Puneeth Rajkumar : ಕರ್ನಾಟಕ ಸರಕಾರದಿಂದ ಪುನೀತ್ ರಾಜ್‌ಕುಮಾರ್ ಜನ್ಮದಿನಕ್ಕೆ ಬೆಲೆಕಟ್ಟಲಾಗದ ಗಿಫ್ಟ್
ಬೆಂಗಳೂರು, ಸೆಪ್ಟೆಂಬರ್ 16: ಸಾವಿರಾರು ಯುವಕರಿಗೆ ಸ್ಪೂರ್ತಿಯಾಗಿದ್ದ ದಿವಂಗತ ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಶೀಘ್ರದಲ್ಲಿ ವರ್ಷ ತುಂಬಲಿದೆ. ಇದೀಗ ಅವರ ಜನ್ಮದಿನವನ್ನು ಸ್ಫೂರ್ತಿಯ ದಿನವನ್ನಾಗಿ ಸರಕಾರದ ವತಿಯಿಂದಲೇ ರಾಜ್ಯದಾದ್ಯಂತ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕರ್ನಾಟಕದಾದ್ಯಂತ ಎಲ್ಲಾ ವಯಸ್ಸಿನ ಅಭಿಮಾನಿಗಳನ್ನು ಪಡೆದಿದ್ದ ಅಪ್ಪು ಇಂದು ಜೀವಂತವಿಲ್ಲದಿದ್ದರು ಅವರ ಸಾಮಾಜಿಕ ಕಾರ್ಯಗಳೂ ಇಂದಿಗೂ ಜೀವಂತವಾಗಿದೆ. ಅವುಗಳು ಸಾವಿರಾರು ಯುವಕರಿಗೆ ಸ್ಪೂರ್ತಿಯಾಗಿವೆ. ಹಾಗಾಗಿ ಪುನೀತ್‌ಗೆ ಸಿಗುತ್ತಿದ್ದ ಗೌರವಗಳು ದಿವಂಗತರಾದ ನಂತರವೂ ಮುಂದುವರಿಯುತ್ತಾ ಹೋಗುತ್ತಿವೆ.
ಇದೀಗ ಸ್ವತಃ ಕರ್ನಾಟಕ ಸರಕಾರವೇ ಕನ್ನಡದ ಮೇರುನಟನ ಜನ್ಮದಿನವಾದ ಮಾರ್ಚ್ 17ನ್ನು ರಾಜ್ಯಾಧ್ಯಂತ ಸ್ಫೂರ್ತಿ ದಿನವಾಗಿ ಆಚರಿಸಲು ನಿರ್ಧರಿಸಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಡಾ.ರಾಜ್ ಕುಮಾರ್ ಆರ್ಯ ಈಡಿಗ ಸಮಾಜದ ದೊಡ್ಡ ಶಕ್ತಿಯಾಗಿದ್ದರು, ಪುತ್ರ ಪುನೀತ್ ಅತ್ಯಂತ ನಾಡಿನ ಆಪ್ತರಾಗಿದ್ದರು. ನವೆಂಬರ್ 1ರಂದು 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಪ್ಪು ಜನ್ಮದಿನವಾದ ಮಾರ್ಚ್ 17ರಂದು ಸ್ಫೂರ್ತಿಯ ದಿನವನ್ನಾಗಿ ಆಚರಿಸಲಾಗುವುದು' ಎಂದು ತಿಳಿಸಿದರು.

ಮಂತ್ರಿ ಸ್ಕ್ವೇರ್ ಮೆಟ್ರೊ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು
ಆರ್ಯ ಈಡಿಗ ಕೇಂದ್ರ ಸಂಘದ ಸಮೀಪದಲ್ಲಿರುವ ಮಂತ್ರಿ ಸ್ಕ್ವೇರ್ ಮೆಟ್ರೊ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಲು ಕ್ರಮವಹಿಸಲಾಗುವುದು. ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಕಂತುಗಳಲ್ಲಿ 5 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗುವುದು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ಕೇಂದ್ರಗಳ ನಿರ್ಮಾಣಕ್ಕೆ ಸೋಲೂರಿನಲ್ಲಿರುವ ನಾರಾಯಣಗುರು ಮಠಕ್ಕೆ ಹೊಂದಿಕೊಂಡಿರುವ ಗೋಮಾಳ ಜಾಗದಲ್ಲಿ 10 ಎಕರೆ ಮಂಜೂರಾತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸಚಿವ ಸುನೀಲ್ ಕುಮಾರ್ ಟ್ವೀಟ್
ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು, ' ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ನುಮುಂದೆ ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ' ಎಂದು ಬರೆದುಕೊಂಡಿದ್ದಾರೆ.












Click it and Unblock the Notifications