ರಾಜ್ಯದಲ್ಲಿ ಹೆಚ್ಚಿದ ಮಳೆ ಪ್ರಮಾಣ: ಜಲಾಶಯಗಳ ಒಳಹರಿವು ಮಾತ್ರ ಕ್ಷೀಣ- ಅಂಕಿಅಂಶ, ಮಾಹಿತಿ, ವಿವರ
ಬೆಂಗಳೂರು, ಜುಲೈ 10: ಜುಲೈ 1 ರಿಂದ ರಾಜ್ಯದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಇದು ಮುಂದಿನ ವಾರದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದ್ದು, ರಾಜ್ಯದ ಇತರ ಭಾಗಗಳಲ್ಲಿ ಸಾಧಾರಣ ತುಂತುರು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಹುತೇಕ ಜಲಾನಯನ ಪ್ರದೇಶಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಿರುವುದರಿಂದ ರಾಜ್ಯ ಇನ್ನೂ ಬರಗಾಲದ ಭೀತಿಯಿಂದ ಹೊರಬಂದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷ ಮುಂಗಾರು ತಡವಾಗಿ ಪ್ರಾರಂಭವಾಗಿದೆ. ಸಾಮಾನ್ಯ ಮಳೆಯನ್ನು ಪಡೆದ ರಾಜ್ಯದ ಏಳು ಜಿಲ್ಲೆಗಳಲ್ಲಿ ಬೆಂಗಳೂರು ನಗರವೂ ಸೇರಿದೆ.

ರಾಜ್ಯದ 31 ಜಿಲ್ಲೆಗಳ ಪೈಕಿ 22 ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.20-59ರಷ್ಟು ಕಡಿಮೆ ಮಳೆಯಾಗಿದೆ. ಅವುಗಳಲ್ಲಿ ಪ್ರಮುಖವಾದ ಜಲಾನಯನ ಜಿಲ್ಲೆಗಳಾದ ಶಿವಮೊಗ್ಗ ( ಸಾಮಾನ್ಯಕ್ಕಿಂತ ಶೇ 52 ಕಡಿಮೆ ), ಚಿಕ್ಕಮಗಳೂರು ( ಸಾಮಾನ್ಯಕ್ಕಿಂತ ಶೇ 54 ಕಡಿಮೆ ), ಹಾಸನ ( ಸಾಮಾನ್ಯಕ್ಕಿಂತ ಶೇ 52 ಕಡಿಮೆ) ಮತ್ತು ಕೊಡಗಿನಲ್ಲಿ ( ಸಾಮಾನ್ಯಕ್ಕಿಂತ ಕಡಿಮೆ ಶೇ 57 ) ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಇಲಾಕೆ ನೀಡಿರುವ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ರಾಜ್ಯದ ಜಲಾಶಯಗಳು ಇನ್ನೂ ಗಮನಾರ್ಹ ಒಳಹರಿವನ್ನು ಪಡೆಯಬೇಕಾಗಿದೆ. ಮುಂದಿನ ವಾರದಲ್ಲಿ ಮಾನ್ಸೂನ್ ಪರಿಸ್ಥಿತಿಗಳು ರಾಜ್ಯದಲ್ಲಿ ಸಕ್ರಿಯವಾಗಿರುತ್ತವೆ ಎಂದು ಮುನ್ಸೂಚನೆಗಳು ಸೂಚಿಸುತ್ತವೆ. ಇದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ಸುಧಾರಿಸಬಹುದು ಎಂದು ಹೇಳಿದೆ.

ಜೂನ್‌ನಲ್ಲಿ ಕಡಿಮೆ ಮಳೆಯಾಗಿದೆ. ಕಳೆದ ವಾರದಲ್ಲಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಜುಲೈ 1 ರಿಂದ 8 ರ ವರೆಗೆ ಕರಾವಳಿ ಕರ್ನಾಟಕದಲ್ಲಿ ಶೇ 68 ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ 35 ಅಧಿಕ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 23 ಪ್ರತಿಶತ ಮಳೆಯಾಗಿದೆ.
ಈ ಅವಧಿಯಲ್ಲಿ, ಕರ್ನಾಟಕವು ಒಟ್ಟಾರೆಯಾಗಿ 34 ಪ್ರತಿಶತ ಅಧಿಕ ಮಳೆಯನ್ನು ಪಡೆದಿದೆ. ಈ ಕಾರಣದಿಂದಾಗಿ, ಜೂನ್‌ನಲ್ಲಿ ಶೇ 56ರಷ್ಟು ಮಳೆ ಕೊರತೆ ದಾಖಲಾಗಿದೆ. ಈ ವಾರ ಸ್ವಲ್ಪ ಸುಧಾರಣೆ ಕಂಡಿದೆ. ಜುಲೈ 8 ರ ಹೊತ್ತಿಗೆ, ಕೊರತೆಯು ಶೇಕಡಾ 34 ರಷ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟವು ಈ ಅವಧಿಯಲ್ಲಿ ಕಳೆದ ವರ್ಷ ದಾಖಲಾದ ಮಟ್ಟಕ್ಕೆ ಸಮೀಪದಲ್ಲಿಲ್ಲದಿದ್ದರೂ ಸಹ ಅಲ್ಪ ಸುಧಾರಣೆಯನ್ನು ಕಂಡಿದೆ. ಜುಲೈ 8 ರ ವರೆಗೆ ಕೆಆರ್‌ಎಸ್‌ಗೆ ಒಳಹರಿವು 13,449 ಕ್ಯೂಸೆಕ್ಸ್ ಇದೆ. 49.45 ಟಿಎಂಸಿ ಗಾತ್ರದ ಅಣೆಕಟ್ಟಿನಲ್ಲಿ 11.69 ಟಿಎಂಸಿ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನಾಂಕದಂದು 42.34 ಟಿಎಂಸಿ ಸಂಗ್ರಹವಿತ್ತು.
ಮಧ್ಯ, ಉತ್ತರ ಕರ್ನಾಟಕದಲ್ಲಿರುವ ತುಂಗಭದ್ರಾ ಮತ್ತು ಆಲಮಟ್ಟಿಯಂತಹ ಪ್ರಮುಖ ಅಣೆಕಟ್ಟುಗಳಿಗೆ ಒಳಹರಿವು ಇನ್ನೂ ಹೆಚ್ಚಾಗಬೇಕಿದೆ.
ಏತನ್ಮಧ್ಯೆ, ಬರ ಎದುರಿಸಲು ಮೋಡ ಬಿತ್ತನೆಯ ಸಾಧ್ಯತೆಗಳ ಕುರಿತು ಶನಿವಾರ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅದರ ಬಗ್ಗೆ ಇನ್ನೂ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದರು.












Click it and Unblock the Notifications