ಪಿಎಸ್ಐ ಹಗರಣ; ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ತಾಕೀತು
ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಪಿಎಸ್‌ಐ ನೇಮಕ ಹಗರಣದ ಸಂಬಂಧ ತನಿಖಾ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ಬೆಂಗಳೂರು, ಫೆಬ್ರವರಿ 03; ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕ ಹಗರಣಕ್ಕೆ ಸಂಬಂಧ ತನಿಖಾ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಹಗರಣದ ಸಂಬಂಧ ದಾಖಲಾಗಿರುವ ಎಫ್‌ಐರ್ ಮತ್ತು ದೂರುಗಳ ತನಿಖಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಈ ಆದೇಶ ಮಾಡಿದೆ.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಹಾಗೂ ಸಿಐಡಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ಪ್ರಕರಣದ ಬಗ್ಗೆ 4 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಅಲ್ಲದೇ, ಪಿಎಸ್‌ಐ ನೇಮಕಾತಿ ಹಗರಣ ಮತ್ತು ದಾಖಲಾದ ಪ್ರಕರಣಗಳಿಂದ ಸಂಬಂಧಿಸಿದ ಈವರೆಗಿನ ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ನ್ಯಾಯಪೀಠ ಸೂಚಿಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಗರಣದ ಪ್ರಮುಖ ಆರೋಪಿ ಆರ್. ಡಿ. ಪಾಟೀಲ್ ಇತ್ತೀಚಿಗೆ ಆಡಿಯೋ ಬಿಡುಗಡೆಗೊಳಿಸಿರುವ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಆಗ ನ್ಯಾಯಪೀಠ, ಪ್ರಕರಣದಲ್ಲಿ ನೋಟಿಸ್ ಜಾರಿಗೆ ಆದೇಶಿಸಲಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಂದ ಪ್ರತಿಕ್ರಿಯೆ ಬರಲಿ ಎಂದು ವಿಚಾರಣೆ ಮುಂದೂಡಿತು.
ಪ್ರಕರಣದ ಬೆಳಕಿಗೆ ಬಂದ ನಾಲ್ಕೂವರೆ ತಿಂಗಳಾದರೂ ದೂರು ದಾಖಲಾಗಿರಲಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ವ್ಯಾಪಕವಾಗಿ ಚರ್ಚೆಗೆ ಬಂತು. ಆಂತರಿಕ ತನಿಖೆ ನಡೆಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲಎಂದು ಸರ್ಕಾರ ಹೇಳಿತ್ತು. ಆದರೆ, ಅಕ್ರಮ ನಡೆದ ಒಂದೊಂದು ಬಗೆ ಹೊರಬೀಳಲಾರಂಭಿಸಿತು. ಆದಾಗ್ಯೂ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಸೂಕ್ತ ಕ್ರಮ ಜರುಗಿಸಿಲ್ಲಎಂದು ಆಕ್ಷೇಪಿಸಿದರು.
ಈ ಅರ್ಜಿಯು ಜ.27ರಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ, ಅರ್ಜಿಯನ್ನು ಬೇರೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವಂತೆ ಸಿಜೆ ನೇತೃತ್ವದ ನ್ಯಾಯಪೀಠ ಸೂಚನೆ ನೀಡಿತ್ತು.
ಅರ್ಜಿದಾರರ ವಾದವೇನು?; ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ ಈವರೆಗೆ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್ ಮತ್ತು ದೂರುಗಳಿಗೆ ಸಂಬಂಧಿಸಿದ ಸಂಪೂರ್ಣ ತನಿಖಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿಐಡಿಗೆ ಆದೇಶಿಸಬೇಕು.
ಪ್ರಕರಣದ ತನಿಖೆ ನಡೆಸಿರುವ ಸಿಐಡಿಗೆ ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪೌಲ್ ಬಂಧನದ ಬಳಿಕದ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲು ನಿರ್ದೇಶಿಸಬೇಕು. ನ್ಯಾಯಯುತ, ಸ್ವಾತಂತ್ರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ಮತ್ತು ಸಿಐಡಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications