ನಿಲ್ದಾಣದಲ್ಲಿ ರೈಲು ಇಳಿಯುವಾಗ ಬಿದ್ದರೆ ರೈಲ್ವೆಯೇ ಹೊಣೆ: ಹೈಕೋರ್ಟ್

ಬೆಂಗಳೂರು, ಏಪ್ರಿಲ್ 30: ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಡುವ ಪ್ರಯಾಣಿಕರ ಕುಟುಂಬಕ್ಕೆ ಪರಿಹಾರ ನೀಡುವ ಹೊಣೆ ರೈಲ್ವೆ ಇಲಾಖೆಯದ್ದೇ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ವಾರ್ಷಿಕ ಶೇ.7 ಬಡ್ಡಿಯೊಂದಿಗೆ 4 ಲಕ್ಷ ರೂ. ಪರಿಹಾರ ಪಾವತಿಸುವಂತೆ ರೈಲ್ವೆ ಇಲಾಖೆಗೆ ಆದೇಶ ಹೊರಡಿಸಿದೆ. ಇದರಿಂದಾಗಿ ನ್ಯಾಯಾಲಯದ ಮೊರೆ ಹೋಗಿದ್ದವರಿಗೆ ಸ್ವಲ್ಪ ಮಟ್ಟಿಗೆ ನ್ಯಾಯ ದೊರಕಿದಂತಾಗಿದೆ.

Railway Responsible If Passenger Fell Down During Getting Down At Railway Station

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ರೋಜಮಣಿ ಹಾಗೂ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್. ಪಿ. ಸಂದೇಶ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ತೀರ್ಪು ನೀಡಿದೆ.

ಮೃತ ಜಯಮ್ಮ ಸಾವಿಗೆ ರೈಲ್ವೆಯಿಂದ 8 ಲಕ್ಷ ರೂ. ಪರಿಹಾರ ಕೋರಿದ್ದರು. ಆದೇಶದಲ್ಲಿ ಪೀಠವು ಪತ್ರಿವಾದಿಗಳು 4 ಲಕ್ಷ ರೂ.ಗಳನ್ನು ವಾರ್ಷಿಕ ಶೇ.7 ಬಡ್ಡಿಯೊಂದಿಗೆ ಪಾವತಿಸುವಂತೆ ಹೇಳಿದೆ. ಈ ಒಟ್ಟು ಮೊತ್ತ 8 ಲಕ್ಷ ರೂ. ತಲುಪದೆ ಹೋದಲ್ಲಿ ಪ್ರತಿವಾದಿಗಳು ಅರ್ಜಿದಾರರ ಮನವಿಯಂತೆ 8 ಲಕ್ಷ ರೂ. ಪಾವತಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ರೈಲು ಇಳಿಯುವಾಗ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಜಯಮ್ಮ ಎಂಬುವರ ಸಾವಿಗೆ ಪರಿಹಾರ ಕಲ್ಪಿಸುವ ಸಂಬಂಧ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ತೀರ್ಪನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಅರ್ಜಿದಾರ ಪರ ವಕೀಲರು, ಮೃತ ಜಯಮ್ಮ ತನ್ನ ಸಹೋದರಿಯೊಂದಿಗೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಇದು ಗೊತ್ತಾಗಿ ಆಕೆ ಕೆಳಗಿಳಿಯುವ ವೇಳೆ ರೈಲು ಚಲಿಸಲು ಆರಂಭಿಸಿತ್ತು. ಆಗ ನಿಯಂತ್ರಣ ಕಳೆದುಕೊಂಡು ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನು ಪರಿಗಣಿಸಿ ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ನಿರ್ದೇಶಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಆದರೆ, ಈ ಘಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ, ಉದ್ದೇಶಪೂರ್ವಕ ಎಂದು ರೈಲ್ವೆ ಇಲಾಖೆ ಹೇಳಿದರೂ ಅದಕ್ಕೆ ಸಾಕ್ಷ್ಯಾಧಾರ ಒದಗಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ಆದೇಶವನ್ನು ತಳ್ಳಿಹಾಕುವಂತೆ ಅರ್ಜಿದಾರರು ವಾದಿಸಿದ್ದರು.

ಮೃತ ಮಹಿಳೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಆಗ ಅವರು ಒಂದೋ ಪ್ರಯಾಣ ಮುಂದುವರಿಸಿ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲವೇ ಅಲಾರ್ಮ್ ಚೈನ್ ಎಳೆಯಬೇಕು. ಅದೆರಡನ್ನೂ ಮಾಡದೆ ರೈಲಿನಿಂದ ಇಳಿಯಲು ಪ್ರಯತ್ನಿಸಿ ಸ್ವಯಂಪ್ರೇರಿತ ಮತ್ತು ಉದ್ದೇಶಪೂರ್ವಕವಾಗಿ ಜಿಗಿದಿದ್ದಾರೆ. ಹೀಗಾಗಿ ಘಟನೆ ಆಕಸ್ಮಿಕವಾಗಿ ಸಂಭವಿಸಿದೆ ಎನ್ನಲಾಗದು. ಆದ್ದರಿಂದ ರೈಲ್ವೆ ಕಾಯ್ದೆಯ ಸೆಕ್ಷನ್ 123(ಇ) ಅನ್ವಯ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಪ್ರತಿವಾದ ಮಂಡಿಸಿತ್ತು.

ಪ್ರಕರಣದ ಹಿನ್ನೆಲೆ: 2014ರ ಫೆ.22ರಂದು ಜಯಮ್ಮ ತನ್ನ ಸಹೋದರಿ ರತ್ನಮ್ಮ ಅವರೊಂದಿಗೆ ಚನ್ನಪಟ್ಟಣ ರೈಲು ನಿಲ್ದಾಣಕ್ಕೆ ಹೋಗಿ ಮೈಸೂರಿನ ಅಶೋಕಪುರಂಗೆ ಹೋಗಲು 'ತಿರುಪತಿ ಪ್ಯಾಸೆಂಜರ್' ರೈಲಿಗಾಗಿ ಕಾಯುತ್ತಿದ್ದರು. ಆಗ 'ಟುಟಿಕೋರಿನ್ ಎಕ್ಸ್‌ಪ್ರೆಸ್' ರೈಲು ಬಂತು. ಇಬ್ಬರೂ ಆ ರೈಲು ಹತ್ತಿದ್ದರು. ರೈಲು ಅಶೋಕಪುರಂಗೆ ಹೋಗುವುದಿಲ್ಲ ಎಂದು ತಿಳಿದ ನಂತರ ರೈಲಿನಿಂದ ಜಯಮ್ಮ ಇಳಿಯುತ್ತಿದ್ದರು.

ಆ ವೇಳೆ ರೈಲು ಚಲಿಸಲಾರಂಭಿಸಿತು, ಹಾಗಾಗಿ ಸಮತೋಲನ ತಪ್ಪಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾದರು. ಘಟನೆಗೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ನ್ಯಾಯಮಂಡಳಿ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೃತರ ಕುಟಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+