ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ಗೆ ಸಡ್ಡು ಹೊಡೆಯಲು ಮೈತ್ರಿಕೂಟದಿಂದ 5ನೇ ಅಭ್ಯರ್ಥಿ ಕಣಕ್ಕೆ? ಕಮಲ-ದಳ ಲೆಕ್ಕಾಚಾರವೇನು?
ಬೆಂಗಳೂರು, ಫೆಬ್ರವರಿ 07: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಇತ್ತ ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಹಾಗೂ ಜೆಡಿಎಸ್ ಮಂತ್ರಿಯಾಗಿದ್ದು, ಐದನೇ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕಮಲದಳ ನಾಯಕರು ಚಿಂತನೆ ನಡೆಸಿದ್ದಾರೆ.
ಹೌದು, ಪ್ರಸ್ತುತ ರಾಜ್ಯದಿಂದ ರಾಜ್ಯಸಭೆಯ ಪ್ರತಿನಿಧಿಗಳಾಗಿರುವ ರಾಜೀವ್ ಚಂದ್ರಶೇಖರ್, ಜಿ.ಸಿ ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ ಹಾಗೂ ಸೈಯದ್ ನಾಸಿರ್ ಹುಸೇನ್ ಅವರ ಅಧಿಕಾರ ಅವಧಿ ದಿನಾಂಕ: 02-04-2024 ಕ್ಕೆ ಕೊನೆಗೊಳ್ಳಲಿದ್ದು, ತೆರವಾಗಲಿರುವ 4 ಸ್ಥಾನಗಳಿಗೆ ಈ ಚುನಾವಣೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ರಾಜಕೀಯ ಕಣ ರಂಗೇರುವ ಸಾಧ್ಯತೆ ಇದೆ.

ರಾಜ್ಯದಲ್ಲಿ ವಿವಿಧ ಪಕ್ಷಗಳ ಬಲಾಬಲದ ಹಿನ್ನೆಲೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಗೆ ಮೂರು ಸ್ಥಾನಗಳು ಮತ್ತು ಬಿಜೆಪಿ ಒಂದು ಸ್ಥಾನವನ್ನು ಅನಾಯಾಸವಾಗಿ ಗೆದ್ದುಕೊಳ್ಳಲು ಸಾಧ್ಯವಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌ಗೆ ಸಡ್ಡು ಹೊಡೆಯಲು ತೀರ್ಮಾನಿಸಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಐದನೇ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಪ್ಲಾನ್ ನಡೆಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ಕಮಲ-ದಳ ನಾಯಕರು ಮಾಸ್ಟರ್ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಹೀನಾಯವಾಗಿ ಸೋಲು ಕಂಡ ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ರಾಜ್ಯಸಭೆ ಚುನಾವಣಾ ಕಣಕ್ಕಿಳಿಸುವ ಕುರಿತು ಚಿಂತನೆ ನಡೆದಿತ್ತು. ವಿ ಸೋಮಣ್ಣ ಅವರನ್ನ ಕಣಕ್ಕಿಳಿಸುವ ಮೂಲಕ ಲಿಂಗಾಯತ ಶಾಸಕರಿಂದ ಅಡ್ಡ ಮತದಾನ ಮಾಡಿಸಬಹುದು ಎಂಬ ಲೆಕ್ಕಾಚಾರವನ್ನ ಕಮಲ-ದಳ ನಾಯಕರು ಹಾಕಿಕೊಂಡಿದ್ರು, ಆದರೆ, ಈ ಒಂದು ಆಫರ್ ಅನ್ನು ಮಾಜಿ ಸಚಿವರಾದ ವಿ ಸೋಮಣ್ಣ ಅವರು ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಕುರಿತು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧಪಕ್ಷದ ನಾಯಕ ಆರ್.ಅಶೋಕ ಹಾಗೂ ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿದ್ದು, ಒಮ್ಮತದ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ಎರಡೂ ಪಕ್ಷಗಳ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಆಡಳಿತರೂಢ ಕಾಂಗ್ರೆಸ್ 135 ಶಾಸಕರ ಬಲವನ್ನು ಹೊಂದಿದೆ. ಬಿಜೆಪಿ 66, ಜೆಡಿಎಸ್ 19, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಪಕ್ಷೇತರರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮತ್ತು ಗೌರಿಬಿದನೂರು ಶಾಸಕ ಕೆ.ಪಿ.ಪುಟ್ಟಸ್ವಾಮಿ ಇದ್ದಾರೆ. ದರ್ಶನ್, ಲತಾ, ಪುಟ್ಟಸ್ವಾಮಿ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದಾರೆ. ಜನಾರ್ದನ ರೆಡ್ಡಿ ಸಹ ಆರಂಭದಲ್ಲಿ ಕಾಂಗ್ರೆಸ್ ಜತೆಗಿರುವುದಾಗಿ ಹೇಳಿದ್ದರು. ಇತ್ತೀಚೆಗೆ, ಬಿಜೆಪಿ ಕಡೆ ಒಲವು ತೋರಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತವೆ. ಬಿಜೆಪಿಯ 21 ಹೆಚ್ಚುವರಿ ಮತಗಳು, ಜೆಡಿಎಸ್‌ನ 19, ಪಕ್ಷೇತರ 2 ಮತ್ತು ಕೆಆರ್‌ಪಿಪಿ, ಸರ್ವೋದಯ ಕರ್ನಾಟಕದ ತಲಾ ಒಂದು ಮತಗಳನ್ನು ಪಡೆಯಲು ಸಾಧ್ಯವಾದರೆ 44 ಮತಗಳನ್ನು ಪಡೆಯಬಹುದು. ಇನ್ನೂ ಒಂದೆರಡು ಹೆಚ್ಚು ಮತಗಳನ್ನ ಪಡೆಯಲು ಕಾಂಗ್ರೆಸ್ ನ ಅಸಮಾಧಾನಿತ ನಾಯಕರಿಂದ ಅಡ್ಡ ಮತದಾನ ಮಾಡಿಸುವ ಮೂಲಕ ಗೆಲುವು ಸಾಧಿಸುವ ಲೆಕ್ಕಾಚಾರವನ್ನ ಕಮಲ-ದಳ ನಾಯಕರು ಹಾಕಿಕೊಂಡಿದ್ದಾರೆ.












Click it and Unblock the Notifications