ನಕಲಿ ವೈದ್ಯರಿಗೆ ಆಯುಷ್ ಅಧಿಕಾರಿಗಳ ಚಿಕಿತ್ಸೆ!
ಬೆಂಗಳೂರು, ನ. 22 : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿದ್ದ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಶುಕ್ರವಾರ ಆಯುಷ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ತುಮಕೂರು, ಮೈಸೂರು, ರಾಯಚೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ವೈದ್ಯರಿಗೆ ಸೇರಿದ ನಕಲಿ ಪ್ರಮಾಣ ಪ್ರತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕುರುಬರ ಹಳ್ಳಿಯಲ್ಲಿ ಆಯುಷ್ ಇಲಾಖೆ ರಿಜಿಸ್ಟರ್ ಡಾ. ತಿಮ್ಮಪ್ಪ ಶೆಟ್ಟಗಾರ್ ನೇತೃತ್ವದಲ್ಲಿ ಶ್ರೀರಾಮ್ ಕನ್ಸಲ್ಟೇಷನ್ ಎಂಬ ಆಸ್ಪತ್ರೆ ಪರಿಶೀಲಿಸಿದ ಅಧಿಕಾರಿಗಳು ನಕಲಿ ವೈದ್ಯ ರಾಮ್ ಅವರನ್ನು ಬಂಧಿಸಿದ್ದಾರೆ. ಮಾನ್ಯತೆ ಇಲ್ಲದ ನವದೆಹಲಿ ಮೂಲದ ವಿಶ್ವವಿದ್ಯಾಲಯದಿಂದ ರಾಮ್ ಎಂಬಿಬಿಎಸ್ ಪದವಿ ಪಡೆದಿದ್ದಾರೆ ಎಂದು ದಾಳಿಯ ವೇಳೆ ತಿಳಿದು ಬಂದಿದೆ.

ಬಳ್ಳಾರಿಯ ಬಾಪೂಜಿನಗರದ ಸರೋಜ ಕ್ಲಿನಿಕ್ ನಲ್ಲಿ ನಕಲಿ ವೈದ್ಯ ಡಾ.ಜೆ.ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯದಿದ್ದರೂ ಇವರು ಎಂಬಿಬಿಎಸ್ ಪದವಿ ಪಡೆದಿರುವುದಾಗಿ ಫಲಕ ಹಾಕಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು, ದಾವಣಗೆರೆ, ಚಿತ್ರದುರ್ಗ ಮುಂತಾದೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದು, 20ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮುಂಬಾಡಿ ಗ್ರಾಮದಲ್ಲಿ ಚೆನ್ನಲಿಂಗೇಶ್ ಅವರ ಕ್ಲಿನಿಕ್ ಮೇಲೆಯೂ ದಾಳಿ ನಡೆಸಲಾಗಿದ್ದು, ಅವರನ್ನು ಬಂಧಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಪಿ.ಎಸ್.ರಾವ್ ಕ್ಲಿನಿಕ್ ಮೇಲೆ ದಾಳಿ ನಡೆಸಿ, ಅದಕ್ಕೆ ಬೀಗ ಹಾಕಲಾಗಿದೆ. ಶುಕ್ರವಾರದಿಂದ ರಾಜ್ಯಾದ್ಯಂತ ನಕಲಿ ವೈದ್ಯರ ಮೇಲೆ ದಾಳಿ ಆರಂಭಿಸಿದ್ದು, ಇದು ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಆಯುಷ್ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications