ರಾಯಚೂರು: ಬಿಸಾಡಿದ ಚುನಾವಣಾ ರ್‍ಯಾಲಿ ಆಹಾರ ತಿಂದು 20ಕ್ಕೂ ಹೆಚ್ಚು ಜಾನುವಾರುಗಳು ಸಾವು!
ಬೆಂಗಳೂರು ಮಾರ್ಚ್ 27: ಕಳೆದ ಹದಿನೈದು ದಿನಗಳಿಂದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ವಿಷ ಆಹಾರ ಸೇವಿಸಿ 20ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ.
ರಾಜಕೀಯ ರ್‍ಯಾಲಿಗಳಿಂದ ಉಳಿದ ಆಹಾರವನ್ನು ಸೇವಿಸಿದ ನಂತರ ಜಾನುವಾರಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಘಟನೆಗಳು ಇದೀಗ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ತ್ಯಾಜ್ಯ ವಿಲೇವಾರಿ ಮಾಡುವ ಅವೈಜ್ಞಾನಿಕ ಕ್ರಮದ ಬಗ್ಗೆ ಕಳವಳ ಮೂಡಿಸಿವೆ.

ಶುಕ್ರವಾರ (ಮಾರ್ಚ್ 24) ಆಯೋಜಿಸಿದ್ದ ರಾಜಕೀಯ ರ್‍ಯಾಲಿಯಲ್ಲಿ ಭಾಗವಹಿಸಿದವರಿಗೆ ಬಡಿಸಿದ ಅನ್ನವನ್ನು ತಿಂದು ಯಾದಗಿರಿಯ ಯರ್ಗೋಳ್ ಗ್ರಾಮದಲ್ಲಿ ಶನಿವಾರ 15 ಜಾನುವಾರುಗಳು ಸಾವನ್ನಪ್ಪಿವೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 30-35 ಜಾನುವಾರುಗಳು ಉಳಿದ ಅನ್ನವನ್ನು ತಿಂದಿದ್ದು, ಅವುಗಳಲ್ಲಿ ಯಾವುದೂ ಮನೆಗೆ ಹಿಂತಿರುಗಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಮರುದಿನ ಬೆಳಗ್ಗೆ ಜಾನುವಾರಗಳ ಹೊಟ್ಟೆ ಉಬ್ಬರಿಸಿಕೊಂಡು ಬಂದಿದ್ದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ಪಡೆದ ಬಳಿಕ ಪಶುವೈದ್ಯರು ಗ್ರಾಮಕ್ಕೆ ಧಾವಿಸಿದ್ದಾರೆ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ರಾಜು ದೇಶಮುಖ್ ತಿಳಿಸಿದರು. ಶನಿವಾರ ಬೆಳಗ್ಗೆ 8. 45ರ ಸುಮಾರಿಗೆ ತಂಡ ಅಲ್ಲಿಗೆ ಆಗಮಿಸಿತು. "ಹದಿನೈದು ಜಾನುವಾರುಗಳು ಈಗಾಗಲೇ ಸತ್ತಿವೆ" ಎಂದು ದೇಶಮುಖ್ ಹೇಳಿದರು.

"ಅವುಗಳ ಹೊಟ್ಟೆಯು ಉಬ್ಬಿತ್ತು. ಅವುಗಳ ಶವಪರೀಕ್ಷೆ ಬಳಿಕ ಜಾನುವಾರಗಳು ಆಹಾರ ವಿಷದಿಂದ ಸಾವನ್ನಪ್ಪಿವೆ ಎಂದು ದೃಢಪಡಿಸಲಾಗಿದೆ. ಪ್ರತಿ ಪ್ರಾಣಿಯು ಸುಮಾರು 5-6 ಕೆಜಿ ಅಕ್ಕಿಯನ್ನು ಸೇವಿಸಿದೆ. ಅದು ಹಾಳಾದ ಆಹಾರವಾಗಿತ್ತು ಎಂದು ತಿಳಿದು ಬಂದಿದೆ. ಇನ್ನೂ 20 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವು ಅಪಾಯದಿಂದ ಪಾರಾಗಿವೆ.
ವಿಜಯ ಸಂಕಲ್ಪ ಯಾತ್ರೆ
ರಾಯಚೂರಿನಲ್ಲಿ, ಗುಂಜಳ್ಳಿ ಗ್ರಾಮದಲ್ಲಿ ಮಾರ್ಚ್ 10 ರಂದು ರಾಜಕೀಯ ಸಭೆಯ ನಂತರ ಎಸೆದ ಆಹಾರವನ್ನು ತಿಂದು ಏಳು ಜಾನುವಾರುಗಳು ಸಾವನ್ನಪ್ಪಿವೆ. ಪೀಡಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ ತಂಡದ ನೇತೃತ್ವ ವಹಿಸಿದ್ದ ಎಲೆಬಿಚ್ಚಾಲಿ ಪಶುವೈದ್ಯಾಧಿಕಾರಿ ಡಾ.ಮಹಮ್ಮದ್ ಸೊಹೈಬ್ ಅವರು, ಜಾನುವಾರಗಳು ಆಹಾರ ವಿಷದಿಂದ ಸಾವನ್ನಪ್ಪಿವೆ ಎಂದು ಹೇಳಿದರು. "ಮಾರ್ಚ್ 10ರ ರಾತ್ರಿ ಪ್ರಾಣಿಗಳು ಅನ್ನವನ್ನು ತಿಂದಿವೆ. ಬಳಿಕ ಅವುಗಳ ಹೊಟ್ಟೆ ಉಬ್ಬಿದೆ. ಪ್ರತಿಕ್ರಿಯೆ ತುಂಬಾ ವೇಗವಾಗಿತ್ತು'' ಎಂದು ಸೊಹೈಬ್ ಹೇಳಿದರು.

ವಿಜಯ ಸಂಕಲ್ಪ ಯಾತ್ರೆಯಲ್ಲಿ ತ್ಯಾಜ್ಯ ಆಹಾರ ಸೇವಿಸಿ ಹಸುಗಳು ಬಲಿಯಾಗಿವೆ. ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಹೀಗಾಗಿ ಅವರಿಗೆಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭೋಜನ ಸವಿದ ಬಳಿಕ ಆಹಾರವನ್ನು ಒಂದೆಡೆ ರಾಶಿ ಹಾಕಲಾಗಿತ್ತು. ಆದ್ರೆ ಈ ರಾಶಿ ಹಾಕಿದ್ದ ಉಳಿದ ಆಹಾರ ತಿಂದು ಗುಂಜಳ್ಳಿ ಗ್ರಾಮದ ಬಹುತೇಕ ಹಸುಗಳು, ಎಮ್ಮೆಗಳು ಅಸ್ವಸ್ಥಗೊಂಡಿವೆ.
ವಿಧಾನಸಭಾ ಚುನಾವಣೆ
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ನಾಯಕರು ಮತದಾರರನ್ನು ಸೆಳೆಯಲು ಪಂಚತಂತ್ರ ಯಾತ್ರೆ, ಪ್ರಜಾಧ್ವನಿ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ.
ಕಳೆದ ತಿಂದಗಳು ಫೆಬ್ರವರಿಯಲ್ಲಿ ಶೃಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ನಡೆದ ಜೆಡಿಎಸ್‌ನ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಉಳಿದ ಆಹಾರವನ್ನು ಎಸೆದಿದ್ದರು. ಇದರಿಂದ ಪ್ಲಾಸ್ಟಿಕ್ ಸಮೇತ ಉಳಿದ ಆಹಾರ ತಿಂದು ಎರಡು ಹಸು ಸಾವನ್ನಪ್ಪಿತ್ತು. ಇಂತಹದ್ದೇ ಘಟನೆ ರಾಯಚೂರಿನಲ್ಲಿ ನಡೆದಿದ್ದು ಕಳವರಕಾರಿ ವಿಷಯವಾಗಿದೆ.












Click it and Unblock the Notifications