Rain deficit in Karnataka: ಆಗಸ್ಟ್ ತಿಂಗಳು ಶೇ 70 ಕ್ಕಿಂತ ಹೆಚ್ಚು ಮಳೆ ಕೊರತೆ- ಬಿತ್ತನೆ ಕಾರ್ಯ ಸ್ಥಗಿತ, ವರದಿ, ವಿವರ
ಬೆಂಗಳೂರು, ಆಗಸ್ಟ್ 17: ರಾಜ್ಯದಲ್ಲಿ ಆಗಸ್ಟ್ ತಿಂಗಳು ಅಲ್ಪ ಪ್ರಮಾಣದ ಮಳೆಯಾಗಿದೆ. ಈ ತಿಂಗಳ ಕೊನೆಯ ವಾರದವರೆಗೂ ಮಳೆಯಾಗುವ ಮುನ್ಸೂಚನೆ ಇಲ್ಲವೆಂದು ಹವಾಮಾನ ಇಲಾಖೆ ಹೇಳಿದೆ. ಇದು ರಾಜ್ಯದ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲ ಲಕ್ಷಣಗಳಿವೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಜುಲೈನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಇದು ರೈತರಲ್ಲಿ ಉತ್ಸಾಹ ಮೂಡಿಸಿತ್ತು. ಆದರೆ, ಈ ತಿಂಗಳು ಮಳೆಯ ಕೊರತೆಯ ಪ್ರಮಾಣ ಶೇ 70 ಕ್ಕಿಂತ ಹೆಚ್ಚಿದೆ. ಕಳೆದ 10 ವರ್ಷಗಳಲ್ಲಿ ಆಗಸ್ಟ್ ತಿಂಗಳು ಇಷ್ಟೊಂದು ಕಡಿಮೆ ಮಳೆಯಾಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜೂನ್ 1 ರಿಂದ ಆಗಸ್ಟ್ 15 ರ ವರೆಗೆ ಶೇ 2ರಷ್ಟು ಮಳೆ ಕೊರತೆಯಾಗಿದೆ. ಇದರ ಪರಿಣಾಮವಾಗಿ ಹಲವಾರು ಕೃಷಿ ಮತ್ತು ವಾಣಿಜ್ಯ ಕಾರ್ಯಗಳು ಸ್ಥಗಿತಗೊಳ್ಳುವ ಅಪಾಯವನ್ನು ತಂದೊಡ್ಡಿದೆ.
ಈ ವಿಚಾರದಲ್ಲಿ ರಾಜ್ಯ ಸರಕಾರ ಮಧ್ಯಪ್ರವೇಶಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
'ಕರ್ನಾಟಕದಾದ್ಯಂತ ಸರಕಾರ ಕೂಡಲೇ ಬರ ಘೋಷಣೆ ಮಾಡಿ ಬೆಳೆನಷ್ಟ ಸಮೀಕ್ಷೆ ನಡೆಸಬೇಕು. ಬದಲಾಗುತ್ತಿರುವ ಹವಾಮಾನದಿಂದ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಮಳೆಯ ಕೊರತೆಯಿಂದಾಗಿ, ಸುಮಾರು ಅರ್ಧದಷ್ಟು ರೈತರು ಇನ್ನೂ ತಮ್ಮ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿಲ್ಲ. ಇದು ಈಗ ಅವರ ಜೀವನೋಪಾಯವನ್ನು ಗಂಭೀರ ಅನಿಶ್ಚಿತತೆಗೆ ತಳ್ಳಿದೆ' ಎಂದು ಅವರು ಹೇಳಿದ್ದಾರೆ.

ಕೆಎಸ್‌ಎನ್‌ಡಿಎಂಸಿಯ ಹಿರಿಯ ಸಲಹೆಗಾರ ಮತ್ತು ಮಾಜಿ ನಿರ್ದೇಶಕ ಜಿ ಶ್ರೀನಿವಾಸ ರೆಡ್ಡಿ ಅವರು ಈ ಕುರಿತು 'ಟೈಮ್ಸ್ ಆಫ್ ಇಂಡಿಯಾ'ಗೆ ಮಾತನಾಡಿದ್ದಾರೆ. ಜುಲೈ ಕೊನೆಯ ವಾರದಲ್ಲಿ ಐಎಂಡಿ ಮುನ್ಸೂಚನೆಯ ಪ್ರಕಾರ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮುಂಗಾರು ಸರಾಸರಿಗಿಂತ ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ.
ಇದು ಈಶಾನ್ಯ ಮುಂಗಾರು ಮಳೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಜಲಾಶಯಗಳು ಬತ್ತಿ ಹೋಗುತ್ತಿರುವುದರಿಂದ ಇಂಧನ ಬಳಕೆ, ವಿಶೇಷವಾಗಿ ಕೃಷಿ ವಲಯದ ಬಳಕೆ ಹೆಚ್ಚಾಗಿದೆ. ಉದಾಹರಣೆಗೆ, ಮಂಗಳವಾರ ರಾಜ್ಯದ ವಿದ್ಯುತ್ ಬಳಕೆಯಲ್ಲಿ ಶೇ 64ರಷ್ಟು ಏರಿಕೆ ಕಂಡಿದೆ.

'ರಾಜ್ಯದ ಒಟ್ಟಾರೆ ಇಂಧನ ಬೇಡಿಕೆ 15,000 ಮೆಗಾವಾಟ್ ಆಗಿತ್ತು. ಕರ್ನಾಟಕದಲ್ಲಿ ಆಗಸ್ಟ್ 15, 2022 ರಂದು 157 ಮಿಲಿಯನ್ ಯುನಿಟ್ ಬಳಕೆಯಾಗಿದ್ದರೆ, ಆಗಸ್ಟ್ 15, 2023 ರಂದು 257 ಮಿಲಿಯನ್ ಯುನಿಟ್ ಬಳಕೆಯಾಗಿದೆ' ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಮರಾಜನಗರ ಹೊರತುಪಡಿಸಿ ಉಳಿದ 30 ಜಿಲ್ಲೆಗಳು ಈ ತಿಂಗಳು ತೀವ್ರ ಮಳೆಯ ಕೊರತೆಯಿಂದ ತತ್ತರಿಸುತ್ತಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಮಳೆ ಕೊರತೆ ಏಕರೀತಿಯಲ್ಲಿದೆ. ಕಾವೇರಿ ಮತ್ತು ಕೃಷ್ಣಾ ನದಿ ಜಲಾನಯನ ಪ್ರದೇಶಗಳ ಪ್ರಮುಖ ಜಲಾಶಯಗಳಲ್ಲಿ ನೀರಿನ ಕೊರತೆಯಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, 'ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳು 2022 ರಲ್ಲಿ ( ಈ ಸಮಯದಲ್ಲಿ ) ಶೇ 75 ರಷ್ಟು ತುಂಬಿದ್ದವು. ಆದರೆ ಈ ವರ್ಷ, ಅವೆಲ್ಲವೂ ಶೇ 50 ಕ್ಕಿಂತ ಕಡಿಮೆ ತುಂಬಿವೆ' ಎಂದು ಮಾಹಿತಿ ನೀಡಿದ್ದಾರೆ.
ಮಲೆನಾಡು ಜಿಲ್ಲೆಗಳು ಆಗಸ್ಟ್ ತಿಂಗಳು ಶೇ 81 ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications