Rain News: ಇನ್ನೂ ಮೂರು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ
ರಾಜ್ಯದಲ್ಲಿ ಉತ್ತಮ ಮಳೆಯಾಗುವ ಲಕ್ಷಣ ಕಾಣಿಸುತ್ತಿದ್ದು, ಭಾನುವಾರ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಮುಂಗಾರು ಕೈಕೊಟ್ಟ ಕಾರಣ ಬರ ಪರಿಸ್ಥಿತಿ ಇರುವ ರಾಜ್ಯದಲ್ಲಿ ಈ ಅಕ್ಟೋಬರ್ ತಿಂಗಳಿನಲ್ಲಿಯಾದರೂ ಉತ್ತಮ ಮಳೆಯಾದರೆ ಸಾಕು ಎನ್ನುವ ಪರಿಸ್ಥಿತಿ ಬಂದಿದೆ.
ಭಾನುವಾರ ಬೆಂಗಳೂರು, ಹಾಸನ, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಇನ್ನೂ ಮೂರು ದಿನ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಿಲ್ಲಾವಾರು ಮಳೆ ವಿವರ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಯಾದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 99 ಮಿಮೀ ಮಳೆಯಾಗಿದೆ. ಹಾಸನ 96 ಮಿಮೀ, ಚಿಕ್ಕಮಗಳೂರು 89.5 ಮಿಮೀ, ತುಮಕೂರು 87.5 ಮಿಮೀ, ಬೆಂಗಳೂರು ಗ್ರಾಮಾಂತರ 83.5 ಮಿ.ಮೀ, ಮಂಡ್ಯ 80 ಮಿ.ಮೀ, ದಕ್ಷಿಣ ಕನ್ನಡ 72.5 ಮಿ.ಮೀ, ಕೊಡಗು 71 ಮಿ.ಮೀ, ಚಿಕ್ಕಬಳ್ಳಾಪುರ 70.5 ಮಿ.ಮೀ, ಕೋಲಾರ 69.5 ಮಿ.ಮೀ, ಮೈಸೂರು 57.5 ಮಿ.ಮೀ, ಉಡುಪಿ 49.5 ಮಿ.ಮೀ, ರಾಮನಗರ 48.5 ಮಿ.ಮೀ, ಚಾಮರಾಜನಗರ ಜಿಲ್ಲೆಯಲ್ಲಿ 44 ಮಿ.ಮೀ ಮಳೆಯಾಗಿದೆ.
ಹೆಚ್ಚು ಮಳೆಯಾದ ಪ್ರದೇಶಗಳು
24 ಗಂಟೆಗಳಲ್ಲಿ ಬೆಂಗಳೂರಿನ ಹೊರಮಾವು ಪ್ರದೇಶದಲ್ಲಿ 99 ಮಿಮೀ ಮಳೆಯಾಗಿದ್ದು ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ. ಹಾಸನ ಜಿಲ್ಲೆಯ ಕೆಂಬಾಳು 96 ಮಿಮೀ ಮಳೆಯಾಗಿದೆ. ಬೆಂಗಳೂರು ನಗರದ ಮಂಡೂರು 95 ಮಿಮೀ, ಕಲ್ಲುಬಾಳು 92.5 ಮಿಮೀ, ಮಂಟಪ 91 ಮಿಮೀ ಮಳೆಯಾಗಿದೆ.
ಚಿಕ್ಕಮಗಳೂರಿನ ಸಿಂಧಿಗೆರೆ 89.5 ಮಿಮೀ, ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಲಿಕಾರು 72.5 ಮಿಮೀ, ಹಾಸನ ಜಿಲ್ಲೆಯ ಉಂಡಿಗನಹಾಳು 73 ಮಿಮೀ, ಹೆಬ್ಬಾಳು 72 ಮಿಮೀ, ಬಾಗೆ 71 ಮಿಮೀ ಮಳೆಯಾಗಿದೆ. ಕೊಡಗು ಜಿಲ್ಲೆಯ ಚೌಡ್ಲುವಿನಲ್ಲಿ 71 ಮಿಮೀ, ಸೋಮವಾರ ಪೇಟೆ 63 ಮಿಮೀ, ದಕ್ಷಿಣ ಕನ್ನಡ ಜಿಲ್ಲೆಯ ಅರಸಿನಮಕ್ಕಿ 70 ಮಿಮೀ, ಕೊಂಬಾರು 68 ಮಿಮೀ, ಉಡುಪಿ ಜಿಲ್ಲೆಯ ಮಡಾಮಕ್ಕಿ 49.5 ಮಿಮೀ, ಕಡೂರಿನಲ್ಲಿ 46 ಮಿಮೀ ಮಳೆಯಾಗಿದೆ.
ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗಗ್ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹೀಗೆ ಮಳೆ ಮುಂದುವರೆದರೆ ಜಲಾಶಯಗಳಿಗೆ ಒಳಹರಿವು ಹೆಚ್ಚಲಿದೆ.
ಭಾನುವಾರ ರಾತ್ರಿ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾದ ಕಾರಣ ರಸ್ತೆಗಳು ಜಲಾವೃತವಾಗಿವೆ, ಹಲವು ಕಡೆಗಳಲ್ಲಿ ಮರಗಳು ಬಿದ್ದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿದೆ. ಸೋಮವಾರ ಬೆಳಗ್ಗೆ ಕೂಡ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆಯಾಗುತ್ತಿದೆ.












Click it and Unblock the Notifications