ಟಿಪ್ಪುವನ್ನು ಉರಿಗೌಡ ಕೊಂದಿದ್ದು ಎಂದು ಅಶ್ವತ್ಥನಾರಾಯಣ, ಅಶೋಕ್ ಸಂಶೋಧನೆ ನಡೆಸಿದ್ದಾರೆ: ಮುನಿರತ್ನ
ಕುಮಾರಸ್ವಾಮಿಯವರಿಗೆ ಯಾಕೆ ಅನುಮಾನ ಎಂಬುದು ಗೊತ್ತಾಗುತ್ತಿಲ್ಲ ಎಂದು ಮುನಿರತ್ನ ಕಿಡಿಕಾರಿದ್ದಾರೆ.
ಕೋಲಾರ,ಮಾರ್ಚ್ 16: ವಿಧಾನಸಭಾ ಚುನಾವಣೆ ಹೊತ್ತಲ್ಲಿ ಅಬ್ಬರ ಪ್ರಚಾರದ ನಡುವೆ ಟಿಪ್ಪು ಸುಲ್ತಾನ್ ವಿಚಾರ ಸಾಕಷ್ಟು ಸದ್ದು ಮಾಡಿದ್ದು, ಟಿಪ್ಪು ಸುಲ್ತಾನ್ ಎನ್ನು ಒಕ್ಕಲಿಗರಾದ ಉರಿಗೌಡ ಮತ್ತು ನಂಜೇಗೌಡ ಅವರೇ ಕೊಂಡಿದ್ದಾರೆ ಎಂಬ ಹೇಳಿಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇತ್ತ ಟಿಪ್ಪು ಸುಲ್ತಾನ್ ರನ್ನು ಒಕ್ಕಲಿಗರಾದ ಉರಿಗೌಡ ಮತ್ತು ನಂಜೇಗೌಡ ಅವರೇ ಕೊಂದಿದ್ದು ಎಂದು ನಮ್ಮ ಬಿಜೆಪಿ ಪಕ್ಷದ ಸಚಿವರಾದ ಅಶ್ವತ್ಥನಾರಾಯಣ ಮತ್ತು ಆರ್.ಅಶೋಕ್ ಅವರು ಬಹಳಷ್ಟು ಸಂಶೋಧನೆ ಮಾಡಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೂ ಈ ವಿಚಾರದಲ್ಲಿ ಕುಮಾರಸ್ವಾಮಿಯವರಿಗೆ ಯಾಕೆ ಅನುಮಾನ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಚಿವ ಮುನಿರತ್ನ ಹೇಳಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇತಿಹಾಸವನ್ನು ಯಾರೂ ತಿರುಚೋಕೆ ಆಗುವುದಿಲ್ಲ. ಸಚಿವರಾದ ಅಶೋಕ್ ಮತ್ತು ಅಶ್ವತ್ಥನಾರಾಯಣ ಅವರು ಬಹಳಷ್ಟು ಸಂಶೋಧನೆ ಮಾಡಿ ಇವರೇ ಕೊಂದಿದ್ದು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇಷ್ಟು ದಿನ ಬೇರೆಯವರು ಸತ್ಯ ಮುಚ್ಚಿಟ್ಟಿದ್ದರು. ಈಗ ಸತ್ಯ ಹೊರಗಡೆ ಬಂದಿದೆ. ಅದಕ್ಕೆ ಅವರಿಗೆ ಸಹಿಸಿಕೊಳ್ಳೋದಕ್ಕೆ ಆಗ್ತಿಲ್ಲ. ನಾವು ಹೇಳುತ್ತಿರುವುದು ಹೊಸ ಇತಿಹಾಸವಲ್ಲ. ಮುಚ್ಚಿಹೋಗಿರುವ ಹಳೆಯ ಇತಿಹಾಸ ಈಗ ಹೊರಗಡೆ ಬರುತ್ತಿದೆ ಎಂದರು.
ಸಚಿವ ವಿ.ಸೋಮಣ್ಣ ಅವರಿಗೆ ಅಸಮಾಧಾನ ಇದೆ ಎಂದು ಯಾರು ಹೇಳಿದ್ದು? ಕೆಲವೊಮ್ಮೆ ಆನಂದಕ್ಕೂ ಕಣ್ಣಲ್ಲಿ ನೀರು ಬರುತ್ತೆ. ಅದನ್ನು ದುಃಖದ ಕಣ್ಣೀರು ಎಂದುಕೊಳ್ಳಬಾರದು. ಸೋಮಣ್ಣ ಅವರ ಮಗನ ಬಗ್ಗೆಯೂ ನನಗೆ ಗೌರವ ಇದೆ. ಅವರು ಮಾತನಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದರು.

ಆರ್. ಶಂಕರ್ ಅವರ ಮನೆಯ ಮೇಲೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿ ಮಾಡಿದ್ರೆ ಅದಕ್ಕೆ ಸರಿಯಾದ ದಾಖಲೆಗಳನ್ನು ಕೊಡಬೇಕು. ಎಲ್ಲಾ ಕಡೆಯೂ ಐಟಿ ದಾಳಿಯಾಗುತ್ತಿರುತ್ತದೆ. ದಾಳಿಗೆ ಒಳಪಟ್ಟವರು ದಾಖಲೆ ಕೊಡಬೇಕಾದ್ದು ಅವರ ಕರ್ತವ್ಯ ಎಂದರು.
ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯನವರ ಅಲೆಯೇ ಇಲ್ಲ. ಕೋಲಾರದಲ್ಲಿ ಬಿಜೆಪಿ ಅಲೆ ಮಾತ್ರ ಇರುವುದು. ಬಿಜೆಪಿ ಅಭ್ಯರ್ಥಿಯನ್ನು ಸೂಕ್ತ ಸಮಯಕ್ಕೆ ನಮ್ಮ ಪಕ್ಷ ಘೋಷಣೆ ಮಾಡುತ್ತೆ. ಆಗ ಹುಲಿಯನ್ನು ಬಿಡಬೇಕೋ ಸಿಂಹವನ್ನು ಬಿಡಬೇಕೋ ಬಿಟ್ಟೇ ಬಿಡುತ್ತೇವೆ. ಇದು ಸಿನಿಮಾಗೆ ಸಂಬಂಧಿಸಿದ ಚುನಾವಣೆ ಅಲ್ಲ ಎಂದರು. ಇನ್ನು ಕೋಲಾರದಲ್ಲಿ ಕಾರಣಾಂತರಗಳಿಂದ ವಿಜಯ ಸಂಕಲ್ಪ ಯಾತ್ರೆ ರದ್ದಾಗಿದ್ದು, ಮುಂದಿನ ದಿನಗಳಲ್ಲಿ ಯಾತ್ರೆ ಮಾಡುತ್ತೇವೆಂದರು. ವಿಜಯ ಸಂಕಲ್ಪ ಯಾತ್ರೆಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.












Click it and Unblock the Notifications