ವೈದ್ಯಕೀಯ ಪರೀಕ್ಷೆಗೆ ತಡೆ ಕೋರಿ ಶ್ರೀಗಳು ಹೈಕೋರ್ಟ್‌ಗೆ
ಬೆಂಗಳೂರು, ಸೆಪ್ಟೆಂಬರ್ 24 : ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಸಿಐಡಿ ನೀಡಿರುವ ನೋಟಿಸನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸೆ.26ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.
ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವೀರ್ಯ ಪರೀಕ್ಷೆಗೆ ಹಾಜರಾಗುವಂತೆ ಸಿಐಡಿ ಸ್ವಾಮೀಜಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಜನನಾಂಗದ ಬಾಹ್ಯ ಪರೀಕ್ಷೆಯಿಂದ ಧರ್ಮ ಪರಿಪಾಲನೆಗೆ ಅಡ್ಡಿಯಾಗುತ್ತದೆ ಎಂದು ಅರ್ಜಿದಾರರು ದೂರಿದ್ದಾರೆ.[ಶ್ರೀಗಳ ಜಾಮೀನು ಅರ್ಜಿ ಸೆ.30ಕ್ಕೆ ತೀರ್ಪು]

ರಾಘವೇಶ್ವರ ಶ್ರೀಗಳ ಪರವಾಗಿ ಪಿ.ಎನ್. ಮನಮೋಹನ್ ಅವರು ಅರ್ಜಿ ಸಲ್ಲಿಸಿದ್ದು, ಬುಧವಾರವೇ ಅರ್ಜಿಯ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ಪೀಠಕ್ಕೆ ಮೌಖಿಕವಾಗಿ ಮನವಿ ಸಲ್ಲಿಸಿದರು. ಆದರೆ, ನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದರು. [ರಾಘವೇಶ್ವರ ಶ್ರೀಗಳಿಗೆ 13 ಪರೀಕ್ಷೆ ಮಾಡಲಾಗಿದೆ]
ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಸೆ.21ರಂದು ಸಿಐಡಿ ಶ್ರೀಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ಸೆ.30ರಂದು ಬೆಳಗ್ಗೆ 9 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ['ಶ್ರೀಗಳಿಗೆ ಮುಜುಗರವಾಗುವಂಥ ಪರೀಕ್ಷೆ ಮಾಡಿಲ್ಲ']
ಈ ನೋಟಿಸ್ ಪ್ರಶ್ನಿಸಿ ಶ್ರೀಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರ ಏಕಸದಸ್ಯ ಪೀಠದ ಮುಂದೆ ಸೆ.26ರ ಶನಿವಾರ ನಡೆಯಲಿದೆ. ಈ ಪ್ರಕರಣದಲ್ಲಿ ಈಗಾಗಲೇ ಕೆಲವು ವೈದ್ಯಕೀಯ ಪರೀಕ್ಷೆಗೆ ಶ್ರೀಗಳು ಒಳಗಾಗಿದ್ದಾರೆ. ಈಗ ಪುನಃ ಸಿಐಡಿ ಪರೀಕ್ಷೆಗೆ ಹಾಜರಾಗುವಂತೆ ನೋಟಿಸ್ ನೋಡಿರುವುದು ತಪ್ಪು ಎಂದು ಶ್ರೀಗಳ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಂದಹಾಗೆ ಯಕ್ಷಗಾನ ಕಲಾವಿದೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳ ವೈದ್ಯಕೀಯ ಪರೀಕ್ಷೆ ಬಾಕಿ ಇದೆ. ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಶ್ರೀಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಸೆ.30 ರಂದು ಸೆಷೆನ್ಸ್ ಕೋರ್ಟ್‌ನಲ್ಲಿ ತೀರ್ಪು ಪ್ರಕಟಗೊಳ್ಳಲಿದೆ.












Click it and Unblock the Notifications