ಕನ್ನಡಿಗರಿಗೆ ಕುಡಿಯಲೂ ನೀರಿಲ್ಲ, ಕಾವೇರಿ ಕೊಳ್ಳದಲ್ಲಿ ಭೀಕರ ಬರ?
ಕಾವೇರಿ ನೀರಿನ ವಿವಾದ ತಮಿಳುನಾಡು ಮತ್ತು ಕರ್ನಾಟಕ ಸಂಬಂಧ ಹಾಳು ಮಾಡುವ ಜೊತೆ ಪ್ರತಿಭಟನೆ ಕಿಚ್ಚನ್ನೂ ಹೊತ್ತಿಸಿತ್ತು. ಇದೇ ವೇಳೆ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು ಪ್ರತಿಭಟನೆ ಮತ್ತೆ ಭುಗಿಲೇಳುವ ಸೂಚನೆ ಸಿಗುತ್ತಿದೆ. ಅದರಲ್ಲೂ ಕಾವೇರಿಯ ಮಡಿಲಿನಲ್ಲಿ ಈ ಬಾರಿ ಬೇಸಿಗೆ ಭಾರಿ ಸಂಕಷ್ಟದಿಂದ ಕೂಡಿರಲಿದ್ದು, ಕನ್ನಡಿಗರಿಗೆ ನೀರಿನ ಹಾಹಾಕಾರ ಎದುರಾಗುವ ಭಯ ಕೂಡ ಆವರಿಸಿದೆ.
ಕಾವೇರಿ ನದಿ ನೀರಿನ ವಿಚಾರಕ್ಕೆ ಕನ್ನಡಿಗರು ರೊಚ್ಚಿಗೆದ್ದು ಆಕ್ರೋಶ ಹೊರಹಾಕುತ್ತಿದ್ದಾರೆ. ಇದೆ ಕೋಪಕ್ಕೆ ಕರ್ನಾಟಕವೇ ಬಂದ್ ಆಗಿತ್ತು. ಆದರೆ ಈ ಸಂದರ್ಭದಲ್ಲಿ ಕಾವೇರಿ ಕೊಳ್ಳದಲ್ಲಿ ಹೊಸ ಆತಂಕ ಎದುರಾಗಿದೆ. ಹಾಗೆಯೇ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ ಖಾಲಿಯಾಗಿ, ಭೀಕರ ಬರದ ಮುನ್ಸೂಚನೆ ನೀಡುತ್ತಿವೆ. ಕಾವೇರಿ ನದಿ ಮಾತ್ರವಲ್ಲದೆ ಅದರ ಉಪನದಿಗಳ ನೀರಿನ ಮಟ್ಟ ಕೂಡ ಆತಂಕ ಹುಟ್ಟುಹಾಕಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆಗೆ ಕುಡಿಯುವ ನೀರು ಕೂಡ ಸಿಗುವುದಿಲ್ಲ ಎನ್ನಲಾಗುತ್ತಿದೆ. ಹಾಗಾದರೆ ಇದೀಗ ಕಾವೇರಿ ನದಿ ಕೊಳ್ಳದಲ್ಲಿ ನೀರಿನ ಮಟ್ಟ ಎಷ್ಟಿದೆ? ಬನ್ನಿ ತಿಳಿಯೋಣ.

ಕೆಆರ್‌ಎಸ್ ಡ್ಯಾಂ ಖಾಲಿ ಆಗುತ್ತಿದೆ!
ಹೌದು ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟು ಭೀಕರ ಬರದ ಛಾಯೆ ಆವರಿಸಿದೆ. ಆದರೆ ಇದೇ ಸಮಯದಲ್ಲಿ ಹಿಂಗಾರು ಮಳೆ ಕೂಡ ಕೈಕೊಟ್ಟ ಪರಿಣಾಮ, ಸಾಕಷ್ಟು ಸಮಸ್ಯೆ ಇದೀಗ ಎದುರಾಗಿದೆ. ಕಾವೇರಿ ನೀರಿಗೆ ನೆರೆ ರಾಜ್ಯ ತಮಿಳುನಾಡು ಕಿರಿಕ್ ತೆಗೆದು ಜಗಳಕ್ಕೂ ನಿಂತಿರುವ ಸಮಯದಲ್ಲೇ, ಬೇಸಿಗೆ ಕೂಡ ಎದುರಾಗಿದೆ. ಹೀಗಾಗಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ ಕಾಣುತ್ತಿದೆ. ಒಟ್ಟು 49.45 ಟಿಎಂಸಿ ನೀರಿನ ಸಾಮರ್ಥ್ಯವನ್ನ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಇದೀಗ ಕೇವಲ 17 ಟಿಎಂಸಿ ನೀರು ಉಳಿದಿದೆ. ಹೀಗಾಗಿ ಬೇಸಿಗೆ ಸಮಯಕ್ಕೆ ಕುಡಿಯುವ ನೀರಿಗೂ ತಾತ್ವರ ಎದುರಾಗುವ ಭಯ ಕಾಡುತ್ತಿದೆ.
ಹೇಮಾವತಿ ಡ್ಯಾಂಗೂ ಕಂಟಕ?
ಬೆಂಗಳೂರು ನಗರ ಸೇರಿ ಮೈಸೂರು, ಮಂಡ್ಯ ಅವಲಂಬಿಸಿರುವುದೇ ಕಾವೇರಿ ನೀರನ್ನು. ಆದರೆ ಈ ಬಾರಿ ಮಳೆ ಕೊರತೆ ಉಂಟಾಗಿ ಕನಿಷ್ಠ ಕುಡಿಯುವುದಕ್ಕೂ ನೀರು ಇಲ್ಲ ಎನ್ನುವ ಸ್ಥಿತಿ ಇದೀಗ ನಿರ್ಮಾಣ ಆಗಿದೆ. ಮಳೆ ಕೊರತೆ & ಭೀಕರ ಬರ ಹಿನ್ನೆಲೆ ಕನ್ನಡಿಗರು ನರಳಾಡಿ ಹೋಗಿದ್ದಾರೆ. ಇದು ಬೆಳೆದ ಬೆಳೆಗೆ ಮಾತ್ರವಲ್ಲ ಕುಡಿಯುವ ನೀರಿಗೂ ಅನ್ವಯಿಸಿದೆ. ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 91.84 ಅಡಿಗೆ ಕುಸಿತ ಕಂಡಿದ್ರೆ ಕಬಿನಿ ಡ್ಯಾಂ ನೀರಿನ ಮಟ್ಟ 2,272 ಅಡಿ ತಲುಪಿದೆ. ಹಾಗೇ ಹೇಮಾವತಿ ಜಲಾಶಯದಲ್ಲಿ ಕೇವಲ 2,891 ಅಡಿ ನೀರು ಉಳಿದಿದ್ದು, ಈ ಮೂಲಕ ಬೇಸಿಗೆ ವೇಳೆಗೆ ಭಾರಿ ನೀರಿನ ಕೊರತೆ ಎದುರಾಗುವ ಭಯ ಕಾಡುತ್ತಿದೆ.
ಒಟ್ನಲ್ಲಿ ಭೀಕರ ಬರ ಹಾಗೂ ಪ್ರಕೃತಿ ಮಾತೆಯ ಮುನಿಸು ಇದೀಗ ಕನ್ನಡಿಗರಿಗೆ ತುಂಬಾನೆ ಸಮಸ್ಯೆಗಳನ್ನ ತಂದೊಡ್ಡಿದೆ. ಅದರಲ್ಲೂ ಇಷ್ಟೊಂದು ನೀರಿನ ಕೊರತೆ ಎದುರಾಗಿರುವುದು ರೈತರಲ್ಲಿ ಆತಂಕ ತಂದೊಡ್ಡಿದೆ. ಈಗಾಗಲೇ ಬಹುತೇಕ ಪ್ರದೇಶದಲ್ಲಿ ಮಳೆ ಆಗಿಲ್ಲ ಅಂತಾ ರೈತರು ಬಿತ್ತನೆ ಮಾಡಿರಲಿಲ್ಲ. ಆದರೆ ಅಲ್ಪಸ್ವಲ್ಪ ಮಳೆಯ ನಂತರ ಬಿತ್ತನೆ ಮಾಡಿರುವ, ಕೋಟ್ಯಂತರ ರೈತರಿಗೆ ಈಗ ತಮ್ಮ ಬೆಳೆಯನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ.
ಹಳ್ಳಿಗಳಲ್ಲೂ ನೀರಿನ ಕೊರತೆ?
ಮತ್ತೊಂದು ಕಡೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿ, ಅಂದ್ರೆ ಹಳ್ಳಿಗಳಲ್ಲಿ ನೀರಿಗೆ ಕೊರತೆ ಎದುರಾದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಈ ಕುರಿತು ಅಲರ್ಟ್ ಆಗಿದೆ. ಹಾಗೇ ನೀರಿನ ಕೊರತೆ ಎದುರಾಗದ ರೀತಿ ಕ್ರಮ ವಹಿಸುತ್ತಿದೆ. ಇಷ್ಟೆಲ್ಲಾ ಪ್ರಯತ್ನದ ನಡುವೆ ಕೂಡ ಆತಂಕದ ವಾತಾವರಣ ಸೃಷ್ಟಿಯಾಗಿದೆ.












Click it and Unblock the Notifications