20 ಕಾಲೇಜುಗಳಿಗೆ ಪತ್ರಿಕೆ ಮಾರಿದ್ದ ಶಿವಕುಮಾರ ಸ್ವಾಮಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 03 : ಶಿವಕುಮಾರ ಸ್ವಾಮಿ ಸಿಕ್ಕಿಬಿದ್ದಿರುವುದು ಸಿಐಡಿ ಪೊಲೀಸರ ಪಾಲಿಗೆ ಭರ್ಜರಿ ಬೇಟೆ. ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಇದೊಂದು ಮಹತ್ವದ ಮುನ್ನಡೆ. ಮಾರ್ಚ್ 31ರ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಿರುಗಾಡುತ್ತಿದ್ದ ಶಿವಕುಮಾರಸ್ವಾಮಿ ಹೊಸೂರಿನ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಂಗ್ ಪಿನ್ ಶಿವಕುಮಾರ ಸ್ವಾಮಿ 20ಕ್ಕೂ ಹೆಚ್ಚು ಕಾಲೇಜುಗಳಿಗೆ ಪತ್ರಿಕೆಗಳನ್ನು ಮಾರಾಟ ಮಾಡಿದ್ದ. ಈತನ ಕೈಗೆ ಪತ್ರಿಕೆ ಸಿಕ್ಕಿದ್ದು ಹೇಗೆ? ಎಂಬ ಕುರಿತು ಸಿಐಡಿ ಪೊಲೀಸರು ಈಗ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ. [ಪತ್ರಿಕೆ ಸೋರಿಕೆ : ರಸಾಯನಶಾಸ್ತ್ರ ಉಪನ್ಯಾಸಕನ ಬಂಧನ]

shivakumar

ಮಾರ್ಚ್ 31ರಂದು 2ನೇ ಬಾರಿ ಪಿಯುಸಿ ಪತ್ರಿಕೆ ಸೋರಿಕೆಯಾದ ತಕ್ಷಣ ಶಿವಕುಮಾರ ಸ್ವಾಮಿ ಬೆಂಗಳೂರು ತೊರೆದಿದ್ದ. ನಂದಿನಿ ಲೇಔಟ್‌ನಲ್ಲಿರುವ ಮನೆಗೆ ಬೀಗ ಹಾಕಿ, ತಲೆ ಮರೆಸಿಕೊಂಡಿದ್ದ. ಆತನ ಮೊಬೈಲ್ ಕೊನೆಯ ಬಾರಿ ಬಳಕೆಯಾಗಿದ್ದು ಕೇರಳದಲ್ಲಿ. ಆನಂತರ ಮೊಬೈಲ್‌ ಕೂಡಾ ಸ್ವಿಚ್ ಆಫ್ ಮಾಡಿದ್ದ ಆತ ಸಿಐಡಿ ಪೊಲೀಸರ ಕೈಗೆ ಸಿಗದೆ ತಲೆ ತಪ್ಪಿಸಿಕೊಂಡಿದ್ದ.[ಪತ್ರಿಕೆ ಸೋರಿಕೆ, 11 ಖಾಸಗಿ ಕಾಲೇಜುಗಳ ಮೇಲೆ ಸಿಐಡಿ ದಾಳಿ]

ಈಗ ಜಾಮೀನು ಸಿಗುವುದಿಲ್ಲ : ಶಿವಕುಮಾರ್ 2008ರಿಂದಲೂ ಪತ್ರಿಕೆ ಬಯಲು ಮಾಡುವ ದಂಧೆಯಲ್ಲಿದ್ದ. ಆಗ ಜೈಲು ಸೇರಿದರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ಈ ಬಾರಿ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ಜಾಮೀನು ಪಡೆಯುವುದು ಕಷ್ಟ. [ಪತ್ರಿಕೆ ಹಗರಣದಲ್ಲಿ ಕೋಕಾ ಪ್ರಯೋಗ, ಏನಿದು ಕೋಕಾ?]

ಪೊಲೀಸರ ಪ್ರಕಾರ ಶಿವಕುಮಾರ್ 2008ರಿಂದ ಪ್ರಶ್ನೆ ಪತ್ರಿಕೆ ಬಹಿರಂಗ ಮಾಡುವ ದಂಧೆಯಲ್ಲಿದ್ದಾನೆ. ಎಂಬಿಬಿಎಸ್, ಇಂಜಿನಿಯರಿಂಗ್, ಕೆಪಿಎಸ್‌ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆಯೂ ಶಿವಕುಮಾರ್ ಕೈವಾಡವಿದೆ.

ಮೊದಲು ಉಪನ್ಯಾಸಕನಾಗಿದ್ದ ಶಿವಕುಮಾರಸ್ವಾಮಿ 2008ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ. ಅಂದಿನಿಂದಲೂ ಪತ್ರಿಕೆ ಸೋರಿಕೆ ಮಾಡುವುದೇ ಈತನ ಕಾಯಕವಾಗಿತ್ತು. ಈ ಬಾರಿಯು ವಿವಿಧ ಕಾಲೇಜುಗಳಿಗೆ ಶಿವಕುಮಾರ ಸ್ವಾಮಿಯೇ ಪತ್ರಿಕೆ ಮಾರಾಟ ಮಾಡಿದ್ದ. ಆದರೆ, ಆತನಿಗೆ ಪತ್ರಿಕೆ ನೀಡಿದವರು ಯಾರು? ಎಂಬುದು ತನಿಖೆಯಿಂದ ಬಹಿರಂಗವಾಗಬೇಕು.

ಶಿವಕುಮಾರಸ್ವಾಮಿಯಿಂದ ಪತ್ರಿಕೆ ಖರೀದಿ ಮಾಡಿದ್ದ ಕಾಲೇಜುಗಳ ಪಟ್ಟಿಯನ್ನು ಸಿಐಡಿ ಪೊಲೀಸರು ಸಿದ್ಧಪಡಿಸಿದ್ದಾರೆ. ಬೆಂಗಳೂರು ನಗರ ಮಾತ್ರವಲ್ಲದೇ ಬೇರೆ-ಬೇರೆ ನಗರದ ಕಾಲೇಜುಗಳು ಪತ್ರಿಕೆ ಖರೀದಿ ಮಾಡಿದ್ದವು. ಈ ಕಾಲೇಜುಗಳ ಬಗ್ಗೆ ಶಿವಕುಮಾರ ಸ್ವಾಮಿ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The CID in Karnataka has its task cut out with the arrest of Shivakumar, the alleged kingpin in the II PU question paper leak case. The colleges that he had supplied the papers to and the board officials from where he managed to source the papers are all under the purview of the investigation being conducted by the CID.
Please Wait while comments are loading...