ರಾಜ್ಯಸಭೆ ನಾಲ್ಕನೇ ಅಭ್ಯರ್ಥಿ ಆಯ್ಕೆಯ ಚದುರಂಗ ಆಟ ಶುರು
ಬೆಂಗಳೂರು, ಮೇ. 20 : ಕರ್ನಾಟಕದಿಂದ ರಾಜ್ಯಸಭೆಗೆ ಅಯ್ಕೆಯಾಗುವ ನಾಲ್ಕನೇ ಅಭ್ಯರ್ಥಿ ರಾಜ್ಯ ರಾಜಕೀಯದಲ್ಲಿ ಚದುರಂಗ ಆಟಕ್ಕೆ ನಾಂದಿ ಹಾಡಿದೆ. ರಾಜ್ಯಸಭೆಗೆ ಕರ್ನಾಟಕದಿಂದ ನಾಲ್ಕನೇ ಅಭ್ಯರ್ಥಿ ಆಯ್ಕೆ ಸಂಬಂಧ ಮೂರು ರಾಜಕೀಯ ಪಕ್ಷಗಳು ಗೆಲುವಿಗಾಗಿ ಸೆಣಸಾಣ ನಡೆಸುತ್ತಿವೆ. ಮೂರು ಪಕ್ಷಗಳು ತಮ್ಮದೇ ತಂತ್ರಗಳನ್ನು ರೂಪಿಸಿವೆ.
ಕರ್ನಾಟಕದ ವಿಧಾನಸಭೆ ಸದಸ್ಯರ ಬಲದಿಂದ ನಾಲ್ಕು ರಾಜ್ಯ ಸಭೆ ಸದಸ್ಯರ ಆಯ್ಕೆಗೆ ಅವಕಾಶವಿದೆ. ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್ ನಿಂದ ಒಬ್ಬರು ಸಲೀಸಾಗಿ ಆಯ್ಕೆಯಾಗಲು ಅವಕಾಶವಿದೆ. ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷಗಳಿಗೆ ಅವಕಾಶವಿಲ್ಲ. ಅದರಲ್ಲಿ ಕನಿಷ್ಠ ಒಬ್ಬ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಿಸುವ ಕಸರತ್ತು ಆರಂಭಿರುವ ಜೆಡಿಎಸ್ ಕುಪೇಂದ್ರರೆಡ್ಡಿಯನ್ನು ಕಣಕ್ಕೆ ಇಳಿಸಿ ನಾವೂ ಆಟದಲ್ಲಿ ಇದ್ದೀವಿ ಎಂದು ಗುರುತಿಸಿಕೊಂಡಿತ್ತು. ನಾಲ್ಕನೇ ಅಭ್ಯರ್ಥಿಯ ಅಯ್ಕೆಗೆ ಮೂರು ಪಕ್ಷಗಳು ಶಾಸಕರನ್ನು ಸೆಳೆಯುವ ಕಸರತ್ತು ಅರಂಭಿಸಿವೆ. ಅದರಲ್ಲಿ ಜೆಡಿಎಸ್ ಮತ ಸೆಳೆಯುವ ನಿಟ್ಟಿನಲ್ಲಿ ಸಿದ್ದು ಅಂಡ್ ಜಮೀರ್ ಟೀಮ್ ಒಂದು ಹೆಜ್ಜೆ ಮುಂದಿಟ್ಟಿದೆ. ಅಂತೂ ಮೂರು ಪಕ್ಷಗಳು ಕಣಕ್ಕೆ ಇಳಿಸಿರುವ ಮೂವರಲ್ಲಿ ಯಾರಿಗೆ ವಿಜಯ ಮಾಲೆ ಸಿಗಲಿದೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.

ಬಿಜೆಪಿಯ 2 + 1 ಲೆಹರ್ ಸಿಂಗ್ ಆಟ :
ರಾಜ್ಯಸಭೆಗೆ ಬಿಜೆಪಿಯಿಂದ ಇಬ್ಬರ ಆಯ್ಕೆ ಬಹುತೇಕ ಖಚಿತವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ ಅಯ್ಕೆ ಬಹುತೇಕ ಖಚಿತವಾಗಿದೆ. ಬಿಜೆಪಿಯ 119 ಶಾಸಕರು, ವಿಧಾನಸಭಾ ಅಧ್ಯಕ್ಷರು, ಸ್ವತಂತ್ರ ಅಭ್ಯರ್ಥಿ ಮುಳಬಾಗಿಲು ಎಚ್. ನಾಗೇಶ್, ಬಿಎಸ್‌ಪಿ ಶಾಸಕ ಎನ್. ಮಹೇಶ್ ಸೇರಿದಂತೆ ಒಟ್ಟು 122 ಶಾಸಕರಿದ್ದಾರೆ. ಒಬ್ಬ ಅಭ್ಯರ್ಥಿಗೆ ಕನಿಷ್ಠ 45 ಶಾಸಕರ ಮತಗಳು ಅತ್ಯಗತ್ಯ. ಹೀಗಾಗಿ ಇಬ್ಬರ ಆಯ್ಕೆ ಬಹುತೇಕ ಖಚಿತವಾಗಿದೆ. ಇನ್ನು ಸ್ವತಂತ್ರ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲುವು ಸಾಧಿಸುವ ತಂತ್ರ ರೂಪಿಸಿದ್ದ ಬಿಜೆಪಿ ಕೊನೆ ಕ್ಷಣದಲ್ಲಿ ಯಡಿಯೂರಪ್ಪ ಅವರ ಆಪ್ತ, ಬಿಜೆಪಿಯ ಮುಖಂಡ ಲಹರ್ ಸಿಂಗ್ ಅವರನ್ನು ಕಣಕ್ಕೆ ಇಳಿಸಿದೆ. ಆದರೆ ಮೂರನೇ ಅಭ್ಯರ್ಥಿಯ ಗೆಲವಿಗೆ ಆಗುವಷ್ಟು ಮತ ಬಿಜೆಪಿಯ ಬಳಿ ಇಲ್ಲ. ಅನ್ಯ ಪಕ್ಷದ ಶಾಸಕರ ಮತ ಸೆಳೆಯುವ ರಹಸ್ಯ ಕಾರ್ಯಾಚರಣೆ ಅದಾಗಲೇ ಆರಂಭಿಸಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಬಿಜೆಪಿ ಹೊಸ್ತಿಲು ತುಳಿಯಲು ತುದಿಗಾಲಲ್ಲಿ ಇರುವ ಅನ್ಯ ಪಕ್ಷದ ಶಾಸಕರ ಮತ ಪಡೆಯಲು ಆರಂಭಿಸಿದೆ.

ಸಿದ್ದು ರಣ ತಂತ್ರಕ್ಕೆ ಜೆಡಿಎಸ್ ಥಂಡಾ!
ಮಾಜಿ ಕೇಂದ್ರ ಸಚಿವ ಜಯರಾಮ್ ರಮೇಶ್ ಅವರನ್ನು ಕಾಂಗ್ರೆಸ್ ಮೊದಲ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಜಯರಾಮ್ ರಮೇಶ್ ರಾಜ್ಯಸಭೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ನ ಶಾಸಕರ ಸಂಖ್ಯಾ ಬಲ 70 (69 + ಶರತ್ ಬಚ್ಚೇಗೌಡ) ಜಯರಾಮ್ ರಮೇಶ್ ಆಯ್ಕೆಗೆ ಬೇಕಾಗಿರುವ 45 ಮತಗಳು ಸರಾಗವಾಗಿ ಬೀಳಲಿವೆ. ಉಳಿದ 25 ಶಾಸಕರಿಂದ ಎರಡನೇ ಅಭ್ಯರ್ಥಿ ಆಯ್ಕೆ ಅಸಾಧ್ಯ. ಕೇವಲ ಒಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮೊದಲು ಕಾಂಗ್ರೆಸ್ ನಿರ್ಧರಿಸಿತ್ತು. ಯಾವಾಗ ಉಳಿದ ಮತಗಳಿಗೆ ಜೆಡಿಎಸ್ ಅಭ್ಯರ್ಥಿ ಗಾಳ ಹಾಕಲು ಶುರು ಮಾಡಿತ್ತು. ಜೆಡಿಎಸ್ ಕಾರ್ಯತಂತ್ರದಿಂದ ಎಚ್ಚೆತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ಕಾಂಗ್ರೆಸ್ ನ ನಾಯಕ ಮನ್ಸುರ್ ಆಲಿಖಾನ್ ಅವರನ್ನು ಕಣಕ್ಕೆ ಇಳಿಸಿದೆ. ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ತಂತ್ರಕ್ಕೆ ಟಾಂಗ್ ಕೊಟ್ಟಿದೆ.

ಅಸ್ತಿತ್ವಕ್ಕಾಗಿ ಜೆಡಿಎಸ್ ಬಡಿದಾಟ:
33 ಶಾಸಕರ ಸಂಖ್ಯಾಬಲ ಹೊಂದಿರುವ ಜೆಡಿಎಸ್ ನ ಅಭ್ಯರ್ಥಿ ಆಯ್ಕೆಯಾಗಲು ಇನ್ನೂ 13 ಶಾಸಕರ ಮತಗಳು ಅಗತ್ಯವಿದೆ. ಕಾಂಗ್ರೆಸ್ ಏನಾದರೂ ಮೂರನೇ ಅಭ್ಯರ್ಥಿ ಹಾಕದಿದ್ದ ಪಕ್ಷದಲ್ಲಿ ಉಳಿದ 25 ಶಾಸಕರ ಪೈಕಿ 13 ಮತಗಳನ್ನು ಸೆಳೆಯುವುದು ಸುಲಭ. ಎದುರಾಳಿ ಪಕ್ಷ ಬಿಜೆಪಿಗೆ ಮತ ಹಾಕಲು ಸಾಧ್ಯವಿಲ್ಲ. ಅನಿವಾರ್ಯತೆಗೆ ಬಿದ್ದು ಮತ ಬೀಳಲಿವೆ. ಹೀಗಾಗಿ ಗೆಲುವು ಖಚಿತ ಎಂದು ನಿಲುವು ತಾಳಿದ್ದ ಜೆಡಿಎಸ್ ಕುಪೇಂದ್ರ ರೆಡ್ಡಿಯನ್ನು ರಾಜ್ಯಸಭೆ ಚುನಾವಣೆ ಕಣಕ್ಕೆ ಇಳಿಸಿತು. ಕುಪೇಂದ್ರ ರೆಡ್ಡಿ ಕೂಡ ಕಾಂಗ್ರೆಸ್ ನ ರಾಜ್ಯ ಅಧಿನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಜೆಡಿಎಸ್ ನಡೆ ಹಾಗೂ ಕುಪೇಂದ್ರರೆಡ್ಡಿಯ ಭೇಟಿಯ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಮತ್ತು ಬಿಜೆಪಿಗೆ ಟಕ್ಕರ್ ಕೊಟ್ಟು ತನ್ನ ಎರಡನೇ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ನಾಯಕ ಮನ್ಸೂರ್ ಆಲಿ ಖಾನ್ ಕಣಕ್ಕೆ ಇಳಿದಿದ್ದೇ ಇದೀಗ ಕಾಂಗ್ರೆಸ್ ನ 25 ಶಾಸಕರ ಮತಗಳ ಜತೆಗೆ ಉಳಿದ 20 ಶಾಸಕರ ಮತಗಳನ್ನು ಸೆಳೆಯಲು ತಂತ್ರ ರೂಪಿಸಲಾಗಿದೆ. ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟಿರುವ ಶಾಸಕರ ಮತ ಸೆಳೆಯಲು ಕಾಂಗ್ರೆಸ್ ಸಿದ್ದು ಟೀಮ್ ಕಾರ್ಯಾಚರಣೆಗೆ ಇಳಿದಿದೆ. ಕಾಂಗ್ರೆಸ್ ನ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಿದ್ದು ಗಾಳಕ್ಕೆ ಸಿಕ್ಕಿಬಿದ್ದರಾ ಜೆಡಿಎಸ್ ಶಾಸಕರು!
ಬಿಜೆಪಿಯ ಲೆಹರ್ ಸಿಂಗ್, ಕಾಂಗ್ರೆಸ್ ನ ಮನ್ಸೂರ್ ಆಲಿಖಾನ್, ಜೆಡಿಸ್ ನ ಕುಪೇಂದ್ರ ರೆಡ್ಡಿ ಅವರಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬುದು ಭಾರಿ ಕುತೂಹಲ ಕೆರಳಿಸಿದೆ. ಬಿಜೆಪಿ ಸೇರುವ ಆಸೆ ಹೊತ್ತ ಶಾಸಕರ ಮತಗಳನ್ನು ತನ್ನ ಮೂರನೇ ಅಭ್ಯರ್ಥಿಗೆ ಹಾಕಿಸುವ ಕಾರ್ಯದಲ್ಲಿ ಬಿಜೆಪಿ ನಾಯಕರು ಒಳಗೊಳಗೆ ಮತಬೇಟೆಯಲ್ಲಿ ತೊಡಗಿದ್ದಾರೆ. ಇನ್ನು ಕಾಂಗ್ರೆಸ್ ಎರಡನೇ ಅಭ್ಯರ್ಥಿ ಗೆಲುವಿಗಾಗಿ ಸಿದ್ದರಾಮಯ್ಯ ಮತ್ತು ಜಮೀರ್ ಟೀಮ್ ಜೆಡಿಎಸ್ ನ ಶಾಸಕರಿಗೆ ಗಾಳ ಹಾಕಿದೆ. ಜನತಾದಳ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ನಾಯಕತ್ವದ ಮೇಲೆ ಒಲವು ಇರುವ ಜೆಡಿಎಸ್ ನ ಹಲವು ಶಾಸಕರು ಸಿದ್ದು ಹೇಳಿದಂತೆ ಕ್ರಾಸ್ ವೋಟಿಂಗ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ರಾಜ್ಯಸಭೆಯ ನಾಲ್ಕನೇ ಸೀಟಿನ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಶಾಸಕರಿಗೆ ಗಾಳ ಹಾಕಿ ಕೂತಿವೆ. ಅಂತಿಮವಾಗಿ ಯಾರಿಗೆ ಜಯ ಸಿಗಲಿದೆ ಎಂಬುದು ಕಾದು ನೋಡಬೇಕು.
Recommended Video












Click it and Unblock the Notifications