ರಾಹುಲ್ ಗಾಂಧಿಯವರು ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು: ವಿಜಯೇಂದ್ರ
ಗಲ್ವಾನ್ ಸಂಘರ್ಷಕ್ಕೆ ಸಂಬಂಧಿಸಿ ಸೈನಿಕರ ಬಗ್ಗೆ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರವಾಗಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಕೂಡಲೇ ರಾಹುಲ್ ಗಾಂಧಿಯವರು ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಾಲಿಶ ಹೇಳಿಕೆಗಳು, ಕಪೋಲ ಕಲ್ಪಿತ ಆರೋಪಗಳು ರಾಹುಲ್ ಗಾಂಧಿ ಅವರ ರಾಜಕೀಯ ಅರ್ಹತೆಯಾಗಿದೆ. ಸಾಂವಿಧಾನಿಕ ಮಾನ್ಯತೆ ಪಡೆದ ಲೋಕಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ನಿಂತು ಅಪ್ರಬುದ್ಧತೆಯ ಹೇಳಿಕೆಗಳನ್ನು ನೀಡುತ್ತಿರುವ ರಾಹುಲ್ ಗಾಂಧಿಯವರ ವರ್ತನೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಅವಮಾನಿಸುವಂತಿದೆ ಎಂದಿದ್ದಾರೆ.
ಭಾರತದ ನೆಲವನ್ನು ಚೀನಾ ಆಕ್ರಮಿಸಿದೆ ಎಂಬ ರಾಹುಲ್ ಗಾಂಧಿಯವರ ಆಧಾರ ರಹಿತ ಹೇಳಿಕೆಯನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ "ನೀವು ನಿಜವಾದ ಭಾರತೀಯರಾಗಿದ್ದರೆ ಇಂತಹ ಹೇಳಿಕೆ ನೀಡುತ್ತಿರಲಿಲಲ್ಲ" ಎಂದು ಛೀಮಾರಿ ಹಾಕಿದೆ. ಭಂಡತನ, ವಿತಂಡವಾದಕ್ಕೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಸದ್ಯ ದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಪಾರದರ್ಶಕ ಕಾರ್ಯಕ್ಷಮತೆಯನ್ನು ಅಪಮಾನಿಸಿ, ಬೀದಿ ಚಳುವಳಿಗೆ ಇಳಿದಿರುವ ಇವರು ಇನ್ನುಮುಂದೆ ಸುಪ್ರೀಂ ಕೋರ್ಟ್ ಛೀಮಾರಿಯ ವಿರುದ್ಧವೂ ಬೀದಿಗಿಳಿದು 'ಭಾರತದ ಸರ್ವೋಚ್ಛ ನ್ಯಾಯಾಲಯವೂ ಕೂಡ ಪಕ್ಷಪಾತಿ ಎಂದು ಆರೋಪಿಸಿದರೂ ಅದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿಯವರಿಗೆ ಭಾರತೀಯ ಮನಸ್ಥಿತಿ ಇಲ್ಲದಿರುವ ವಿಷಯದ ಮೇಲೆ ಸುಪ್ರೀಂಕೋರ್ಟ್ ಇಂದು ಬೆಳಕು ಚೆಲ್ಲಿದೆ. ರಾಹುಲ್ ಗಾಂಧಿ ಅವರ ರಾಷ್ಟ್ರ ಬದ್ಧತೆ ಹಾಗೂ ಕಾಳಜಿ ಕೃತಕವಾದದ್ದು ಹಾಗೂ ಭಾರತೀಯ ಹಿತಾಸಕ್ತಿಗೆ ವಿರುದ್ಧವಾದುದು ಎಂಬುದು ಇಂದಿನ ಸರ್ವೋಚ್ಛ ನ್ಯಾಯಾಲಯದ ಅಭಿಪ್ರಾಯ ಸಾಕ್ಷೀಕರಿಸಿದೆ. ಈ ಹಿನ್ನಲೆಯಲ್ಲಿ ಕೂಡಲೇ ರಾಹುಲ್ ಗಾಂಧಿಯವರು ದೇಶದ ಜನತೆಯಲ್ಲಿ ಕ್ಷಮೆಯಾಚಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
ಭಾರತ-ಚೀನಾ ಗಡಿ ವಿಚಾರದಲ್ಲಿ ನಿರಾಧಾರ ಹೇಳಿಕೆಗಳನ್ನು ಕೊಡುತ್ತಾ ದೇಶದ ಜನರನ್ನು ದಿಕ್ಕು ತಪ್ಪಿಸಲು ನಿರಂತರ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಾನ್ಯ ಸುಪ್ರೀಂ ಕೋರ್ಟ್ ಅತ್ಯಂತ ಕಟು ಶಬ್ದಗಳಲ್ಲಿ ಛೀಮಾರಿ ಹಾಕಿರುವುದು ಸ್ವಾಗತಾರ್ಹ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ನೇತೃತ್ವದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಸತತವಾಗಿ ಉಂಟಾಗುತ್ತಿರುವ ಸೋಲುಗಳಿಂದ ಭ್ರಮನಿರಸನಗೊಂಡಿರುವ ರಾಹುಲ್ ಗಾಂಧಿ ಅವರ ರಾಜಕೀಯ ಹತಾಶೆ, ಖಿನ್ನತೆ ಪರಾಕಾಷ್ಠೆಗೆ ತಲುಪಿದ್ದು, ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಮೇಲಿನ ಸಿಟ್ಟು, ದ್ವೇಷ ಅವರಲ್ಲಿ ಒಂದು ರೀತಿ ದೇಶವಿರೋಧಿ ಮಾನಸಿಕತೆ ಹುಟ್ಟುಹಾಕಿದೆ ಎಂದು ಅನಿಸುತ್ತಿದೆ. ಇದನ್ನೇ ಮಾನ್ಯ ಸುಪ್ರೀಂಕೋರ್ಟ್ ಕೂಡ ಸೂಕ್ಷ್ಮವಾಗಿ ಹೇಳಿದೆ ಎಂದಿದ್ದಾರೆ. ನಮ್ಮ ದೇಶದ ಸಾರ್ವಭೌಮತೆ, ಸ್ವಾಭಿಮಾನ, ವರ್ಚಸ್ಸು, ಪ್ರತಿಷ್ಠೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಪದೇ ಪದೇ ನೀಡುತ್ತಲೇ ಬಂದಿರುವ ರಾಹುಲ್ ಗಾಂಧಿ ಅವರು ಇನ್ನು ಮೇಲಾದರೂ ಒಬ್ಬ ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ವರ್ತಿಸಲಿ ಎನ್ನುವುದೇ ಭಾರತೀಯರ ಆಗ್ರಹ ಎಂದಿದ್ದಾರೆ.












Click it and Unblock the Notifications