ್ತಿದೆ. ಈ ಬಗ್ಗೆಯೂ ರಾಜ್ಯಪಾಲರಿಗೆ ಪತ್ರ ಬರೆಯಬಾರೆದೇ?












Click it and Unblock the Notifications